ನವದೆಹಲಿ: ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್ ಇಸ್ಲಾಂ ಧಾರ್ಮಿಕ ಪದ್ಧತಿಯಲ್ಲಿ ಅನಿವಾರ್ಯ ಭಾಗವೇನೂ ಅಲ್ಲ ಎಂಬ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದಿನ ಕೈಗೆತ್ತಿಕೊಳ್ಳಲಿದೆ.
ಕರ್ನಾಟಕ ಹೈಕೋರ್ಟ್ ಕಳೆದ ಮಾರ್ಚ್ ೧೫ರಂದು ಈ ತೀರ್ಪನ್ನು ನೀಡಿತ್ತು. ತಕ್ಷಣವೇ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರೂ ಆಗ ಸರ್ವೋಚ್ಚ ನ್ಯಾಯಾಲಯ ಪ್ರಾಥಮಿಕ ವಿಚಾರಣೆಯನ್ನೂ ನಡೆಸಿರಲಿಲ್ಲ. ಬುಧವಾರ ವಕೀಲ ಪ್ರಶಾಂತ್ ಭೂಷಣ್ ಅವರಉ ಈ ವಿಚಾರವನ್ನು ಪ್ರಸ್ತಾಪಿಸಿ ಮುಖ್ಯ ನ್ಯಾಯಾಧೀಶರು ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕು ಎಂದು ಮನವಿ ಮಾಡಿದರು. ಆಗ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ ಅವರು ಈ ವಿಚಾರ ಮುಂದಿನ ವಾರ ಸೂಕ್ತವಾದ ಪೀಠದಲ್ಲಿ ವಿಚಾರಣೆಗೆ ಬರಲಿದೆ ಎಂದು ಹೇಳಿದರು.
ಕರ್ನಾಟಕದ ಉಡುಪಿಯ ಸರಕಾರಿ ಕಾಲೇಜಿನ ಆರು ಮಂದಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶ ಅವಕಾಶ ನಿರಾಕರಿಸಿದ ಬಳಿಕ ಹುಟ್ಟಿಕೊಂಡ ವಿವಾದ ಹಲವು ಮಜಲುಗಳನ್ನು ಪಡೆದುಕೊಂಡು ಇದೀಗ ಸುಪ್ರೀಂಕೋರ್ಟ್‌ವರೆಗೆ ತಲುಪಿದೆ.
ಅವಸರದ ವಿಚಾರಣೆ ಅವಶ್ಯವಿಲ್ಲ ಎಂದಿದ್ದ ಸುಪ್ರೀಂ
೨೦೨೨ರ ಜನವರಿ ೧ರಂದು ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ಕ್ಲಾಸಿಗೆ ತೆರಳಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸುವುದರೊಂದಿಗೆ ಈ ವಿವಾದ ಬೆಳಕಿಗೆ ಬಂದಿತ್ತು. ಯಾವುದೇ ಮಾತುಕತೆ, ಸಂಧಾನಗಳಿಗೆ ಬಗ್ಗದ ವಿದ್ಯಾರ್ಥಿನಿಯರು ಹಲವು ವಾರಗಳ ಕಾಲ ಕಾಲೇಜಿನ ಅಂಗಳದಲ್ಲೇ ಉಳಿದು ಪ್ರತಿಭಟಿಸಿದರು. ಈ ಸಂಬಂಧ ಜನವರಿ ೩೧ರಂದು ರಾಜ್ಯ ಹೈಕೋರ್ಟ್‌ಗೆ ದಾವೆ ಸಲ್ಲಿಸಿ ಹಿಜಾಬ್ ಧರಿಸಲು ಅವಕಾಶ ಕೋರುವುದರೊಂದಿಗೆ ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿತು. ಇದರ ನಡುವೆ ವಿವಾದ ರಾಜ್ಯ ಮಾತ್ರವಲ್ಲ ದೇಶದ ನಾನಾ ಕಡೆಗಳಿಗೆ ಹರಡಿ ಪರ-ವಿರುದ್ಧ ಭಾರಿ ಪ್ರತಿಭಟನೆ ನಡೆದಿತ್ತು.
ರಾಜ್ಯ ಸರಕಾರ ನಿಗದಿ ಮಾಡಿದ ಸಮವಸ್ತ್ರ ಸಂಹಿತೆಯಲ್ಲಿ ಹಿಜಾಬ್‌ನ ಉಲ್ಲೇಖವಿಲ್ಲ ಎನ್ನುವುದು ವಿದ್ಯಾರ್ಥಿನಿಯರ ವಾದವಾಗಿದ್ದರೆ, ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಹಕ್ಕು ಶಾಲಾಭಿವೃದ್ಧಿ ಸಮಿತಿಗಳಿಗೆ ಇವೆ ಎಂದು ಸರಕಾರ ತಿಳಿಸಿತ್ತು. ಅಂತಿಮವಾಗಿ ಹಿಜಾಬ್ ಧರಿಸುವುದು ಧಾರ್ಮಿಕ ಹಕ್ಕು ಎಂಬ ವಿಚಾರಕ್ಕೆ ಬಂದಾಗ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿತ್ತು. ಹಿಜಾಬ್ ಧಾರಣೆಗೆ ಧಾರ್ಮಿಕ ಮಹತ್ವವಿಲ್ಲ ಎಂದು ಸ್ಪಷ್ಟಪಡಿಸಿತ್ತು. ಇದನ್ನು ಆಧರಿಸಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆ, ಶಾಲೆ ಕಾಲೇಜುಗಳಲ್ಲಿ ಹಿಜಾಬ್ ಧಾರಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಅದು ಪ್ರಸಕ್ತ ಜಾರಿಯಲ್ಲಿದೆ.
ಈ ನಡುವೆ, ಮಾರ್ಚ್ ೧೫ರಂದು ರಾಜ್ಯ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಆದರೆ, ಅದರ ತುರ್ತು ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿತ್ತು.
ಅರ್ಜಿದಾರರಾದ ನಿಬಾ ನಾಜ್ ಪದವಾಗಿ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಮತ್ತು ಐಶತ್ ಶಿಫಾ ಅವರ ಪರವಾಗಿ ದೇವದತ್ತ ಕಾಮತ್ ಅವರು ಮಾರ್ಚ್ ೨೬ರಂದು ಮನವಿ ಮಾಡಿದ್ದರೂ ಸಿಜೆಐ ಅವರು ಯಾವುದೇ ದಿನಾಂಕ ನಿಗದಿಗೆ ಮನಸು ಮಾಡಿರಲಿಲ್ಲ. ಮಾರ್ಚ್ ೨೪ರಂದು ಮತ್ತೊಮ್ಮೆ ಮನವಿ ಸಲ್ಲಿಸಿದಾಗ ʻʻಹಿಜಾಬ್ ನಿಷೇಧಕ್ಕೂ ಶಾಲಾ ಪರೀಕ್ಷೆಗಳಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಈ ವಿಚಾರದಲ್ಲಿ ಭಾವೋದ್ರೇಕಗೊಳಿಸಬೇಡಿʼ ಎಂದು ಹೇಳಿದ್ದರು. ಅದೇ ವೇಳೆ ಮಧ್ಯಪ್ರವೇಶ ಮಾಡಿದ ಕರ್ನಾಟಕ ಸರಕಾರದ ವಾದಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ತುರ್ತು ವಿಚಾರಣೆಯ ಅವಶ್ಯಕತೆ ಇಲ್ಲ ಎಂದಿದ್ದರು.
ಏಪ್ರಿಲ್ ೨೬ರಂದು ಸಿಜೆಐ ಅವರ ಮುಂದೆ ಮತ್ತೊಮ್ಮೆ ಮನವಿ ಮಾಡಿದಾಗ ವಿಚಾರಣೆ ದಿನಾಂಕ ನಿಗದಿ ಮಾಡುವ ಬಗ್ಗೆ ಪರಿಗಣಿಸಲಾಗುವುದು ಎಂದು ಹೇಳಿದ್ದರು. ಆದರೆ ಯಾವುದೇ ಮುನ್ನಡೆ ಕಾಣಲಿಲ್ಲ. ಈ ನಡುವೆ, ಮೇ ೨೩ರಿಂದ ಜುಲೈ ೧೦ರವರೆಗೆ ನ್ಯಾಯಾಲಯಕ್ಕೆ ಬೇಸಿಗೆ ರಜೆ ಇತ್ತು. ಈ ವೇಳೆ ತುರ್ತು ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗಿತ್ತು.