Site icon Vistara News

Kashmir Encounter: ಆವಂತಿಪೋರಾದಲ್ಲಿ ಇಬ್ಬರು ಉಗ್ರರ ಹತ್ಯೆ, ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರ ವಶ

Kashmir Encouter

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆವಂತಿಪೋರಾ ಸಮೀಪದ ವಾಂಡಕ್‌ಪೋರಾ ಪ್ರದೇಶದಲ್ಲಿ ಸೋಮವಾರ ನಡೆದ ಗುಂಡಿನ ಕಾಳಗದಲ್ಲಿ (Kashmir encounter) ಇಬ್ಬರು ಭಯೋತ್ಪಾದಕರನ್ನು ಗುಂಡಿಟ್ಟು ಸಾಯಿಸಲಾಗಿದೆ. ಮೃತರಲ್ಲಿ ಒಬ್ಬನನ್ನು ಕೈಸರ್‌ ಕೋಕಾ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಮಾಹಿತಿ ಇನ್ನೂ ತಿಳಿದಿಲ್ಲ. ದುಷ್ಕರ್ಮಿಗಳಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಮತ್ತು ಅಮೆರಿಕ ನಿರ್ಮಿತ ಎಂ-೪ ಕಾರ್ಬೈನ್‌ ರೈಫಲ್‌ ಮತ್ತು ಒಂದು ಪಿಸ್ತೂಲನ್ನು ವಶಕ್ಕೆ ಪಡೆಯಲಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಯ ಯೋಧರು ಬಾರಾಮುಲ್ಲಾ ಜಿಲ್ಲೆಯ ಕ್ರೀರಿ ಪ್ರದೇಶದ ಚೆಕ್‌ ಪಾಯಿಂಟ್‌ ಒಂದರಲ್ಲಿ ಲಷ್ಕರೆ ತಯ್ಬಾ ಸಂಘಟನೆಯ ಭಾಗ ಎಂದು ಹೇಳಲಾದ ಸಣ್ಣ ಗುಂಪೊಂದಕ್ಕೆ ಸೇರಿದ ಭಯೋತ್ಪಾದಕನನ್ನು ಬಂಧಿಸಿದ ಬಳಿಕ ಈ ಎನ್‌ಕೌಂಟರ್‌ ಶುರುವಾಗಿದೆ. ಬಂಧಿತನನ್ನು ತಿಲಗಾಂವ್‌ ಪಾಯೀನ್‌ ಗ್ರಾಮದ ನಿವಾಸಿ ಮೊಹಮ್ಮದ್‌ ಇಕ್ಬಾಲ್‌ ಬಟ್‌ ಎಂದು ಗುರುತಿಸಲಾಗಿದೆ.

ಕ್ರೀರಿ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಬಗ್ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಪಡೆದ ಪೊಲೀಸರು ಮತ್ತು ಸೇನೆಯ ೨೯ ಆರ್‌ಆರ್‌ ಯೋಧರು ಕ್ರೀರಿಯಲ್ಲಿ ಒಂದು ನಾಕಾವನ್ನು ಸ್ಥಾಪಿಸಿದರು. ಇಲ್ಲಿ ನಡೆದ ತಪಾಸಣೆ ವೇಳೆ ಲಷ್ಕರೆ ತಯ್ಬಾ ಸಂಘಟನೆಗೆ ಸೇರಿದ ಒಬ್ಬ ವ್ಯಕ್ತಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಸಿಕ್ಕಿಬಿದ್ದ. ಈತ ಭಯೋತ್ಪಾದನಾ ಚಟುವಟಿಕೆಗಳಿಗೆ ಶಸ್ತ್ರಾಸ್ತ್ರ ಪೂರೈಸುವ ಕೆಲಸವನ್ನು ಬಹುಕಾಲದಿಂದ ಮಾಡಿಕೊಂಡು ಬರುತ್ತಿದ್ದಾನೆ ಎಂದು ಹೇಳಲಾಗಿದೆ. ಜತೆಗೆ ಪಾಕಿಸ್ತಾನಿ ಭಯೋತ್ಪಾದಕರಾದ ಸೈಫುಲ್ಲಾ ಮತ್ತು ಅಬು ಜರಾರ್‌ ಜತೆಗೆ ನೇರ ಸಂಪರ್ಕದಲ್ಲಿದ್ದ ಎಂದು ಹೇಳಲಾಗಿದೆ.

ಈತನನ್ನು ಹಿಂಬಾಲಿಸಿ ವಶಕ್ಕೆ ಪಡೆಯುವ ಸಂದರ್ಭದಲ್ಲಿ ಇಬ್ಬರು ಲಷ್ಕರೆ ತಯ್ಬಾ ಸಂಘಟನೆಗೆ ಸೇರಿದ ಉಗ್ರರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರೂ ಉಗ್ರರನ್ನು ಕೊಂದು ಹಾಕಲಾಗಿದೆ.

ಕಳೆದ ಬುಧವಾರ ಕುಲ್ಗಾಂವ್‌ನಲ್ಲಿ ಇಬ್ಬರು ಲಷ್ಕರೆ ಉಗ್ರರು ಪೊಲೀಸರು ಮತ್ತು ಭದ್ರತಾ ಪಡೆಗಳ ಮುಂದೆ ಶರಣಾಗತರಾರಿದ್ದರು. ಗುರುವಾರ ಆವಂತಿಪೋರಾದಲ್ಲಿ ಅಲ್‌ ಬದ್ರ್‌ ಉಗ್ರ ಸಂಘಟನೆಗೆ ಸೇರಿದ ಒಬ್ಬ ಉಗ್ರನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ| ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್‌; ಪಾಕಿಸ್ತಾನದ ಇಬ್ಬರು ಸೇರಿ 4 ಭಯೋತ್ಪಾದಕರ ಹತ್ಯೆ

Exit mobile version