ತಿರುವನಂತಪುರಂ: ದೇವರ ನಾಡು ಕೇರಳ ಈಗ ವರುಣನ (Kerala Floods) ಆರ್ಭಟಕ್ಕೆ ತತ್ತರಿಸಿ ಹೋಗಿದೆ. ವಯನಾಡಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ (Wayanad Floods) ಉಂಟಾಗಿದ್ದು, ಸಾವಿನ ಸಂಖ್ಯೆ 300 ಸಮೀಪಿಸಿದೆ. 200ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದು, ಕಾರ್ಯಾಚರಣೆ ನಡೆಯುತ್ತಲೇ ಇದೆ. ಇನ್ನು, ವಯನಾಡು ಮಾತ್ರವಲ್ಲ, ಇಡುಕ್ಕಿ ಜಿಲ್ಲೆಯಲ್ಲೂ ಭಾರಿ ಮಳೆಯಾಗುತ್ತಿದ್ದು, ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಇನ್ನು, ಇಡುಕ್ಕಿಯಲ್ಲಿ ವ್ಯಕ್ತಿಯೊಬ್ಬರು ಉಕ್ಕಿ ಹರಿಯುತ್ತಿರುವ ನದಿಯ ಸೇತುವೆ ಮೇಲೆಯೇ ಪ್ರಾಣವನ್ನೂ ಲೆಕ್ಕಿಸದೆ ಕಾರಿನಲ್ಲಿ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೊ (Viral Video) ಈಗ ಭಾರಿ ವೈರಲ್ ಆಗಿದೆ.
ಹೌದು, ಇಡುಕ್ಕಿ ಜಿಲ್ಲೆಯಲ್ಲಿ ನದಿಯೊಂದು ಉಕ್ಕಿ ಹರಿಯುತ್ತಿದೆ. ಸೇತುವೆ ಮೇಲೆಯೂ ನೀರು ರಭಸವಾಗಿ ಹರಿಯುತ್ತಿದೆ. ಆದರೆ, ಗರ್ಭಿಣಿ ಪತ್ನಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಬೇಕಾದ ಕಾರಣ ವ್ಯಕ್ತಿಯು ಪತ್ನಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಇಡುಕ್ಕಿ ಆಸ್ಪತ್ರೆಯತ್ತ ಹೊರಟಿದ್ದಾರೆ. ಸೇತುವೆಯ ಮೇಲೆಯೂ ನೀರು ಹರಿಯುವುದನ್ನು ಕಂಡ ಅವರು ಆತಂಕಕ್ಕೀಡಾಗಿದ್ದಾರೆ.
A husband in Kerala took a risky journey to take his pregnant wife to the hospital – Verified News.#KeralaRains #KeralaLandslide #Kerala pic.twitter.com/bLa5lSejmv
— Rutu (@Rutuu1331) July 31, 2024
ಪತ್ನಿಯನ್ನು ಆಸ್ಪತ್ರೆಗೆ ಸೇರಿಸಲೇಬೇಕಾದ ಕಾರಣ ಅವರು ರಭಸವಾಗಿ ಹರಿಯುತ್ತಿದ್ದ ನೀರನ್ನೂ ಲೆಕ್ಕಿಸದೆ, ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗಿದ್ದಾರೆ. ಇಬ್ಬರೂ ಸುರಕ್ಷಿತವಾಗಿ ಇಡುಕ್ಕಿ ಆಸ್ಪತ್ರೆ ತಲುಪಿದ್ದಾರೆ. ವ್ಯಕ್ತಿಯ ಪತ್ನಿ ಈಗ ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಆಗುತ್ತಲೇ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪತ್ನಿಗಾಗಿ ಶೌರ್ಯತನ ಮೆರೆದ ಈತನೇ ನಿಜವಾದ ಪತಿ ಎಂದೆಲ್ಲ ಹೊಗಳಿದ್ದಾರೆ.
ವಯನಾಡಿಗೆ ರಾಹುಲ್ ಗಾಂಧಿ ಭೇಟಿ
ವಯನಾಡು ಜಿಲ್ಲೆಯ ಮೆಪ್ಪಾಡಿ ಹಾಗೂ ಚೂರಲ್‌ಮಲ ಪ್ರದೇಶಗಳ ಗ್ರಾಮಗಳು ಸಂಪೂರ್ಣವಾಗಿ ಮಸಣದಂತಾಗಿವೆ. ಈ ಪ್ರದೇಶಗಳಿಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರು ಭೇಟಿ ನೀಡಿದ್ದಾರೆ. ಪ್ರವಾಹದಲ್ಲಿ ಕುಟುಂಬಸ್ಥರನ್ನು ಕಳೆದುಕೊಂಡಿರುವ, ನೀರಿನಲ್ಲಿ ಮನೆಗಳು ಕೊಚ್ಚಿ ಹೋಗಿ ನಿರಾಶ್ರಿತರಾಗಿರುವ ಸಂತ್ರಸ್ತರನ್ನು ಭೇಟಿಯಾದ ಅವರು, ಆತ್ಮಸ್ಥೈರ್ಯ ತುಂಬಿದರು. ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಹಾನಿಯ ವೀಕ್ಷಣೆ ಮಾಡಿದರು.
ವಯನಾಡು ಜಿಲ್ಲೆಯ ಹಲವೆಡೆ ಸಂಚರಿಸಿದ ಬಳಿಕ ರಾಹುಲ್ ಗಾಂಧಿ ಅವರು ಮಾಧ್ಯಮಗಳ ಜತೆ ಮಾತನಾಡಿದರು. “ವಯನಾಡು ಜನರ ಸ್ಥಿತಿಯನ್ನು ನೋಡಿದಾಗ ನನ್ನ ತಂದೆ ಸಾವಿನ ದಿನ, ಆ ದುಃಖವೇ ಆಯಿತು. ಜನರು ತಂದೆ, ತಾಯಿ ಜತೆಗೆ ಇಡೀ ಕುಟುಂಬವನ್ನೇ ಕಳೆದುಕೊಂಡಿದ್ದಾರೆ. ಇಡೀ ದೇಶದ ಗಮನವೇ ಈಗ ವಯನಾಡು ಮೇಲಿದೆ. ನಾವೆಲ್ಲರೂ ವಯನಾಡು ಪರವಾಗಿ ನಿಲ್ಲೋಣ. ಇದು ಕೇವಲ ವಯನಾಡಿನ ದುರಂತ ಅಲ್ಲ, ರಾಜ್ಯ ಹಾಗೂ ದೇಶದ ದುರಂತವಾಗಿದೆ” ಎಂದು ಭಾವುಕರಾಗಿ ಹೇಳಿದರು.
ಪ್ರಿಯಾಂಕಾ ವಾದ್ರಾ ಅವರು ಪರಿಹಾರ ಕೇಂದ್ರಗಳಿಗೂ ತೆರಳಿ, ಸಂತ್ರಸ್ತರ ಜತೆ ಮಾತನಾಡಿದರು. ಇದಾದ ಬಳಿಕ ಮಾತನಾಡಿದ ಅವರು, “ನಾವು ಜನರಿಗೆ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ನೆರವಾಗಲು ಬಂದಿದ್ದೇವೆ. ಪರಿಸ್ಥಿತಿ ತುಂಬ ಭೀಕರವಾಗಿದೆ” ಎಂದು ಹೇಳಿದರು. ಭಾರಿ ಮಳೆಯ ಬಳಿಕ ವಯನಾಡಿನ ಸುಮಾರು 80 ಸಾವಿರ ಚದರ ಮೀಟರ್ ಭೂಮಿಯು ಕುಸಿದಿದ್ದು, ಸುಮಾರು 8 ಕಿಲೋಮೀಟರ್‌ವರೆಗೆ ಅವಶೇಷವು ಹರಿದುಕೊಂಡು ಹೋಗಿದೆ. ಇದರಿಂದಾಗಿ ಸಾವಿನ ಸಂಖ್ಯೆ ದಿನೇದಿನೆ ಜಾಸ್ತಿಯಾಗುತ್ತಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Wayanad Landslide: ವಯನಾಡು ಸ್ಥಿತಿ ನೋಡಿ ತಂದೆ ಸಾವು ನೆನಪಾಯ್ತು ಎಂದ ರಾಹುಲ್ ಗಾಂಧಿ; ಸಾವಿನ ಸಂಖ್ಯೆ 300ರ ಸನಿಹ