Site icon Vistara News

ನನ್ನ ಮೇಲೆ ಹಲ್ಲೆ ನಡೆಸಲು ಗೂಂಡಾಗಳಿಗೆ ಪ್ರಚೋದನೆ: ಕೇರಳ ಸಿಎಂ ವಿರುದ್ಧ ರಾಜ್ಯಪಾಲರ ಆಕ್ರೋಶ

pinaray vijayan arif mohammad khan

ತಿರುವನಂತಪುರಂ: ತಮ್ಮ ಮೇಲೆ ದಾಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಸಂಚು ರೂಪಿಸಿದ್ದಾರೆ ಎಂದು ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ (Arif Mohammed Khan) ಅವರು ಆರೋಪಿಸಿದ್ದಾರೆ. ರಾಜ್ಯಪಾಲರ ವಾಹನದ ಮೇಲೆ ಆಡಳಿತಾರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ಸದಸ್ಯರು ದಾಳಿ ನಡೆಸಿದ ಘಟನೆಯನ್ನು ಉಲ್ಲೇಖಿಸಿ ಅವರು ಈ ಆರೋಪ ಮಾಡಿದ್ದಾರೆ.

ರಾಜ್ಯಪಾಲರು ಹೊಸದಿಲ್ಲಿಗೆ ತೆರಳಲು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ರಾಜ್ಯದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಗವರ್ನರ್ ಖಾನ್ ಅವರು ಮಾಧ್ಯಮವನ್ನುದ್ದೇಶಿಸಿ ಮಾತನಾಡುತ್ತಾ, ಮುಖ್ಯಮಂತ್ರಿ ವಿಜಯನ್ ಅವರ ಪಾತ್ರ ಈ ಹಲ್ಲೆ ಪ್ರಕರಣದಲ್ಲಿ ಇದೆ ಎಂದು ಹೇಳಿದರು. ಘಟನೆಯು ಆಕಸ್ಮಿಕವಲ್ಲ, ಬದಲಾಗಿ ಉದ್ದೇಶಪೂರ್ವಕವಾಗಿ ತನ್ನನ್ನು ಗುರಿಯಾಗಿಸಿಕೊಂಡು ನಡೆದ ಕೃತ್ಯ ಎಂದು ಅವರು ಹೇಳಿದ್ದಾರೆ.

“ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯುತ್ತಿದ್ದರೆ, ಪ್ರತಿಭಟನಾಕಾರರಿರುವ ಕಾರುಗಳನ್ನು ಅಲ್ಲಿಗೆ ಬಿಡಲು ಸಾಧ್ಯವೇ? ಪೊಲೀಸರು ಅಂಥವರನ್ನು ಮುಖ್ಯಮಂತ್ರಿಗಳ ಕಾರಿನ ಬಳಿ ಬರಲು ಬಿಡುತ್ತಾರೆಯೇ? ಅಲ್ಲಿ ಪ್ರತಿಭಟನಾಕಾರರ ಕಾರುಗಳು ನಿಂತಿದ್ದವು. ದಾಳಿಯ ಬಳಿಕ ಅವರು ತಮ್ಮ ಕಾರು ಹತ್ತಿ ಪರಾರಿಯಾದರು” ಎಂದು ಖಾನ್ ಹೇಳಿದರು.

“ಆದ್ದರಿಂದ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಇದು ಮುಖ್ಯಮಂತ್ರಿಯ ಕೃತ್ಯ. ಅವರು ಪಿತೂರಿ ಮಾಡುತ್ತಿದ್ದಾರೆ ಮತ್ತು ನನ್ನನ್ನು ದೈಹಿಕವಾಗಿ ನೋಯಿಸಲು ಈ ಜನರನ್ನು ಕಳುಹಿಸುತ್ತಿದ್ದಾರೆ. ಗೂಂಡಾಗಳು ತಿರುವನಂತಪುರದ ರಸ್ತೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ” ಎಂದು ಖಾನ್ ಆರೋಪಿಸಿದ್ದಾರೆ.

ತಮ್ಮ ವಾಹನದ ಮೇಲೆ ದಾಳಿಯಿಂದ ಕ್ರುದ್ಧವಾಗಿರುವ ಗವರ್ನರ್ ಖಾನ್, ಈ ಘಟನೆಯನ್ನು ಖಂಡಿಸಿದ್ದಾರೆ. ಕೇರಳದಲ್ಲಿ ಪ್ರಜಾಪ್ರಭುತ್ವದ ಹದಗೆಟ್ಟ ಸ್ಥಿತಿಯನ್ನೂ ಖಂಡಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳು ದೈಹಿಕ ಹಿಂಸೆಗೆ ಕಾರಣವಾಗಬಾರದು ಎಂದು ಅವರು ಒತ್ತಿ ಹೇಳಿದರು.

ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತನ್ನ ಮೇಲೆ ಕಪ್ಪು ಬಾವುಟವನ್ನು ಬೀಸಿದರು ಮಾತ್ರವಲ್ಲದೆ ತನ್ನ ವಾಹನದ ಎರಡೂ ಬದಿಗಳಲ್ಲಿ ಗುದ್ದಿದರು ಎಂದು ಖಾನ್ ಆರೋಪಿಸಿದರು. “ನಂತರ ನಾನು ನನ್ನ ಕಾರಿನಿಂದ ಇಳಿದೆ. ಆದರೆ ಅವರೇಕೆ ಓಡಿಹೋದರು? ಅವರೆಲ್ಲ ಕಾರಿನಲ್ಲಿ ಕುಳಿತಿದ್ದರು ಎಂದು ಪೊಲೀಸರಿಗೆ ಗೊತ್ತಿತ್ತು. ಆದರೆ ಮುಖ್ಯಮಂತ್ರಿಯೇ ಅವರಿಗೆ ನಿರ್ದೇಶನ ನೀಡುವಾಗ ಬಡ ಪೋಲೀಸರು ಏನು ಮಾಡುತ್ತಾರೆ?” ಎಂದು ಖಾನ್‌ ಪ್ರಶ್ನಿಸಿದ್ದಾರೆ.

ಮೂರು ಕಡೆಗಳಲ್ಲಿ ಖಾನ್‌ ಅವರ ಕಾರನ್ನು ತಡೆದು ಕಪ್ಪು ಧ್ವಜ ಪ್ರದರ್ಶಿಸಲಾಯಿತು. ಕಾರಿಗೆ ಗುದ್ದಲಾಯಿತು. ಎಸ್‌ಎಫ್‌ಐ ಕಾರ್ಯಕರ್ತರು ಇದನ್ನು ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ. ಏಳು ಮಂದಿಯನ್ನು ಈ ಬಗ್ಗೆ ಬಂಧಿಸಲಾಗಿದೆ.

ಇದನ್ನೂ ಓದಿ: PR Sreejesh : ಕಮ್ಯುನಿಷ್ಟ್​ ಸರ್ಕಾರದ ಅಸಡ್ಡೆ, ಬೇಸತ್ತು ಕೇರಳ ತೊರೆಯಲು ನಿರ್ಧರಿಸಿದ ಹಾಕಿ ಆಟಗಾರ ಶ್ರೀಜೇಶ್​

Exit mobile version