ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ (Kashmir Terrorism) ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರದೇಶವನ್ನು ಸೇನಾಪಡೆಗಳು ಇದೀಗ ಸುತ್ತುವರಿದಿವೆ. “ಪುಲ್ವಾಮಾದ ತುಮ್ಚಿ ನೌಪೋರಾ ಪ್ರದೇಶದಲ್ಲಿ ಉತ್ತರ ಪ್ರದೇಶದ ಮುಕೇಶ್ ಎಂದು ಗುರುತಿಸಲಾದ ಒಬ್ಬ ಕಾರ್ಮಿಕನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದರು. ಆತ ಮೃತಪಟ್ಟಿದ್ದಾನೆ. ಉಗ್ರರನ್ನು ಹಿಡಿಯಲು ಪ್ರದೇಶವನ್ನು ಸುತ್ತುವರಿಯಲಾಯಿತು” ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ (ಟ್ವಿಟರ್) ನಲ್ಲಿ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಪುಲ್ವಾಮಾದಲ್ಲಿ ನಡೆದ ಎರಡನೇ ಉಗ್ರರ ದಾಳಿ ಇದಾಗಿದೆ. ಇನ್ಸ್‌ಪೆಕ್ಟರ್ ಮಸ್ರೂರ್ ಅಹ್ಮದ್ ವಾನಿ ಭಾನುವಾರ ಈದ್ಗಾ ಪ್ರದೇಶದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಅವರ ಮೇಲೆ ಮೂರು ಬಾರಿ ಗುಂಡಿನ ದಾಳಿ ನಡೆದಿದೆ.
ದಾಳಿಯ ನಂತರ ಭದ್ರತಾ ಪಡೆಗಳು ಪುಲ್ವಾಮಾ ಮತ್ತು ಜಮ್ಮು ಮತ್ತು ಕಾಶ್ಮೀರದ ಇತರ ಭಾಗಗಳಲ್ಲಿ ವಾಹನಗಳು ಮತ್ತು ಪಾದಚಾರಿಗಳ ತಪಾಸಣೆಯನ್ನು ತೀವ್ರಗೊಳಿಸಿವೆ. ಶ್ರೀನಗರದ ಎಲ್ಲಾ ಪ್ರಮುಖ ಕೇಂದ್ರಗಳಲ್ಲಿ ಹಾಗೂ ನಗರದ ನಿರ್ಗಮನ ಸ್ಥಳಗಳಲ್ಲಿ ಸಂಚಾರಿ ವಾಹನ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಒಂದು ತಿಂಗಳ ಹಿಂದೆ ಪೊಲೀಸ್ ಪಡೆಗಳು ಹಾಗೂ ಉಗ್ರರ ತಂಡದ ನಡುವೆ ಮೂರು ದಿನಗಳ ತೀವ್ರ ಗುಂಡಿನ ಚಕಮಕಿ ನಡೆಯಿತು. ಐವರು ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹಲವು ಸೈನಿಕರೂ ಮಡಿದಿದ್ದರು. ಉತ್ತರಪ್ರದೇಶ ಹಾಗೂ ಬಿಹಾರಗಳಿಂದ ಆಗಮಿಸಿದ ವಲಸೆ ಕಾರ್ಮಿಕರು ಉಗ್ರರ ಬಂದೂಕಿಗೆ ಬಲಿಯಾಗುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ: ಶಾಲೆ ಮೇಲೆ ಭಯೋತ್ಪಾದಕರ ದಾಳಿ, ಆಹಾರ ಲೂಟಿ; 25 ಮಂದಿ ದುರ್ಮರಣ