ನವದೆಹಲಿ: ನವದೆಹಲಿಯಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿಯ ಮಹತ್ವದ ಸಭೆಯಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ 125 ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ (Karnataka Congress) ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯದ ಇನ್ನಿತರೆ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಮೊದಲ ಪಟ್ಟಿ ಬಿಡುಗೆ ಮಾಡುವ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಹಾಲಿ ಶಾಸಕರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನು ಸಭೆಯಲ್ಲಿ ಚರ್ಚಿಸಲಾಗಿದೆ. ಎಲ್ಲ ಶಾಸಕರಿಗೂ ಟಿಕೆಟ್ ನೀಡಬೇಕು ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಒತ್ತಾಯಿಸಿದ್ದಾರೆ.
ಆದರೆ ಗೆಲುವಿನ ಮಾನದಂಡವನ್ನಷ್ಟೆ ಅನುಸರಿಸಬೇಕು ಎಂದು ಹೈಕಮಾಂಡ್ ನಾಯಕರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಆರು ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆಯಿದೆ. ಅಫಜಲಪುರ ಶಾಸಕ ಎಂ.ವೈ. ಪಾಟೀಲ್, ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಪಾವಗಡ ಶಾಸಕ ವೆಂಕಟರಮಣಪ್ಪ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ ಸೇರಿ ಆರು ಶಾಸಕಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಎಲ್ಲವೂ ನಿರೀಕ್ಷೆಯಂತೆಯೇ ನಡೆದರೆ ಶುಕ್ರವಾರ ರಾತ್ರಿ ಅಥವಾ ಶನಿವಾರ ಪಟ್ಟಿ ಬಿಡುಗಡೆಯಾಗಲಿದೆ. ಅಥವಾ ಯುಗಾದಿ ನಂತರ ಪಟ್ಟಿ ಬಿಡುಗಡೆ ಮಾಡಬೇಕು ಎಂದು ತೀರ್ಮಾನ ಮಾಡಲಾಗಿದೆ. ಚುನಾವಣಾ ಸಮಿತಿ ಸಭೆ ನಂತರ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಪ್ರಮುಖ ನಾಯಕರಷ್ಟೆ ಸೇರಿ ಮತ್ತೊಂದು ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಮತ್ತಷ್ಟು ಹೆಸರುಗಳ ಕುರಿತು ತೀರ್ಮಾನ ಮಾಡಲಾಗುತ್ತದೆ ಎನ್ನಲಾಗಿದೆ.
ಇದನ್ನೂ ಓದಿ: R Dhruvanarayana : ಧ್ರುವನಾರಾಯಣ ಪುತ್ರ ದರ್ಶನ್‌ಗೆ ನಂಜನಗೂಡು ಕಾಂಗ್ರೆಸ್ ಟಿಕೆಟ್ ಬಹುತೇಕ ಫಿಕ್ಸ್