ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿಯು ಉಗ್ರರ ಬೇಟೆ ಮುಂದುವರಿಸಿದ್ದಾರೆ. ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ (Kashmir Encounter) ಭದ್ರತಾ ಸಿಬ್ಬಂದಿಯು ಒಬ್ಬ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಕಥೊಹಾಲನ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆ ವೇಳೆ ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಅಂಗ ಸಂಸ್ಥೆಯಾದ ದಿ ರೆಸಿಸ್ಟನ್ಸ್ ಫ್ರಂಟ್ (The Resistance Front) ಉಗ್ರನನ್ನು ಹತ್ಯೆ ಮಾಡಲಾಗಿದೆ. ಹತ ಉಗ್ರನನ್ನು ಮೈಸರ್ ಅಹ್ಮದ್ ದರ್ ಎಂಬುದಾಗಿ ಗುರುತಿಸಲಾಗಿದೆ.
ಕಥೊಹಾಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಸೇನೆ ಹಾಗೂ ಪೊಲೀಸರು ಗುರುವಾರ (ನವೆಂಬರ್ 9) ಬೆಳಗಿನ ಜಾವ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ. “ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್ ವೇಳೆ ಟಿಆರ್‌ಎಫ್ ಉಗ್ರನನ್ನು ಹತ್ಯೆ ಮಾಡಲಾಗಿದೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಹಲವು ಉಗ್ರರು ಅಡಗಿರುವ ಶಂಕೆ ಇರುವ ಕಾರಣ ಕಾರ್ಯಾಚರಣೆ ಮುಂದುವರಿದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
#ShopianEncounterUpdate: One (01) #terrorist affiliated with proscribed #terror outfit TRF neutralised. Incriminating materials including arms & ammunition recovered. Search going on. Further details shall follow.@JmuKmrPolice https://t.co/Eqq0TQi2wL
— Kashmir Zone Police (@KashmirPolice) November 8, 2023
ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ
ಜಮ್ಮು-ಕಾಶ್ಮೀರ ಗಡಿಯಲ್ಲಿ ಉಗ್ರರನ್ನು ಛೂ ಬಿಡುವ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸಿದೆ. ರಾಮಗಢ ಸೆಕ್ಟರ್‌ನಲ್ಲ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಒಬ್ಬ ಬಿಎಸ್‌ಎಫ್ ಯೋಧ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೆಲವು ದಿನಗಳ ಹಿಂದೆಯೂ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದರು. ಇದಕ್ಕೆ ಭಾರತೀಯ ಯೋಧರು ತಿರುಗೇಟು ನೀಡುವ ಮೂಲಕ ಅವರನ್ನು ಹಿಮ್ಮೆಟ್ಟಿಸಿದ್ದರು.
ಇದನ್ನೂ ಓದಿ: Anantnag Encounter: ಲಷ್ಕರೆ ಉಗ್ರನ ಹತ್ಯೆಯೊಂದಿಗೆ ಅಂತ್ಯವಾದ 7 ದಿನಗಳ ಅನಂತನಾಗ್ ಎನ್‌ಕೌಂಟರ್!
100ಕ್ಕೂ ಅಧಿಕ ಉಗ್ರರು ಸಕ್ರಿಯ
ಜಮ್ಮು-ಕಾಶ್ಮೀರದಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ 30ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದು, 204 ಉಗ್ರರನ್ನು ಬಂಧಿಸಿದರೂ ಇನ್ನೂ 111 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್ ಮಾಡುವುದು ಸೇನೆಯ ಗುರಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ