Site icon Vistara News

Miss India 2022 | ಮಿಸ್‌ ಇಂಡಿಯಾ ಆಗಿರುವ ಕನ್ನಡತಿ ಸಿನಿ ಶೆಟ್ಟಿ ಬಗ್ಗೆ ನಿಮಗೆಷ್ಟು ಗೊತ್ತು?

ಮುಂಬಯಿ: ೨೦೨೨ನೇ ವರ್ಷದ ʼಫೆಮಿನಾ ಮಿಸ್‌ ಇಂಡಿಯಾʼ (Miss India 2022) ಆಗಿ ಆಯ್ಕೆಯಾಗಿರುವ ಕರ್ನಾಟಕದ ಸಿನಿ ಶೆಟ್ಟಿ ಯಾರು ಎಂಬ ಬಗ್ಗೆ ಕನ್ನಡಿಗರಲ್ಲಿ ಕುತೂಹಲ ಹೆಚ್ಚಿದೆ. ರಾತ್ರಿ ಬೆಳಗಾಗುವುದರೊಳಗೆ ಇಡೀ ದೇಶದ ಗಮನ ಸೆಳೆದಿರುವ ಕರುನಾಡಿನ ಈ ಸುಂದರಿ ಹುಟ್ಟಿದ್ದು ಮುಂಬಯಿಯಲ್ಲಿಯೇ. ಆದರೆ ಅವರ ಪೋಷಕರು ಮಾತ್ರ ಕರ್ನಾಟಕದ ಮೂಲದವರು.

ಈ ಸ್ಪರ್ಧೆಯಲ್ಲಿ ಅವರು ಕರ್ನಾಟಕವನ್ನೇ ಪ್ರತಿನಿಧಿಸಿದ್ದರು. ರಾಜ್ಯದಲ್ಲಿ ನಡೆದಿದ್ದ ಫೆಮಿನಾ ಮಿಸ್‌ ಇಂಡಿಯಾ-ಕರ್ನಾಟಕದಲ್ಲಿಯೂ ಅವರು ಆಯ್ಕೆಯಾಗಿದ್ದರು. ಉಡುಪಿ ಸಮೀಪದ ಇನ್ನಂಜೆ ಮಡುಂಬು ಮೂಲದ ಸದಾನಂದ ಶೆಟ್ಟಿ ಮತ್ತು ಹೇಮಾ ಶೆಟ್ಟಿ ಅವರ ಮಗಳಾದ ೨೧ ವರ್ಷದ ಸಿನಿಶೆಟ್ಟಿ ಈಗ ೭೧ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ತಾಯಿಯೊಂದಿಗೆ ಸಿನಿ ಶೆಟ್ಟಿ

ಸಿನಿ ಶೆಟ್ಟಿ ಪೋಷಕರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಕನ್ನಡಿಗರ ಕುತೂಹಲ ತಣಿಯುತ್ತಿಲ್ಲ. ಗೂಗಲ್‌ನಲ್ಲಿ ಸಾವಿರಾರು ಜನರು ʼsini shetty parentsʼ ಎಂದು ಹುಡುಕಾಟ ನಡೆಸಿದ್ದಾರೆ.

ಸಿನಿ ಶೆಟ್ಟಿಗೆ ಲೆಕ್ಕ ಮತು ಹಣಕಾಸು ಮೆಚ್ಚಿನ ವಿಷಯಗಳಾಗಿದ್ದು, ಇದರಲ್ಲೇ ಮುಂಬಯಿಯಲ್ಲಿ ಪದವಿಯನ್ನು ಪೂರೈಸಿದ್ದಾರೆ. ಸದ್ಯಕ್ಕೆ ಚಾರ್ಟರ್ಡ್‌ ಫೈನಾನ್ಶಿಯಲ್‌ ಅನಲಿಸ್ಟ್‌ (ಸಿಎಫ್‌ಎ) ಗಾಗಿ ವ್ಯಾಸಂಗ ಮಾಡುತ್ತಿದ್ದಾರೆ. ೧೪ ವರ್ಷ ವಯಸ್ಸಿನಲ್ಲೇ ಭರತನಾಟ್ಯದಲ್ಲಿ ರಂಗಪ್ರವೇಶ ಮಾಡಿರುವ ಅವರು, ವ್ಯಾಪಾರ ಸಂಸ್ಥೆಯೊಂದರಲ್ಲಿ ಕೆಲದಿನ ಕೆಲಸವನ್ನೂ ಮಾಡಿದ್ದರು.

ಆಯ್ಕೆಯಾದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿನಿ ಶೆಟ್ಟಿ, ತಮ್ಮ ಬದುಕಿನ ಗುರಿಯ ಬಗ್ಗೆ ಪ್ರಸ್ತಾಪಿಸಿದ್ದು, ʻಗುರಿಯ ಬಗ್ಗೆ ಈಗಲೇ ಹೇಳಲಾಗದು. ಗುರಿಯತ್ತ ನಡೆಯುವ ಪಯಣವೇ ಮುಖ್ಯವಾದದ್ದು. ನಿಮ್ಮ ಸಾಧನೆಯನ್ನು ಅರಿತುಕೊಳ್ಳಿ, ಗೌರವಿಸಿʼ ಎಂದು ಹೇಳಿದ್ದಾರೆ. ಮಹಿಳೆಯರೆಲ್ಲ ದೃಢಚಿತ್ತರೂ ಪರಿಶ್ರಮಿಗಳೂ ಮತ್ತು ಕರುಣಾಮಯಿಗಳಾಗಿರಬೇಕೆಂದು ಸಿನಿ ಶೆಟ್ಟಿ ಆಶಿಸಿದ್ದಾರೆ.

ರಾಜಸ್ಥಾನದ ರುಬಲ್‌ ಶೇಖಾವತ್‌ ಮತ್ತು ಉತ್ತರ ಪ್ರದೇಶದ ಶಿನಾಟ ಚೌಹಾನ್‌ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್‌ ಅಪ್‌ ಆಗಿ ಆಯ್ಕೆಯಾಗಿದ್ದಾರೆ. ಮುಂಬಯಿಯಲ್ಲಿ ಭಾನುವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ೨೦೨೦ರ ಸಾಲಿನ ಭಾರತ ಸುಂದರಿ ಮಾನಸಿ ವಾರಾಣಸಿ ಅವರು ಸಿನಿ ಶೆಟ್ಟಿಗೆ ಕಿರೀಟ ತೊಡಿಸಿದ್ದರು.

೨೦೨೦ರ ಮೊದಲ ಮತ್ತು ಎರಡನೇ ರನ್ನರ್‌ಅಪ್‌ ಆಗಿದ್ದ ಮಾನ್ಯ ಸಿಂಗ್‌ ಮತ್ತು ಮಣಿಕಾ ಶಿಖಂದ್‌ ಅವರು ಈ ಬಾರಿಯ ರನ್ನರ್‌ಅಪ್‌ಗಳಿಗೆ ಕಿರೀಟ ತೊಡಿಸಿದರು. ಈ ಸ್ಪರ್ಧೆಯ ತೀರ್ಪುಗಾರರಾಗಿ ನೇಹಾ ಧುಪಿಯ, ಡೀನೊ ಮೊರೆಯೊ, ಮಲಾಯ್ಕಾ ಅರೋರ, ವಿನ್ಯಾಸಕರಾದ ರಾಹುಲ್‌ ಖನ್ನಾ, ರೋಹಿತ್‌ ಗಾಂಧಿ, ನೃತ್ಯ ಸಂಯೋಜನಕ ಶಾಮಕ್‌ ದಾವರ್‌ ಮತ್ತು ಮಹಿಳಾ ಕ್ರಿಕೆಟ್‌ ಕಣ್ಮಣಿ ಮಿಥಾಲಿ ರಾಜ್‌ ಇದ್ದರು.

ಕರ್ನಾಟಕ ಹೆಮ್ಮೆ ಪಡುವಂತೆ ಮಾಡಿದ್ದೇನೆ
ಕರುನಾಡ ಕುವರಿಯನ್ನು ರಾಜ್ಯದ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದಿಸಿದ್ದಾರೆ. ತಮಗೆ ಅಭಿನಂದನೆ ಹೇಳಿದ ಎಲ್ಲರಿಗೂ ಧನ್ಯವಾದ ತಿಳಿಸಿ, ಟ್ವೀಟ್‌ ಮಾಡಿರುವ ಸಿನಿ ಶೆಟ್ಟಿ, ʼನಾನು ಕರ್ನಾಟಕ ಹೆಮ್ಮೆ ಪಡವಂತೆ ಮಾಡಿದ್ದೇನೆ ಎಂದು ಭಾವಿಸುತ್ತೇನೆʼ ಎಂದಿದ್ದಾರೆ.

ಇದನ್ನೂ ಓದಿ | ಸಿನಿ ಶೆಟ್ಟಿ Miss India 2022

Exit mobile version