Site icon Vistara News

Vande Bharat Metro: ವಂದೇ ಭಾರತ್ ರೀತಿಯಲ್ಲೇ ರಾಜ್ಯಕ್ಕೆ ವಂದೇ ಮೆಟ್ರೋ ಟ್ರೈನ್! ಬೆಂಗಳೂರಲ್ಲೇ ಚಾಲನೆ?

Ashwini vaishnaw

ಬೆಂಗಳೂರು: ಕರ್ನಾಟಕದಲ್ಲಿನ ಸರ್ ಎಂಬ ವಿಶ್ವೇಶ್ವರಯ್ಯ ರೈಲು ನಿಲ್ದಾಣ ಮಾದರಿಯಲ್ಲೇ ಮುಂದಿನ ದಿನಗಳಲ್ಲಿ ಪ್ರಮುಖ ರೈಲು ನಿಲ್ದಾಣಗಳು ಬದಲಾಗಲಿವೆ. ಹಾಗೆಯೇ, ವಂದೇ ಭಾರತ್ ಟ್ರೈನ್ ರೀತಿಯಲ್ಲೇ ವಂದೇ ಮೆಟ್ರೋ ರೈಲು (Vande Bharat Metro) ಕೂಡ ರಾಜ್ಯಕ್ಕೆ ಬರಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(ashwini vaishnaw) ಅವರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ ಮಂಡನೆ ಬೆನ್ನಲ್ಲೇ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕರ್ನಾಟಕದ ವಿವಿಧ ವಿಭಾಗೀಯ ರೈಲ್ವೆ ಅಧಿಕಾರಿಗಳ ಜತೆ ಗುರುವಾರ ವಿಡಿಯೋ ಸಂವಾದ ನಡೆಸಿದರು.

ಪ್ರಸಕ್ತ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ನಿಗದಿಯಾಗಿರುವ ಹಣ, ಇತರ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಜತೆಗೆ, ಕರ್ನಾಟಕ ರೈಲು ಯೋಜನೆಗಳಿಗೆ ಅತಿ ಹೆಚ್ಚು ಹಣ ಹಂಚಿಕೆಯಾಗಿರುವ ಮಾಹಿತಿಯನ್ನೂ ನೀಡಿದರು. ಪ್ರಸಕ್ತ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗಾಗಿ ಒಟ್ಟು 7561 ಕೋಟಿ ರೂ. ನೀಡಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರಲ್ಲೇ ವಂದೇ ಭಾರತ್ ಮೆಟ್ರೋಗೆ ಚಾಲನೆ

ಪ್ರಧಾನಿ ಮೋದಿ ಕನಸಿನ ವಂದೇ ಭಾರತ್ ಮೆಟ್ರೋ ಬೆಂಗಳೂರಲ್ಲೇ ಲೋಕಾರ್ಪಣೆ ಆಗುವ ಸಾಧ್ಯತೆ ಎಂದು ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅವರು ಹೇಳಿದ್ದಾರೆ. ಕೇಂದ್ರದ ಸೂಚನೆ ಮೇರೆಗೆ ವಂದೇ ಭಾರತ್ ಮೆಟ್ರೋ ನಿರ್ವಹಣೆ ಹಾಗೂ ಬ್ಯಾಕ್ ಅಪ್‌ಗೆ ಬೇಕಿರುವ ಸಿದ್ಧತೆ ಆರಂಭಿಸಿರೋದಾಗಿ ಅವರು ತಿಳಿಸಿದ್ದಾರೆ. ನಮ್ಮಲ್ಲಿ ಈಗ ವಂದೇ ಭಾರತ್ ಮೈನ್ಟೇನ್ ಮಾಡಲು ಬೇಕಾಗಿರುವ ರಿಸೋರ್ಸ್ ಕ್ರಿಯೇಟ್ ಮಾಡುತ್ತಿದ್ದೇವೆ. ಕೇಂದ್ರದ ಸೂಚನೆ ಮೇರೆಗೆ ಈ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Union Budget 2023: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಈ ಬಾರಿ 7561 ಕೋಟಿ ರೂ.! ಇದು ದಾಖಲೆಯ ಅನುದಾನ

ದೇಶದ ಇತರೆ ರಾಜ್ಯಕ್ಕೆ ಹೋಲಿಸಿಕೊಂಡರೆ ರೈಲ್ವೇ ಕ್ಷೇತ್ರದಲ್ಲಿ ಕರ್ನಾಟಕ ಅತ್ಯುನ್ನತ ಪ್ರಗತಿ ಸಾಧಿಸಿದೆ, ಸಾಧಿಸುತ್ತಿದೆ, ಸಾಧಿಸಲಿದೆ ಎಂದು ರೈಲ್ವೆ ಸಚಿವರು ಅಭಿಪ್ರಾಯಪಟ್ಟರು. ಕರ್ನಾಟಕಕ್ಕೆ ಈ ಬಾರಿ ಸಿಕ್ಕಾಪಟ್ಟೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಒಟ್ಟು 7561 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ. ಇಷ್ಟೊಂದು ಪ್ರಮಾಣದಲ್ಲಿ ಹಣವನ್ನು ಈ ಹಿಂದೆ ಯಾವತ್ತೂ ನೀಡಿಲ್ಲ ಎಂದು ವೈಷ್ಣವ್ ಅವರು ಹೇಳಿದರು.

2009ರಿಂದ 2014ರವರೆಗೆ ಕರ್ನಾಟಕಕ್ಕೆ ಪ್ರತಿ ವರ್ಷ ಹೆಚ್ಚು ಸರಾಸರಿ 850 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗುತ್ತಿತ್ತು. ಹಾಗೆಯೇ 2014ರಿಂದ 2022ರವರೆಗೆ 7850 ಕೋಟಿ ರೂ. ನೀಡಲಾಗಿದೆ. ಆದರೆ, ಈ ಬಾರಿ ನಮ್ಮ ಸರ್ಕಾರ ಈ ಬಾರಿ 9 ಪಟ್ಟು ಹೆಚ್ಚಳ ಅನುದಾನ ಒದಗಿಸಿದೆ ಎಂದು ಅವರು ರೈಲ್ವೆ ಸಚಿವರು ತಿಳಿಸಿದರು.

Exit mobile version