Site icon Vistara News

ವಿಸ್ತಾರ ಸಂಪಾದಕೀಯ: ಕಲ್ಲು ತೂರಾಟದಿಂದ ಮಾದರಿ ಹಾದಿಯತ್ತ ಕಾಶ್ಮೀರಿ ಯುವಜನ

Kashmiri Girls who passed NEET

#image_title

ಜಮ್ಮು- ಕಾಶ್ಮೀರದಿಂದ ಶುಭ ಸುದ್ದಿ ಬಂದಿದೆ. ಇಲ್ಲಿನ ಶ್ರೀನಗರದ ನಿವಾಸಿಗಳಾದ ಮೂವರು ಮುಸ್ಲಿಂ ಸಹೋದರಿಯರು ಮೊದಲ ಪ್ರಯತ್ನದಲ್ಲಿಯೇ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET Result 2023) ತೇರ್ಗಡೆ ಹೊಂದಿದ್ದಾರೆ. ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆ ಹೊಂದಿರುವ ತುಬಾ ಬಶೀರ್‌, ರುತ್ಬಾ ಬಶೀರ್‌ ಹಾಗೂ ಉರ್ಬಿಶ್‌ ಸಹೋದರಿಯರು ಮೊದಲ ಪ್ರಯತ್ನದಲ್ಲಿಯೇ ನೀಟ್‌ ಪಾಸಾಗಿದ್ದು, ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹರಾಗಿದ್ದಾರೆ. ಶ್ರೀನಗರದ ಇಸ್ಲಾಮಿಯಾ ಹೈಯರ್‌ ಸೆಕೆಂಡರಿ ಸ್ಕೂಲ್‌ನಲ್ಲಿ ಓದಿರುವ ಇವರು, ಗಲಭೆಗಳು, ಉಗ್ರರ ಉಪಟಳಗಳ ನಡುವೆಯೂ ಶಿಕ್ಷಣ ಮುಂದುವರಿಸಿದ್ದಾರೆ.

ನಕಾರಾತ್ಮಕ ಅಂಶಗಳಿಗೆ ಸುದ್ದಿಯಾಗುತ್ತಿದ್ದ ಕಾಶ್ಮೀರದಲ್ಲಿ ಭರವಸೆಯ ಹೂವುಗಳು ಅರಳುತ್ತಿರುವುದು ಸಂತಸದ ವಿಚಾರ. ಜಮ್ಮು-ಕಾಶ್ಮೀರದಲ್ಲಿ ಅದೊಂದು ಕಾಲವಿತ್ತು. ಸಯ್ಯದ್‌ ಅಲಿ ಶಾ ಗೀಲಾನಿಯಂತಹ ಪ್ರತ್ಯೇಕತಾವಾದಿಗಳು ಭಾರತದ ವಿರುದ್ಧ ಘೋಷಣೆ ಕೂಗುತ್ತಿದ್ದರು. ಪ್ರವಾಸಿಗರಿಗೆ ʼಇಂಡಿಯಾ ಗೋ ಬ್ಯಾಕ್‌ʼ ಎನ್ನುತ್ತಿದ್ದರು. ಭಯೋತ್ಪಾದಕರನ್ನು ಹೆಡೆಮುರಿ ಕಟ್ಟಲು ಹೋದ ಸೇನಾಯೋಧರ ಮೇಲೆಯೇ ಕಲ್ಲು ತೂರಾಟ ನಡೆಸುತ್ತಿದ್ದರು. ಹಿಂದೂಗಳು ಇಲ್ಲಿನ ಶ್ರದ್ಧಾಕೇಂದ್ರಗಳಿಗೆ ಹೋಗಲು ಅಂಜುತ್ತಿದ್ದರು. ಕಾಶ್ಮೀರಿ ಪಂಡಿತರ ಹತ್ಯಾಕಾಂಡವೂ ನಡೆದದ್ದಲ್ಲದೆ, ಅವರು ಮರಳಿ ಬರಲಾಗದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಕಾಶ್ಮೀರ ಹಾಗೂ ಭಾರತದ ನಡುವೆ ಶಾಶ್ವತ ಕಂದಕವೇ ಏರ್ಪಟ್ಟಿತ್ತೇನೋ ಎಂದು ಭಾವಿಸಲಾಗಿತ್ತು. ಆದರೆ, ಜಮ್ಮು-ಕಾಶ್ಮೀರದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ಶಾಂತಿಸ್ಥಾಪನೆಯತ್ತ ಕಣಿವೆ ಮುಖ ಮಾಡುತ್ತಿದೆ. ಇದರ ಜತೆಗೆ ಜನರ ಮನಸ್ಥಿತಿಯೂ ಬದಲಾಗಿದೆ. ಇದಕ್ಕೆ ಈ ನೀಟ್‌ ಸಾಧನೆಯೇ ನಿದರ್ಶನ. ಈ ಮೂವರು ಹೆಣ್ಣು ಮಕ್ಕಳು ಇಡೀ ದೇಶಕ್ಕೆ ಮಾದರಿ.

ಕೆಲವು ವರ್ಷಗಳ ಹಿಂದೆ upscಯಲ್ಲಿ ಶಾ ಫಾಸಿಲ್‌ ಎಂಬ ಕಾಶ್ಮೀರಿ ಯುವಕ ಮೊದಲ ರ್ಯಾಂಕ್ ಪಡೆದಿದ್ದ. ಬಳಿಕ ಆತ ಐಎಎಸ್‌ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯ ಸೇರಿ, ಬಳಿಕ ಅಧಿಕಾರಶಾಹಿಯಲ್ಲೇ ಜನತೆಯ ಸೇವೆಗಾಗಿ ಮತ್ತೆ ಸರ್ಕಾರಿ ಕೆಲಸಕ್ಕೆ ಮರಳಿದ್ದ. ಈ ವರ್ಷವೂ ಇಬ್ಬರು ಕಾಶ್ಮೀರದಿಂದ ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಟಾಪರ್‌ಗಳಾಗಿ ಸಾಧನೆ ಮಾಡಿದ್ದಾರೆ. ಅದರಲ್ಲಿ ಒಬ್ಬಾತ ಅನಂತನಾಗ್‌ನ ವಸೀಂ ಅಹ್ಮದ್‌ ಭಟ್‌ ಎಂಬಾತ. ಕಾಶ್ಮೀರದಲ್ಲಿ ಸರ್ಕಾರಿ ಸೇವೆಗಳಿಗೆ ಸೇರುವ, ಖಾಸಗಿ ಉದ್ಯಮಗಳನ್ನು ತೆರೆಯುವ, ಬಹುರಾಷ್ಟ್ರೀಯ ಕಂಪನಿಗಳಿಗೆ ಸೇರುವ ಮುಸ್ಲಿಂ ಯುವಕರ ಸಂಖ್ಯೆ ಹೆಚ್ಚುತ್ತಿದೆ. ಉತ್ತಮ ಶಿಕ್ಷಣ ದೊರೆತರೆ, ಪ್ರಜಾಪ್ರಭುತ್ವದ ನೈಜ ಚೈತನ್ಯವನ್ನು ಅರ್ಥ ಮಾಡಿಕೊಂಡು ಸ್ವಾತಂತ್ರ್ಯವನ್ನು ಅದರ ಪೂರ್ಣ ಅರ್ಥದಲ್ಲಿ ಸ್ವಾಗತಿಸಿದರೆ ಬದಲಾವಣೆ ಖಂಡಿತ ಎಂಬುದಕ್ಕೆ ಇದು ನಿದರ್ಶನ.

ಈ ವರ್ಷ ಮಾರ್ಚ್‌ನಲ್ಲಿ ಕಾಶ್ಮೀರಕ್ಕೆ ಮೊತ್ತಮೊದಲ ವಿದೇಶಿ ಹೂಡಿಕೆ ಬಂತು. ದುಬೈನ ಎಮ್ಮಾರ್ ಗ್ರೂಪ್ 500 ಕೋಟಿ ರೂಪಾಯಿ ಮೌಲ್ಯದ ಶಾಪಿಂಗ್ ಮತ್ತು ಬಹೂಪಯೋಗಿ ವಾಣಿಜ್ಯ ಸಂಕೀರ್ಣವನ್ನು ಶ್ರೀನಗರದಲ್ಲಿ ನಿರ್ಮಿಸಲು ಮುಂದಾಯಿತು. ದುಬೈನ ಬುರ್ಜ್‌ ಖಲೀಫಾವನ್ನು ಸೃಷ್ಟಿಸಿದ ಈ ಕಂಪನಿ ನಿರ್ಮಿಸಲಿರುವ ಈ ಸಂಕೀರ್ಣದಿಂದ ಕನಿಷ್ಠ 5000 ಮಂದಿಗೆ ಉದ್ಯೋಗ ಲಾಭವಾಗಲಿದೆ. ಇದು ಆರಂಭ ಮಾತ್ರವಷ್ಟೇ. ಇನ್ನಷ್ಟು ವಿದೇಶಿ ಹೂಡಿಕೆಗಳು ಇಲ್ಲಿ ಬರಬಹುದು ಹಾಗೂ ಉದ್ಯೋಗ ಸೃಷ್ಟಿ ಆಗಬಹುದು. ಈಗಾಗಲೇ ಕೇಂದ್ರ ಸರ್ಕಾರ ಕಳೆದೆರಡು ವರ್ಷಗಳಲ್ಲಿ ಇಲ್ಲಿ 30,000 ಕೋಟಿಗೂ ಹೆಚ್ಚು ಪ್ಯಾಕೇಜ್‌ ನೀಡಿದೆ.
ಇನ್ನು ಎರಡು ವರ್ಷಗಳಲ್ಲಿ 66,000 ಕೋಟಿ ರೂಪಾಯಿ ಮೌಲ್ಯದ ಆಂತರಿಕ ಖಾಸಗಿ ಹೂಡಿಕೆ ಪ್ರಸ್ತಾವನೆಗಳನ್ನು ಇಲ್ಲಿನ ಸರ್ಕಾರ ಸ್ವೀಕರಿಸಿದೆ. 1315ಕ್ಕೂ ಅಧಿಕ ಕಂಪನಿಗಳು ಇಲ್ಲಿಗೆ ಕಾಲಿಡಲು ಯೋಚಿಸುತ್ತಿವೆ. ಇದು ಆರ್ಥಿಕವಾಗಿ, ವಾಣಿಜ್ಯಕವಾಗಿ ಕಾಶ್ಮೀರ ತಲೆಯೆತ್ತುತ್ತಿದೆ ಎಂಬುದರ ಸೂಚನೆ.

ಇದನ್ನೂ ಓದಿ : NEET Result 2023: ಕಲ್ಲು ಹೊಡೆಯುತ್ತಿದ್ದ ಕಾಶ್ಮೀರದಲ್ಲಿ ಅಂಕಕ್ಕೆ ಗುರಿ ಇಟ್ಟ 3 ಮುಸ್ಲಿಂ ಸಹೋದರಿಯರು; ನೀಟ್‌ ಪಾಸ್

ಈ ಶೈಕ್ಷಣಿಕ, ಔದ್ಯಮಿಕ, ಆರ್ಥಿಕ ಉನ್ನತಿಯೆಲ್ಲದರ ಮೂಲ ಬೀಜಗಳು ಕೇಂದ್ರ ಸರ್ಕಾರ 2019ರಲ್ಲಿ ಕೈಗೊಂಡ ಆರ್ಟಿಕಲ್‌ 370ರ ರದ್ದತಿ ಹಾಗೂ ಜಮ್ಮು- ಕಾಶ್ಮೀರಗಳೆಂಬ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜನೆ ಎಂಬ ದಿಟ್ಟ ಕ್ರಮಗಳಲ್ಲಿವೆ. ಇದರ ವಿರುದ್ಧ ಪಾಕ್-‌ ಚೀನಾ ಮುಂತಾದ ಹಿತಶತ್ರುಗಳು ಎಷ್ಟೇ ಅರಚಾಡಿದರೂ ಸೊಪ್ಪು ಹಾಕದೆ, ವಿಶ್ವಸಂಸ್ಥೆಯಲ್ಲೂ ಅಂಜದೆ ಅಳುಕದೆ ಇದನ್ನು ನಿಭಾಯಿಸಿದ, ಕಾಶ್ಮೀರಕ್ಕೆ ಅಭಿವೃದ್ಧಿಯ ಹರ್ಷವನ್ನು ತಂದ ಆಡಳಿತಗಾರರಿಗೆ ಹಾಗೂ ನುಸುಳುಕೋರರ ಆಟ ನಡೆಯದಂತೆ ಈ ಪ್ರದೇಶವನ್ನು ಕಾಯ್ದ ಸೈನ್ಯಕ್ಕೆ ಶ್ಲಾಘನೆಗಳು ಸಲ್ಲುತ್ತವೆ. ಕಾಶ್ಮೀರಿ ಯುವಜನತೆ ಇದರ ಸಂಪೂರ್ಣ ಲಾಭ ಪಡೆದು, ದೇಶಕ್ಕೇ ಮಾದರಿಯಾಗುತ್ತಾರೆ ಎಂದು ನಿರೀಕ್ಷಿಸೋಣ.

Exit mobile version