ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್(Karnataka Congress) ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇಂದ್ರ ಚುನಾವಣಾ ಸಮಿತಿ ಸಭೆಯು ಶುಕ್ರವಾರ ನಡೆಯಲಿದ್ದು, ಸುಮಾರು 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡುವ ಸಾಧ್ಯತೆಯಿದೆ. ಇಷ್ಟು ದಿನದಿಂದ ಟಿಕೆಟ್‌ಗೆ ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳು ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದು, ಅನೇಕರಲ್ಲಿ ಆತಂಕ ಮನೆಮಾಡಿದೆ.
ನಡೆಸಿರುವ ಸಮೀಕ್ಷೆಯಲ್ಲಿ ನಕಾರಾತ್ಮಕ ವರದಿ ಬಂದಿರುವವರಿಗೆ ಟಿಕೆಟ್ ನೀಡುವುದಿಲ್ಲ ಎಂದು ವರಿಷ್ಠರು ತಿಳಿಸಿದ್ದಾರೆ. ಹೀಗಾಗಿ. 5-8 ಕ್ಷೇತ್ರಗಳ ಹಾಲಿ ಶಾಸಕರ ಹೆಸರು ಪೆಡಿಂಗ್ ಇಡುವ ಸಾಧ್ಯತೆ ಇದೆ. ಹಾಲಿ ಶಾಸಕರು ಇರುವ ಕ್ಷೇತ್ರಗಳಿಗೂ ರಾಜ್ಯ ಕಾಂಗ್ರೆಸ್ ಎರಡು ಹೆಸರು ಶಿಫಾರಸು ಮಾಡಿದೆ. ಇದರಲ್ಲಿ ಕುಂದಗೋಳಕ್ಕೆ ಕುಸುಮಾ ಶಿವಳ್ಳಿ ಜತೆಗೆ ಚಂದ್ರಶೇಖರ್ ಜತ್ತಲ್, ದೊಡ್ಡಬಳ್ಳಾಪುರಕ್ಕೆ ವೆಂಕಟರಮಣಯ್ಯ ಜತೆಗೆ ಬಿ.ಸಿ. ಆನಂದ್, ಪಾವಗಡಕ್ಕೆ ವೆಂಕಟರಮಣಪ್ಪ ಜತೆಗೆ ಎಚ್. ವಿ ವೆಂಕಟೇಶ್, ಲಿಂಗಸುಗೂರಿಗೆ ಡಿ.ಎಸ್. ಹೂಲಗೇರಿ ಜತೆಗೆ ಹಂಪನಗೌಡ ಬಾದರ್ಲಿ, ರುದ್ರಯ್ಯ ಅವರ ಹೆಸರನ್ನೂ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.
ಸಭೆಯ ಕುರಿತು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶುಕ್ರವಾರ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ಬಹುಶಃ ನಾಳೆಯೇ ಅನೇಕ ತೀರ್ಮಾನಗಳು ಆಗಲಿದೆ. ಸಭೆ ಮುಗಿದ ನಂತರ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಲಿದೆ. ಒಂದೆರಡು ದಿನಗಳಲ್ಲಿ ಪಟ್ಡಿ ಬಿಡುಗಡೆಯಾಗಲಿದೆ.
ನೂರಕ್ಕೂ ಹೆಚ್ಚು ಟಿಕೆಟ್ ಘೋಷಿಸಲಿದ್ದಾರೆ. ಗೆಲ್ಲುವವರಿಗೆ ಮಾತ್ರ ಹೈಕಮಾಂಡ್ ಟಿಕೆಟ್ ನೀಡಲಿದೆ. ಸಮುದಾಯ ಮಾನದಂಡವೊಂದನ್ನೇ ಆಧರಿಸಿ ಟಿಕೆಟ್ ನೀಡುವುದಿಲ್ಲ. ಸಮುದಾಯವಾರು ಟಿಕೆಟ್ ಗೆ ಒತ್ತಾಯಿಸುತ್ತಿರಬಹುದು, ಒತ್ತಾಯಿಸುವುದು ತಪ್ಪೇನಲ್ಲ. ಅಂತಿಮವಾಗಿ ಎಲ್ಲವನ್ನೂ ಆಲಿಸಿ ಟಿಕೆಟ್ ಹಂಚಿಕೆ ಮಾಡಲಿದ್ದಾರೆ ಎಂದರು.
ಯಡಿಯೂರಪ್ಪ ಹೊರತಾಗಿ ಬಿಜೆಪಿಯಮ್ನ ಅಧಿಕಾರಕ್ಕೆ ತರುವ ತಾಕತ್ತು ಯಾರಿಗಿದೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯಲ್ಲಿ ಬೇರೆ ಯಾವ ನಾಯಕರೂ ಇಲ್ಲ. ಯಡಿಯೂರಪ್ಪ ಹೋರಾಟದಿಂದ ಬಂದವರು. ಅವರ ವಿರುದ್ಧ ಭ್ರಷ್ಟಾಚಾರದ ಆರೋಪವಿದ್ದರೂ ಹೋರಾಟದ ಹಿನ್ನೆಲೆ ಇದೆ, ಅವರನ್ನ ಅಧಿಕಾರದಿಂದ ಕೆಳಗಿಳಿಸಿ ಅವಮಾನ ಮಾಡಿದ್ದಾರೆ. ಅದೇ ಕಾರಣಕ್ಕೆ ಬಿಜೆಪಿಗೆ ಭಯ ಶುರುವಾಗಿದೆ.
ಲಿಂಗಾಯತ ಸಮುದಾಯದ ಮತಗಳು ಕೈತಪ್ಪಬಹುದೆಂಬ ಭಯ ಶುರುವಾಗಿದೆ. ಈಗಾಗಲೇ ಪಂಚಮಸಾಲಿ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ದಾರಿ ತಪ್ಪಿಸಿ ಸಿಕ್ಕಿಹಾಕಿಕೊಂಡಿದ್ದಾರೆ. ಅದೇ ಕಾರಣಕ್ಕೆ ನಮ್ಮ ವಿರುದ್ಧ ಅದನ್ನ ತಿರುಗಿಸಲು ಹೊರಟಿದ್ದಾರೆ. ಈಗ ಜನರು ಬುದ್ಧಿವಂತರಿದ್ದಾರೆ, ಬಿಜೆಪಿ ಆಡಳಿತವನ್ನ ನೋಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: R Dhruvanarayana : ಧ್ರುವನಾರಾಯಣ ಪುತ್ರ ದರ್ಶನ್‌ಗೆ ನಂಜನಗೂಡು ಕಾಂಗ್ರೆಸ್ ಟಿಕೆಟ್ ಬಹುತೇಕ ಫಿಕ್ಸ್