ನವದೆಹಲಿ: ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರ ಹಾನಿ ಮಾಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ ಟೀಕೆ ಮಾಡಿದ್ದಾರೆ. ಈ ವೇಳೆ ಅವರು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಮುಂದುವರಿಯುವುದೇ ಅನುಮಾನ ಎಂದು ಹೇಳಿದ್ದಾರೆ. ರಾಜಸ್ಥಾನದಲ್ಲಿ ಪಕ್ಷದ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಕುಂಠಿತಗೊಳಿಸಿ ದೇಶವನ್ನು ನಾಶ ಮಾಡುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದೆ. ಅದು ಸರ್ಕಾರ ರಚಿಸುವ ರಾಜ್ಯಗಳು ಪಾಳು ಬೀಳುತ್ತಿವೆ. ಅವರು ಒಳಜಗಳದಲ್ಲಿ ಮಾಡುತ್ತಲೇ ಇರುತ್ತಾರೆ. ಆದರೆ ಜನರಿಗೆ ಇದು ಮಾರಕ ಎಂದು ಮಧ್ಯಪ್ರದೇಶದ ಖಾಂಡ್ವಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ ಹೇಳಿದರು.
“ಕರ್ನಾಟಕದಲ್ಲಿ ಕೇವಲ ಆರು ತಿಂಗಳ ಹಿಂದೆ ರಚನೆಯಾದ ಕಾಂಗ್ರೆಸ್ ಸರ್ಕಾರವನ್ನು ನೋಡಿದರೆ ಎಲ್ಲವೂ ಗೊತ್ತಾಗುತ್ತದೆ.. ಸಿಎಂ ಸಿದ್ದರಾಮಯ್ಯ ಎಷ್ಟು ದಿನ ರಾಜ್ಯದ ಚುಕ್ಕಾಣಿ ಹೊಂದುತ್ತಾರೆ ಎಂದು ತಿಳಿದಿಲ್ಲ. ಅಭಿವೃದ್ಧಿ ಚಟುವಟಿಕೆಗಳು ಸ್ಥಗಿತಗೊಂಡಿರುವ ಕರ್ನಾಟಕವನ್ನು ಅವರು ಹಾಳು ಮಾಡಿದ್ದಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ : Betting App : 21 ಬೆಟ್ಟಿಂಗ್ ಆ್ಯಪ್ ಬ್ಯಾನ್ ಮಾಡಿದ ಕೇಂದ್ರ ಸರ್ಕಾರ
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನಡುವಿನ ಜಗಳವನ್ನು ಉಲ್ಲೇಖಿಸಿ ಎರಡು ಗುಂಪುಗಳ ನಡುವಿನ ಒಳಜಗಳದ ಬಗ್ಗೆಯೂ ಮೋದಿ ಇದೇ ವೇಳೆ ಬೆಳಕು ಚೆಲ್ಲಿದರು.
ದೆಹಲಿ ನಿಯಂತ್ರಿತ ಪಕ್ಷ
ಒಳಜಗಳಗಳು ಕಾಂಗ್ರೆಸ್ ನಾಯಕರ ಸಂಸ್ಕೃತಿ. ಅದು ಸದಾ ಇರುತ್ತದೆ. ದೆಹಲಿಯಲ್ಲಿ ಕುಳಿತಿರುವ ಅವರ ಮುಖಂಡರು ಜಗಳದ ಬಗ್ಗೆ ತೀರ್ಪು ನೀಡುತ್ತಾರೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ಸರ್ಕಾರವು ರಚನೆಯಾದ ರಾಜ್ಯಗಳಲ್ಲಿ ಅಲ್ಲಿನ ಮುಖ್ಯಮಂತ್ರಿಗಳು ಮತ್ತು ಅವರ ಉಪಮುಖ್ಯಮಂತ್ರಿಗಳು ನಡುವೆ ರಾಜ್ಯವನ್ನು ಲೂಟಿ ಮಾಡಲು ಸ್ಪರ್ಧೆ ಮಾಡುತ್ತಿದ್ದಾರೆ. ಅಂತಹ ಸುದ್ದಿಗಳು ಕರ್ನಾಟಕದಿಂದ ನಿಯಮಿತವಾಗಿ ಬರುತ್ತಿವೆ ಎಂದು ಪ್ರಧಾನಿ ಹೇಳಿದರು.
24 ಗಂಟೆಗಳ ಹೋರಾಟ
ರಾಜಸ್ಥಾನದಲ್ಲಿ, ಸ್ಪಷ್ಟ ಬಹುಮತವನ್ನು ಪಡೆದ ನಂತರ, ಎರಡು ಗುಂಪುಗಳು ಕಳೆದ ನಾಲ್ಕೂವರೆ ವರ್ಷಗಳಿಂದ 24 ಗಂಟೆಗಳ ಕಾಲ ಹೋರಾಡುತ್ತಿವೆ ಎಂದು ಮೋದಿ ಹೇಳಿದರು. ರಾಜಸ್ಥಾನದಲ್ಲಿ ಕನ್ನಯ್ಯಲಾಲ್ ಅವರ ಹತ್ಯೆಯನ್ನೂ ಅವರು ಪರೋಕ್ಷವಾಗಿ ಉಲ್ಲೇಖಿಸಿದರು. ಕಾಂಗ್ರೆಸ್ ಮಾಫಿಯಾ ರಾಜ್, ಭ್ರಷ್ಟಾಚಾರ ಮತ್ತು ಲೂಟಿಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದರು.