ತಿರುವನಂತಪುರ: ವಿಶಿಷ್ಟ ಬೆಳವಣಿಗೆಯೊಂದರಲ್ಲಿ, ಕೇರಳ ರಾಜ್ಯಪಾಲ (Kerala Governor) ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರು ಕೊಲ್ಲಂ ಜಿಲ್ಲೆಯ ನಿಲಮೇಲ್‌ನಲ್ಲಿ ಇಂದು ಬೀದಿ ಬದಿಯ ಅಂಗಡಿಯ ಮುಂದೆ ಧರಣಿ ಕುಳಿತರು. ತಮ್ಮ ಮೇಲೆ ಮುಗಿಬಿದ್ದು ಪ್ರತಿಭಟನೆ ನಡೆಸಿದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (Students Federation of India- SFI) ಕಾರ್ಯಕರ್ತರನ್ನು ಬಂಧಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅವರು ಧರಣಿ ನಡೆಸಿದರು.
ಆರಿಫ್ ಮಹಮ್ಮದ್ ಖಾನ್ ವಾಹನದಿಂದ ಇಳಿದು ನಿಲಮೇಲ್‌ನ ಜನನಿಬಿಡ ಎಂಸಿ ರಸ್ತೆಯಲ್ಲಿರುವ ಅಂಗಡಿಯಿಂದ ಕುರ್ಚಿ ತೆಗೆದುಕೊಂಡು ಅಂಗಡಿ ಮುಂದೆ ಕುಳಿತು, ಪ್ರತಿಭಟನಾಕಾರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಟಿವಿ ಚಾನೆಲ್‌ಗಳಲ್ಲಿ ಈ ನಾಟಕೀಯ ದೃಶ್ಯಗಳು ಪ್ರಸಾರವಾದವು. ಕೋಪಗೊಂಡಿದ್ದ ರಾಜ್ಯಪಾಲ ಖಾನ್ ಅವರು ಪೊಲೀಸ್ ಸಿಬ್ಬಂದಿ ಜೊತೆಗೆ ಕಠಿಣವಾಗಿ ಮಾತನಾಡಿದ್ದನ್ನೂ ವಾಹಿನಿಗಳು ತೋರಿಸಿವೆ. ಪೊಲೀಸ್ ಅಧಿಕಾರಿಗಳಲ್ಲದೆ, ಖಾನ್ ಅವರ ಅಧಿಕಾರಿಗಳು ಮತ್ತು ಸ್ಥಳೀಯ ಜನರು ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು.
ರಾಜ್ಯಪಾಲರು ಸಮೀಪದ ಕೊಟ್ಟಾರಕ್ಕರದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನ ಹಲವು ಕಾರ್ಯಕರ್ತರು ರಾಜ್ಯಪಾಲರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದ್ದರು.
#WATCH | "I will not leave from here. Police is giving them protection, " says Governor Arif Mohammed Khan after SFI activists held a protest against him in Kollam. Police present on the spot https://t.co/nQHF9PWqpr pic.twitter.com/RHFFBRCh9s
— ANI (@ANI) January 27, 2024
ಕೇರಳ ರಾಜ್ಯಪಾಲರು ಮತ್ತು ಅಲ್ಲಿನ ಎಡ ಸರ್ಕಾರ ಇತ್ತೀಚೆಗೆ ಹಲವಾರು ವಿಷಯಗಳ ಬಗ್ಗೆ ಕಿತ್ತಾಡಿಕೊಂಡಿದ್ದಾರೆ. ಮುಖ್ಯವಾಗಿ, ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆ ಮತ್ತು ವಿಧಾನಸಭೆಯು ಅಂಗೀಕರಿಸಿದ ಕೆಲವು ಮಸೂದೆಗಳಿಗೆ ಅವರು ಸಹಿ ಹಾಕಿಲ್ಲ. ಈ ಚಕಮಕಿಯ ನಡುವೆಯೇ ಅವರು ಗುರುವಾರ, ಕೇರಳ ವಿಧಾನಸಭೆಯಲ್ಲಿ ತಮ್ಮ ಸಾಂಪ್ರದಾಯಿಕ ನೀತಿ ಭಾಷಣವನ್ನು ಎರಡೇ ನಿಮಿಷಗಳಲ್ಲಿ ಮುಗಿಸಿದ್ದರು. ಕೊನೆಯ ಪ್ಯಾರಾಗ್ರಾಫ್ ಅನ್ನು ಮಾತ್ರ ಓದಿದ್ದರು.
ಶುಕ್ರವಾರ ರಾಜಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan), ಅವರ ಸಂಪುಟ ಸಹೋದ್ಯೋಗಿಗಳು ಅಥವಾ ಎಲ್‌ಡಿಎಫ್ ಶಾಸಕರು ಗೈರುಹಾಜರಾಗಿದ್ದರು. ಸಂಜೆ 6.30ರಿಂದ 7.30ರವರೆಗೆ ನಡೆದ ಕಾರ್ಯಕ್ರಮಕ್ಕೆ ಸಿಎಂ, ಸಚಿವರು ಹಾಗೂ ಶಾಸಕರನ್ನು ಆಹ್ವಾನಿಸಲಾಗಿತ್ತು. ಆದರೆ ಅವರ್ಯಾರೂ ಬಂದಿರಲಿಲ್ಲ. ರಾಜಧಾನಿಯ ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಗಣರಾಜ್ಯೋತ್ಸವದ ಸಂದರ್ಭದಲ್ಲಿ, ರಾಜ್ಯಪಾಲ ಖಾನ್ ಮತ್ತು ಸಿಎಂ ಪಿಣರಾಯಿ ಅವರು ಅಕ್ಕಪಕ್ಕದಲ್ಲಿ ಕುಳಿತಿದ್ದರೂ ಸಹ ಒಬ್ಬರನ್ನೊಬ್ಬರು ಮಾತನಾಡಿಸಿರಲಿಲ್ಲ.