Site icon Vistara News

Kargil Vijay Diwas 2024: ಕಾರ್ಗಿಲ್ ಯುದ್ಧದಲ್ಲಿ ತತ್ತರಿಸಿದ ಪಾಕಿಗಳು; ಈ ನಾಲ್ವರು ಯೋಧರ ಸಾಹಸ ರೋಚಕ!

Kargil Vijay Diwas 2024

ಜಮ್ಮು ಕಾಶ್ಮೀರದ (jammu and kashmir) ಕಾರ್ಗಿಲ್‌ನಲ್ಲಿ (Kargil Vijay Diwas 2024) 1999ರ ಮೇ ತಿಂಗಳಿನಲ್ಲಿ ಪಾಕಿಸ್ತಾನದ (pakistan army) ದಾಳಿಕೋರರು ಮತ್ತು ಭಾರತೀಯ ಸೇನೆಯ (indian army) ನಡುವೆ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತ್ಯದವರೆಗೆ ಅಂದರೆ ಸುಮಾರು ಮೂರು ತಿಂಗಳ ಕಾಲ ನಡೆಯಿತು. ಈ ಯುದ್ಧದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಸೈನಿಕರು ಮತ್ತು ಭಯೋತ್ಪಾದಕರನ್ನು ಬಗ್ಗುಬಡಿದು ವಿಜಯ ಸಾಧಿಸಿತ್ತು. ಆದರೆ ಈ ಸಾಹಸದಲ್ಲಿ ಅನೇಕ ಭಾರತೀಯ ಯೋಧರು ಹುತಾತ್ಮರಾದರು.

ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸಲು ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ ಅನ್ನು ಆಚರಿಸಲಾಗುತ್ತದೆ. ಕಾರ್ಗಿಲ್ ಯುದ್ಧದಲ್ಲಿ ಹಲವಾರು ಸೇನಾ ನಾಯಕರು ದೇಶವೇ ಹೆಮ್ಮೆಪಡುವಂತಹ ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ್ದರು. ಕಾರ್ಗಿಲ್‌ನ ಡ್ರಾಸ್‌ ಪ್ರದೇಶದಲ್ಲಿ ಪಾಕಿಸ್ತಾನಿ ದಾಳಿಕೋರರು ವಶಪಡಿಸಿಕೊಂಡ ಪ್ರದೇಶಗಳನ್ನು ಹಿಂಪಡೆಯಲು 1999ರಲ್ಲಿ ಪ್ರಾರಂಭಿಸಲಾದ ‘ಆಪರೇಷನ್ ವಿಜಯ್’ನ ಯಶಸ್ಸನ್ನು ಕಾರ್ಗಿಲ್ ವಿಜಯ್ ದಿನವು ಸೂಚಿಸುತ್ತದೆ.
ಕಾರ್ಗಿಲ್ ಯುದ್ಧದ ಸಮಯದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕ ಶಾಂತಿಯಿಂದ ಮಲಗಲು ಸೇನಾ ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅವರ ಶೌರ್ಯ, ಧೈರ್ಯ ಮತ್ತು ಉತ್ಸಾಹದ ಕಥೆಗಳು ಕೇವಲ ನಮ್ಮನ್ನು ಹೆಮ್ಮೆ ಪಡುವಂತೆ ಮಾಡುವುದು ಮಾತ್ರವಲ್ಲ, ನಮ್ಮ ಕಣ್ಣುಗಳು ತೇವಗೊಳ್ಳುವಂತೆ ಮಾಡುತ್ತದೆ. ಅಂತಹ ಕಾರ್ಗಿಲ್ ವೀರರ ಕಥೆಗಳು ಇಲ್ಲಿದೆ.

Kargil Vijay Diwas


ಕ್ಯಾಪ್ಟನ್ ವಿಕ್ರಮ್ ಬಾತ್ರಾ

1974ರ ಸೆಪ್ಟೆಂಬರ್ 9ರಂದು ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜನಿಸಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ತಾಯಿ ಕಮಲ್ ಕಾಂತ ಶಾಲಾ ಶಿಕ್ಷಕಿಯಾಗಿದ್ದು, ತಂದೆ ಗಿರಿಧಾರಿ ಲಾಲ್ ಬಾತ್ರಾ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು.


1996ರ ಜೂನ್‌ನಲ್ಲಿ ಮಾಣೆಕ್‌ ಶಾ ಬೆಟಾಲಿಯನ್‌ನಲ್ಲಿ ಐಎಂಎಗೆ ಸೇರಿದ ವಿಕ್ರಮ್ ಬಾತ್ರಾ ತಮ್ಮ 19 ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದ ಅನಂತರ 1997ರ ಡಿಸೆಂಬರ್ 6ರಂದು ಐಎಂಎನಿಂದ ಪದವಿ ಪಡೆದರು. ಅವರನ್ನು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ 13ನೇ ಬೆಟಾಲಿಯನ್‌ಗೆ ಲೆಫ್ಟಿನೆಂಟ್ ಆಗಿ ನಿಯೋಜಿಸಲಾಯಿತು. ತರಬೇತಿ ಮತ್ತು ಹಲವಾರು ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅನಂತರ ಅವರ ಬೆಟಾಲಿಯನ್, 13 ಜಮ್ಮು ಆಂಡ್ ಕಾಶ್ಮೀರ್ ರೈಫಲ್ಸ್ ನ ಉತ್ತರ ಪ್ರದೇಶದ ಶಹಜಹಾನ್‌ಪುರಕ್ಕೆ ಹೋಗಲು ಆದೇಶವನ್ನು ಪಡೆದರು. ಜೂನ್ 5ರಂದು ಬೆಟಾಲಿಯನ್ ಆದೇಶಗಳನ್ನು ಬದಲಾಯಿಸಲಾಯಿತು ಮತ್ತು ಜಮ್ಮು ಮತ್ತು ಕಾಶ್ಮೀರದ ಡ್ರಾಸ್‌ಗೆ ಅವರನ್ನು ಸ್ಥಳಾಂತರಿಸಲು ಆದೇಶಿಸಲಾಯಿತು.

ಕಾರ್ಗಿಲ್ ಯುದ್ಧದ ಹೀರೋ ಎಂದೇ ಕರೆಯಲ್ಪಡುವ ವಿಕ್ರಮ್ ಬಾತ್ರಾ ʼಶಿಖರ 5140ʼ ಅನ್ನು ಪುನಃ ಪಾಕಿಸ್ತಾನಿಯರಿಂದ ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಶಿಖರವನ್ನು ವಶಪಡಿಸಿಕೊಂಡ ಅನಂತರ ಅವರು ವಾಪಸ್‌ ಶಿಬಿರಕ್ಕೆ ಬಂದು ವಿರಾಮ ತೆಗೆದುಕೊಳ್ಳಲು ಅವಕಾಶ ಇತ್ತು. ಆದರೆ ಅವರು ವಿರಮಿಸದೆ ಸ್ವಯಂಪ್ರೇರಣೆಯಿಂದ ಪೀಕ್ 4875 ಶಿಖರವನ್ನು ವಶಪಡಿಸಿಕೊಳ್ಳಲು ಮತ್ತೊಂದು ಕಾರ್ಯಾಚರಣೆಯನ್ನು ಕೈಗೊಂಡರು. ಇದು ಭಾರತೀಯ ಸೇನೆಯು ಪ್ರಯತ್ನಿಸಿದ ಅತ್ಯಂತ ಕಷ್ಟಕರವಾದ ಕಾರ್ಯಾಚರಣೆಗಳಲ್ಲಿ ಒಂದಾಗಿದೆ. ಇದರಲ್ಲಿ ವಿಕ್ರಮ್ ಬಾತ್ರಾ ವೀರಾವೇಶದಿಂದ ಮತ್ತು ಸಾಹಸದಿಂದ ಹೋರಾಡಿ ಹಲವಾರು ವೈರಿ ಸೈನಿಕರನ್ನು ಕೊಂದರು. ಆದರೆ ಅಂತಿಮವಾಗಿ ತಾವು ಹುತಾತ್ಮರಾದರು. ಮರಣೋತ್ತರವಾಗಿ ಅವರಿಗೆ ಭಾರತದ ಅತ್ಯುನ್ನತ ಮತ್ತು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಪರಮ ವೀರ ಚಕ್ರವನ್ನು ನೀಡಿ ಗೌರವಿಸಲಾಯಿತು.


ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರು ಹೇಳುತ್ತಿದ್ದ ಒಂದು ಮಾತನ್ನು ಈಗಲೂ ಅವರ ಮನೆಯವರು ನೆನಪಿಸಿಕೊಳ್ಳುತ್ತಾರೆ. ಒಂದೋ ನಾನು ತ್ರಿವರ್ಣ ಹಾರಿಸಿದ ಅನಂತರ ಹಿಂತಿರುಗುತ್ತೇನೆ ಅಥವಾ ನಾನು ಆ ಧ್ವಜದಲ್ಲಿ ಸುತ್ತಿ ಹಿಂತಿರುಗುತ್ತೇನೆ. ಆದರೆ ನಾನು ಖಂಡಿತವಾಗಿ ಹಿಂತಿರುಗುತ್ತೇನೆ!

Kargil Vijay Diwas


ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್

1980ರ ಮೇ 10ರಂದು ಉತ್ತರ ಪ್ರದೇಶದ ಬುಲಂದ್‌ಶಹರ್‌ನ ಸಿಕಂದರಾಬಾದ್‌ನಲ್ಲಿ ಕರಣ್ ಸಿಂಗ್ ಯಾದವ್ ಮತ್ತು ಸಂತರಾ ದೇವಿ ದಂಪತಿಯ ಮಗನಾಗಿ ಜನಿಸಿದರು. 1999ರ ಆಗಸ್ಟ್ ನಲ್ಲಿ ಪರಮವೀರ ಚಕ್ರ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ. ನಯಾಬ್ ಸುಬೇದಾರ್ ಯೋಗೇಂದ್ರ ಸಿಂಗ್ ಯಾದವ್ ಬೆಟಾಲಿಯನ್ 1999ರ ಜೂನ್ 12ರಂದು ಟೋಲೋಲಿಂಗ್ ಟಾಪ್ ಅನ್ನು ವಶಪಡಿಸಿಕೊಂಡಿತು. ಈ ವೇಳೆ ಇಬ್ಬರು ಅಧಿಕಾರಿಗಳು, 2 ಜೂನಿಯರ್ ಕಮಿಷನ್ಡ್ ಅಧಿಕಾರಿಗಳು ಮತ್ತು 21 ಸೈನಿಕರು ತಮ್ಮ ಪ್ರಾಣ ತ್ಯಾಗ ಮಾಡಿದರು.


ಘಟಕ್ ಪ್ಲಟೂನ್‌ನ ಭಾಗವಾಗಿದ್ದ ಯೋಗೇಂದ್ರ ಸಿಂಗ್ ಯಾದವ್ ಅವರನ್ನು ಟೈಗರ್ ಹಿಲ್‌ನಲ್ಲಿ ಸುಮಾರು 16500 ಅಡಿ ಎತ್ತರದ ಬಂಡೆಯ ಕಡಿದಾದ ಮೇಲ್ಭಾಗದಲ್ಲಿ ನೆಲೆಗೊಂಡಿರುವ ಮೂರು ಆಯಕಟ್ಟಿನ ಬಂಕರ್‌ಗಳನ್ನು ಸೆರೆಹಿಡಿಯಲು ನಿಯೋಜಿಸಲಾಗಿತ್ತು. ಶತ್ರುಗಳು ಬಂಕರ್‌ನಿಂದ ರಾಕೆಟ್ ದಾಳಿ ಮಾಡುತ್ತಿದ್ದರೂ ಅವರು ಹಗ್ಗದ ಸಹಾಯದಿಂದ ಪರ್ವತ ಹತ್ತುತ್ತ ವೈರಿಗಳನ್ನು ಕಂಗೆಡಿಸಿದರು. ಹಲವಾರು ಗುಂಡೇಟು ತಗಲಿದರೂ ನೋವನ್ನು ತೋರ್ಪಡಿಸದೆ ಕಾರ್ಯಾಚರಣೆಯನ್ನು ಮುಂದುವರಿಸಿದರು. ಶತ್ರು ಬಂಕರ್‌ಗೆ ತವಳಿಕೊಂಡು ಹೋಗಿ ಗ್ರೆನೇಡ್ ಹಾರಿಸಿದರು. ಅದು ನಾಲ್ಕು ಪಾಕಿಸ್ತಾನಿ ಸೈನಿಕರನ್ನು ಕೊಂದಿತು ಮತ್ತು ಶತ್ರುಗಳನ್ನು ಹಿಮ್ಮೆಟ್ಟಿಸಿತು. ಇದು ಭಾರತದ ಉಳಿದ ತುಕಡಿಗಳಿಗೆ ಬಂಡೆಯನ್ನು ಏರಲು ಅವಕಾಶ ಮಾಡಿಕೊಟ್ಟಿತು.

ಯಾದವ್ ಹೋರಾಟವನ್ನು ಮುಂದುವರಿಸಿದರು. ಎರಡನೇ ಬಂಕರ್ ಅನ್ನು ಸಹ ಸೈನಿಕರ ಸಹಾಯದಿಂದ ನಾಶಪಡಿಸಿದರು. ಇನ್ನೂ ಹಲವು ಪಾಕಿಸ್ತಾನಿ ಸೈನಿಕರನ್ನು ಕೊಂದರು. ಇದು ತುಕಡಿಯ ಉಳಿದವರಿಗೆ ಆಗಮಿಸಲು ಮತ್ತೊಮ್ಮೆ ಅವಕಾಶವನ್ನು ಒದಗಿಸಿತು. ಈ ರೀತಿಯಾಗಿ ಅವರು ಕಾರ್ಗಿಲ್ ಯುದ್ಧದ ಅತ್ಯಂತ ಕಠಿಣ ಕಾರ್ಯಾಚರಣೆಗಳಲ್ಲಿ ಒಂದರಲ್ಲಿ ಮೇಲುಗೈ ಸಾಧಿಸುತ್ತ ಮುನ್ನಡೆದರು.


ಸಂದರ್ಶನವೊಂದರಲ್ಲಿ ಮಾತನಾಡಿದ್ದ ಯೋಗೇಂದ್ರ ಸಿಂಗ್ ಯಾದವ್, ಸೈನಿಕನು ನಿಸ್ವಾರ್ಥ ಪ್ರೇಮಿಯಂತೆ. ಬೇಷರತ್ತಾದ ಈ ಪ್ರೀತಿಯೊಂದಿಗೆ ದೃಢಸಂಕಲ್ಪ ಬರುತ್ತದೆ ಮತ್ತು ತನ್ನ ರಾಷ್ಟ್ರ, ತನ್ನ ರೆಜಿಮೆಂಟ್ ಮತ್ತು ತನ್ನ ಸಹ ಸೈನಿಕರ ಮೇಲಿನ ಈ ಪ್ರೀತಿಗಾಗಿ ಸೈನಿಕನು ತನ್ನ ಜೀವದ ಬಗ್ಗೆ ಯೋಚಿಸುವುದಿಲ್ಲ ಎಂದು ಹೇಳಿದ್ದರು.

Kargil Vijay Diwas

ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ

1975ರ ಜೂನ್ 25ರಂದು ಉತ್ತರ ಪ್ರದೇಶದ ಸೀತಾಪುರದ ರೂಧಾ ಗ್ರಾಮದಲ್ಲಿ ಗೋಪಿ ಚಂದ್ ಪಾಂಡೆ ಮತ್ತು ಮೋಹಿನಿ ಪಾಂಡೆ ದಂಪತಿಗೆ ಜನಿಸಿದ ಮನೋಜ್ ಕುಮಾರ್ ಪಾಂಡೆ ಅವರು 1/11 ಗೂರ್ಖಾ ರೈಫಲ್ಸ್‌ನ ಸೈನಿಕರಾಗಿದ್ದರು. ಅವರ ತಂದೆಯ ಪ್ರಕಾರ, ಅವರು ಅತ್ಯುನ್ನತ ಶೌರ್ಯ ಪ್ರಶಸ್ತಿಯಾದ ಪರಮವೀರ ಚಕ್ರವನ್ನು ಪಡೆಯುವ ಏಕೈಕ ಗುರಿಯೊಂದಿಗೆ ಭಾರತೀಯ ಸೇನೆಗೆ ಸೇರಿದ್ದರು. ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರವನ್ನು ನೀಡಲಾಯಿತು.


ಕಾರ್ಗಿಲ್ ಯುದ್ಧದಲ್ಲಿ ಶತ್ರು ಪಡೆಗಳನ್ನು ತೆರವುಗೊಳಿಸಲು ಅವರ ತಂಡವನ್ನು ನಿಯೋಜಿಸಲಾಯಿತು. ಒಳನುಗ್ಗುವವರನ್ನು ಹಿಂದಕ್ಕೆ ತಳ್ಳಲು ಅವರು ಸರಣಿ ದಾಳಿಗಳನ್ನು ನಡೆಸಿದರು. ಈ ವೇಳೆ ತೀವ್ರ ಗಾಯಗೊಂಡ ಅವರು ಆಕ್ರಮಣವನ್ನು ಮುಂದುವರಿಸಿದರು. ಇದು ಅಂತಿಮವಾಗಿ ಬಟಾಲಿಕ್ ವಲಯದ ಜೌಬರ್ ಟಾಪ್ ಮತ್ತು ಖಲುಬರ್ ಬೆಟ್ಟವನ್ನು ವಶಪಡಿಸಿಕೊಳ್ಳಲು ಕಾರಣವಾಯಿತು. ಅವರ ಧೈರ್ಯ ಮತ್ತು ನಾಯಕತ್ವಕ್ಕಾಗಿ ಅವರಿಗೆ ಮರಣೋತ್ತರವಾಗಿ ಪರಮವೀರ ಚಕ್ರವನ್ನು ನೀಡಲಾಯಿತು.

Kargil Vijay Diwas


ಲೆಫ್ಟಿನೆಂಟ್ ಬಲ್ವಾನ್ ಸಿಂಗ್

1973ರ ಅಕ್ಟೋಬರ್‌ನಲ್ಲಿ ಹರಿಯಾಣದ ರೋಹ್ಟಕ್ ಜಿಲ್ಲೆಯ ಸಾಸ್ರೌಲಿಯಲ್ಲಿ ಜನಿಸಿದ ಲೆಫ್ಟಿನೆಂಟ್ ಬಲ್ವಾನ್ ಸಿಂಗ್ 1999ರ ಜುಲೈ 3ರಂದು ತನ್ನ ಘಟಕ್ ಪ್ಲಟೂನ್‌ನೊಂದಿಗೆ ಬಹುಮುಖಿ ದಾಳಿಯ ಭಾಗವಾಗಿ ಈಶಾನ್ಯ ದಿಕ್ಕಿನಿಂದ ಟೈಗರ್ ಹಿಲ್‌ನ ಮೇಲೆ ದಾಳಿ ಮಾಡಲು ನಿಯೋಜಿಸಲಾಯಿತು. ಈ ಮಾರ್ಗವು 16,500 ಅಡಿ ಎತ್ತರದಲ್ಲಿದೆ. ಇದು ಹಿಮದಿಂದ ಆವೃತವಾಗಿದೆ. ಅಪಾಯಕಾರಿ ಬಿರುಕುಗಳಿಂದ ಕೂಡಿದ್ದು, ಜಲಪಾತಗಳಿಂದ ಕೂಡಿದೆ.

ಗೊತ್ತುಪಡಿಸಿದ ಸ್ಥಳ ತಲುಪಲು ಅತ್ಯಂತ ಕಷ್ಟಕರವಾದ ಮತ್ತು ಅನಿಶ್ಚಿತ ಮಾರ್ಗದಲ್ಲಿ ಅವರ ತಂಡವು ಫಿರಂಗಿ ಶೆಲ್‌ಗಳ ಮೂಲಕ 12 ಗಂಟೆಗಳ ಕಾಲ ಮುನ್ನಡೆದು ಶತ್ರುಗಳನ್ನು ಆಘಾತಕ್ಕೊಳಗಾಗಿಸಿತು. ಇವರ ಸಾಹಸಮಯ ದಾಳಿ ನೋಡಿದ ಶತ್ರುಗಳು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದರು!

ಇದನ್ನೂ ಓದಿ: Union Budget 2024 Live: ಕಸ್ಟಮ್ಸ್‌ ತೆರಿಗೆ ಇಳಿಸಿದ ಕೇಂದ್ರ; ವೈದ್ಯಕೀಯ ಉಪಕರಣಗಳಿಗೆ ಕಸ್ಟಮ್ಸ್‌ ಸುಂಕದಿಂದ ವಿನಾಯಿತಿ

ಗುಂಡಿನ ಚಕಮಕಿಯಲ್ಲಿ ಲೆಫ್ಟಿನೆಂಟ್ ಬಲ್ವಾನ್ ಸಿಂಗ್ ಗಂಭೀರವಾಗಿ ಗಾಯಗೊಂಡರು. ಆದರೂ ಅವರು ಶತ್ರುವನ್ನು ಮುಗಿಸಲು ನಿರ್ಧರಿಸಿದರು. ಶತ್ರುಗಳನ್ನು ಸುತ್ತುವರಿದು ನಾಲ್ವರನ್ನು ಕೊಂದರು. ಬಲ್ವಾನ್ ಸಿಂಗ್ ನಾಯಕತ್ವ, ಅವರ ಧೈರ್ಯ ಮತ್ತು ಅವರ ಶೌರ್ಯವು ಟೈಗರ್ ಹಿಲ್ ಅನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರ ಧೈರ್ಯ ಮತ್ತು ಶೌರ್ಯಕ್ಕಾಗಿ ಅವರಿಗೆ ಮಹಾವೀರ ಚಕ್ರವನ್ನು ನೀಡಲಾಯಿತು.

Exit mobile version