Site icon Vistara News

Sukhdev Singh: ಆತ್ಮೀಯವಾಗಿ ಮಾತನಾಡುತ್ತಲೇ ಸುಖ್​ದೇವ್ ಮೇಲೆ ಹಾರಿಸಿದ್ರು 5 ಗುಂಡು; ಇಲ್ಲಿದೆ ವಿಡಿಯೊ!

Sukhdev SIngh

ಜೈಪುರ: ಬಲಪಂಥೀಯ ಸಂಸ್ಥೆಯಾಗಿರುವ ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾದ ಮುಖ್ಯಸ್ಥ ಸುಖದೇವ್ ಸಿಂಗ್ ಗೋಗಮೇಡಿ (Sukhdev Singh Gogamedi) ಅವರನ್ನು ಕೊಂದ ವ್ಯಕ್ತಿಗಳು ಮೊದಲು ಜೈಪುರದ ಅವರ ಮನೆಯಲ್ಲಿ ಅವರೊಂದಿಗೆ ಚಹಾ ಸೇವಿಸಿದ್ದರು ಎಂಬುದು ಬೆಳಕಿಗೆ ಬಂದಿದೆ. ಅವರ ಜತೆ ಆತ್ಮೀಯತೆಯಿಂದ ಮಾತನಾಡುತ್ತಲೇ ಹತ್ತಿರದಿಂದಲೇ ಐದು ಸುತ್ತು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿದೆ. ಕೊಲೆಯ ವಿಡಿಯೊ ಬಹಿರಂಗಗೊಂಡಿದ್ದು ತಲ್ಲಣ ಸೃಷ್ಟಿಸಿದೆ.

ಆಘಾತಕಾರಿ ವೀಡಿಯೊದಲ್ಲಿ ಆರೋಪಿಯು ಗುಂಡು ಹಾರಿಸುವ ಮೊದಲು ಅವರೊಂದಿಗೆ ಕುಳಿತು ಮಾತನಾಡಿದ್ದಾರೆ. ಏಕಾಏಕಿ ಎದ್ದು ಅವರ ಬೆಂಗಾವಲು ಸಿಬ್ಬಂದಿ ಸೇರಿದಂತೆ ಹಲವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಬಳಿಕ ಸುಖ್​ದೇವ್ ಅವರ ತಲೆಗೆ ರಿವಾಲ್ವರ್ ಇಟ್ಟು ಗುಂಡು ಹೊಡೆದಿದ್ದಾರೆ.

ಸಿಸಿಟಿವಿ ವೀಡಿಯೊದಲ್ಲಿ ದುಷ್ಕರ್ಮಿಗಳು ಸುಖ್​ದೇವ್ ಅವರು ಫೋನ್ ನೋಡುತ್ತಿರುವ ವೇಳೆ ಅವರ ಅವರಿಗೆ ಅರಿವಿಲ್ಲದ ಹೊತ್ತಿನಲ್ಲಿಯೇ ಗುಂಡು ಹಾರಿಸಿದ್ದಾರೆ. ಅವರ ಕಾವಲುಗಾರರಲ್ಲಿ ಒಬ್ಬರು ಬಂದೂಕುಧಾರಿಗಳನ್ನು ತಡೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಈ ವೇಳೆ ಗೂಂಡಾಗಳು ಅವರ ಮೇಲೆಯೂ ಗುಂಡು ಹಾರಿಸಿದ್ದಾರೆ.

“ದುಷ್ಕರ್ಮಿಗಳು ಸುಖದೇವ್ ಸಿಂಗ್ ಗೊಗಮೇಡಿ ಅವರನ್ನು ಗುಂಡಿಕ್ಕಿ ಕೊಲ್ಲುವ ಮೊದಲು ಕನಿಷ್ಠ 10 ನಿಮಿಷಗಳ ಕಾಲ ಅವರೊಂದಿಗೆ ಕುಳಿತಿದ್ದರು” ಎಂದು ಪೊಲೀಸರು ತಿಳಿಸಿದ್ದಾರೆ.

20 ಸೆಕೆಂಡುಗಳ ಈ ಕ್ಲಿಪ್​​ನಲ್ಲಿ ಗೋಗಮೇಡಿ ಗುಂಡಿನ ಆಘಾತಕ್ಕೆ ಕುಸಿದು ಬಿದ್ದ ನಂತರವೂ ದುಷ್ಕರ್ಮಿಗಳು ಪದೇ ಪದೇ ಗುಂಡು ಹಾರಿಸಿದ್ದಾರೆ. ವರದಿಗಳ ಪ್ರಕಾರ, ಇಂದು ಮಧ್ಯಾಹ್ನ 12.30 ರ ಸುಮಾರಿಗೆ ಈ ಘಟನೆ ನಡೆದಿದೆ. ಗೋಗಮೇಡಿ ಮತ್ತು ಅವರ ಇಬ್ಬರು ಸಹಚರರು ಗಾಯಗೊಂಡಿದ್ದು ಎಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಅಲ್ಲಿ ಪ್ರಮುಖ ರಜಪೂತ ನಾಯಕ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ವೀಡಿಯೊದಲ್ಲಿ ಕಾಣಿಸದ ದಾಳಿಕೋರರಲ್ಲಿ ಒಬ್ಬ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ ಎಂದೂ ಹೇಳಲಾಗಿದೆ. ಉಳಿದಿಬ್ಬರು ಮೋಟಾರ್​ ಬೈಕಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಲ್ಡಿ ಬ್ರಾರ್​ ಗ್ಯಾಂಗ್​ ಕೃತ್ಯ

ಗೋಲ್ಡಿ ಬ್ರಾರ್ ಗ್ಯಾಂಗ್​​ ಕೊಲೆಯ ಹೊಣೆ ಹೊತ್ತುಕೊಂಡಿದೆ. ಸುಖದೇವ್ ಗೋಗಮೇಡಿ ಅವರ ಹತ್ಯೆಯ ಸಂಪೂರ್ಣ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುತ್ತೇವೆ” ಎಂದು ರೋಹಿತ್ ಗೋದಾರಾ ಕಪುರಿಸರ್ ಎಂಬಾತ ಫೇಸ್ಬುಕ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾನೆ. ಗೋಗಮೇಡಿ ನಮ್ಮ ಶತ್ರುಗಳನ್ನು ಬೆಂಬಲಿಸುತ್ತಿದ್ದರು. ಅದು ಈ ಹತ್ಯೆಗೆ ಪ್ರೇರೇಪಿಸಿತು ಎಂದು ಬರೆದುಕೊಂಡಿದ್ದಾನೆ.

ಇದನ್ನೂ ಓದಿ : Byju’s Debt: ಸಿಬ್ಬಂದಿ ಸಂಬಳಕ್ಕಾಗಿ ಮನೆ ಅಡವಿಟ್ಟ ಬೈಜೂಸ್ ಕಂಪನಿ ಮಾಲಿಕ!

ಕೆನಡಾ ಮೂಲದ ಗ್ಯಾಂಗ್​​ ಗೋಲ್ಡಿ ಬ್ರಾರ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ದೇಶದ ವಿವಿಧ ರಾಜ್ಯಗಳಿಗೆ ಬೇಕಾಗಿರುವ ಅಪರಾಧಿ. ಪಂಜಾಬಿ ಗಾಯಕ ಸಿದ್ದು ಮೂಸೆವಾಲಾ ಅವರ ಕೊಲೆ ಪ್ರಕರಣದಲ್ಲೂ ಈತ ಬೇಕಾಗಿದ್ದ. ಬಾಲಿವುಡ್ ಚಿತ್ರ ‘ಪದ್ಮಾವತ್’ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಜಪೂತ್ ಕರ್ಣಿ ಸೇನೆಗಿಂತ ಗೋಗಮೇಡಿ ನೇತೃತ್ವದ ಸಂಘಟನೆ ಭಿನ್ನವಾಗಿದೆ. 2015ರಲ್ಲಿ ಲೋಕೇಂದ್ರ ಸಿಂಗ್ ಕಲ್ವಿ ನೇತೃತ್ವದ ಕರ್ಣಿ ಸೇನಾದಿಂದ ಬೇರ್ಪಟ್ಟು ಸಂಘಟನೆ ಸ್ಥಾಪಿಸಿದ್ದರು.

Exit mobile version