Site icon Vistara News

Kartavyapath | ಕರ್ತವ್ಯಪಥ ಭಾರತದ ಪ್ರಜಾಪ್ರಭುತ್ವದ ಜೀವಂತ ಆದರ್ಶ ಮಾರ್ಗ: ಮೋದಿ

PM Narendra Modi

ನವ ದೆಹಲಿ: ನಾವು ಸರ್ವಶ್ರೇಷ್ಠ ಭಾರತ ನಿರ್ಮಾಣದ ಸಂಕಲ್ಪವನ್ನು ತೊಟ್ಟಿದ್ದೇವೆ. ಆ ಸಂಕಲ್ಪದ ದಾರಿ ಈ ಕರ್ತವ್ಯಪಥ(Kartavyapath)ದಿಂದಲೇ ಸಾಗಲಿದೆ. ಇದು ಕೇವಲ ಇಟ್ಟಿಗೆ, ಕಲ್ಲುಗಳಿಂದ ನಿರ್ಮಾಣ ಮಾಡಿದ ಪಥವಲ್ಲ, ಇದು ಭಾರತೀಯ ಪ್ರಜಾಪ್ರಭುತ್ವದ ಆದರ್ಶದ ಜೀವಂತ ಮಾರ್ಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಭಾಗವಾಗಿ ರೂಪಿಸಲಾದ ಕರ್ತವ್ಯ ಪಥ(ರಾಜಪಥ)ವನ್ನು ನರೇಂದ್ರ ಮೋದಿ ಅವರು ದೇಶಕ್ಕೆ ಲೋಕಾರ್ಪಣೆ ಮಾಡಿದರು.

ರಾಜಪಥ ಗುಲಾಮಿ ಸಂಕೇತ
ರಾಜಪಥ ಎಂಬುದು ಬ್ರಿಟಿಷ್ ರಾಜನನ್ನು ಸಂಕೇತಿಸುತ್ತಿತ್ತು. ಈ ದಾರಿಯಲ್ಲಿ ಹೋಗುವಾಗ ಅದು ಗುಲಾಮಿ ಭಾವನೆಯನ್ನು ಉಂಟು ಮಾಡುತ್ತಿತ್ತು. ಅದರ ರಚನೆ ಕೂಡ ಗುಲಾಮಿತನವನ್ನು ಸಂಕೇತಿಸುತ್ತಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಪಥದ ಚಹರೆಯೂ ಬದಲಾಗಿದೆ; ಅದರ ಆತ್ಮವೂ ಬದಲಾಗಿದೆ. ನಮ್ಮ ಸಂಸದರು, ಸಚಿವರು, ಅಧಿಕಾರಿಗಳು ಕರ್ತವ್ಯಪಥದಲ್ಲಿ ಹೋಗುವಾಗ ಅವರಿಗೆ ಅವರ ಕರ್ತವ್ಯಗಳನ್ನು ನೆನೆಪಿಸಲಿದೆ ಈ ದಾರಿ. ಹೊಸ ಪ್ರೇರಣೆ ನೀಡಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.

ಕರ್ತವ್ಯಪಥಕ್ಕೆ ಬನ್ನಿ
ನಾನು ದೇಶವಾಸಿಗಳಲ್ಲಿ ಆಹ್ವಾನ ನೀಡುತ್ತಿದ್ದೇನೆ. ನೀವೆಲ್ಲರೂ ಇಲ್ಲಿಗೆ ಬನ್ನಿ. ನವನಿರ್ಮಾಣವಾಗಿರುವ ಕರ್ತವ್ಯಪಥದಲ್ಲಿ ಭವಿಷ್ಯದ ಭಾರತ ಕಾಣಲಿದೆ. ನಾಳೆಯಿಂದ ಮೂರು ದಿನಗಳ ಕಾಲ ನೇತಾಜಿ ಸುಭಾಶಚಂದ್ರ ಬೋಸ್ ಅವರ ಜೀವನಾಧರಿತ ಡ್ರೋನ್ ಶೋ ಸಂಜೆ ನಡೆಯಲಿದೆ. ವೀಕ್ಷಿಸಿ. ನೀವು ನಿಮ್ಮ ಕುಟುಂಬದ ಸದಸ್ಯರ ಜತೆಗೆ ಸೆಲ್ಫಿ ತೆಗೆದುಕೊಂಡು #kartavyapath ಹ್ಯಾಷ್‌ಟ್ಯಾಗ್‌ನಡಿ ಸೋಷಿಯಲ್ ಮೀಡಿಯಾಗಳಲ್ಲಿ ಅಪ್‌ಲೋಡ್ ಮಾಡಿ ಎಂದು ಕರೆ ನೀಡಿದರು.

ಇದನ್ನೂ ಓದಿ | ವಿಸ್ತಾರ Explainer | ಮನಮೋಹಕ ಸೆಂಟ್ರಲ್ ವಿಸ್ಟಾ ಅವೆನ್ಯೂ! ಉದ್ಘಾಟನೆಗೆ ಕ್ಷಣಗಣನೆ

Exit mobile version