ನವದೆಹಲಿ: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ (Former PM HD Deve Gowda) ನೇತೃತ್ವದ ಜಾತ್ಯತೀತ ಜನತಾ ದಳ(JDS) ಭಾರತೀಯ ಜನತಾ ಪಾರ್ಟಿ(BJP) ನೇತೃತ್ವದ ಎನ್ಡಿಎ (NDA) ಮೈತ್ರಿಕೂಟ ಸೇರುತ್ತಿದ್ದಂತೆ ಭಿನ್ನಮತ ಭುಗಿಲೆದ್ದಿದೆ. ಜೆಡಿಎಸ್ ಕರ್ನಾಟಕ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ (CM Ibrahim) ಭಿನ್ನರಾಗ ಹಾಡುತ್ತಿದ್ದಂತೆ, ದೇವೇಗೌಡ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಿದರು. ಈಗ ಕೇರಳ ಜೆಡಿಎಸ್ (Kerala JDS) ಕೂಡ ಬಂಡಾಯ ಬಾವುಟ ಬೀಸಿದೆ. ಬಿಜೆಪಿ ಜತೆಗಿನ ಮೈತ್ರಿಯನ್ನು ವಿರೋಧಿಸಿರುವ ಕೇರಳ ಜೆಡಿಎಸ್, ಸ್ವತಂತ್ರ ಅಸ್ತಿತ್ವ ಕಾಯ್ದುಕೊಳ್ಳುವುದಾಗಿ ಹೇಳಿದೆ. ಹಾಗಾಗಿ, ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ಅವರಿಗೆ ಭಾರೀ ಹಿನ್ನಡೆಯಾಗಿದೆ.
ವಿದ್ಯುತ್ ಸಚಿವ ಕೆ ಕೃಷ್ಣಮೂರ್ತಿ ಹಾಗೂ ಕೇರಳ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಅವರು ಕರ್ನಾಟಕದಲ್ಲಿ, ಪಕ್ಷದ ನಾಯಕತ್ವವನ್ನು ಭೇಟಿ ಮಾಡಿ, ಬಿಜೆಪಿ ಜತೆಗಿನ ಪಕ್ಷದ ಮೈತ್ರಿಯು ಸ್ವೀಕಾರ್ಹವಲ್ಲ. ನೀವು ಕೈಗೊಂಡಿರುವ ನಿರ್ಧಾರವು ಸರಿಯಿಲ್ಲ ಎಂದು ಹೇಳಿದ್ದೇವೆ ಎಂದು ಅವರು ಟಿವಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಾವು ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ ಮತ್ತು ನಾವು ಸ್ವತಂತ್ರವಾಗಿ ಉಳಿಯುತ್ತೇವೆ ಎಂದು ನಾವು ಅವರಿಗೆ ತಿಳಿಸಿದ್ದೇವೆ. ಕೇರಳದಲ್ಲಿ ಸಮಿತಿ ಸಭೆ ನಡೆಸಿ ಸ್ವತಂತ್ರವಾಗಿ ನಿಲ್ಲಲು ನಿರ್ಧರಿಸಿದ್ದೇವೆ. ಎಲ್ಲರೂ ಅದನ್ನು ಒಪ್ಪಿದ್ದಾರೆ ಮತ್ತು ಇದುವೇ ವಾಸ್ತವಿಕ ನಿಲುವು ಆಗಿದೆ ಎಂದು ಕೇರಳ ವಿದ್ಯುತ್ ಸಚಿವ ಕೆ ಕೃಷ್ಣಮೂರ್ತಿ ಅವರು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಭಾರತೀಯ ಜನತಾ ಪಾರ್ಟಿ ಜತೆ ಕೈಜೋಡಿಸಿದ್ದರೂ ಆಡಳಿತಾರೂಢ ಸಿಪಿಎಂ ಜೆಡಿಎಸ್ನೊಂದಿಗೆ ಸಂಬಂಧವನ್ನು ಕಡಿದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಯುಡಿಪಿ ತೀವ್ರ ಟೀಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಜೆಡಿಎಸ್ ಸ್ವತಂತ್ರ ಅಸ್ತಿತ್ವವನ್ನು ಕಾಯ್ದುಕೊಳ್ಳುವುದಾಗಿ ಹೇಳಿದೆ.
ಒಂದು ತಿಂಗಳ ಹಿಂದೆ ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಜೆಡಿಎಸ್ ಘೋಷಿಸಿತ್ತು ಮತ್ತು ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್ಡಿಎ ಸೇರಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ನಂತರ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಈ ಘೋಷಣೆ ಮಾಡಿದ್ದರು.
ಈ ಸುದ್ದಿಯನ್ನೂ ಓದಿ: HD Deve Gowda: ಕೇರಳದ ಸಿಪಿಎಂ, ಬಿಜೆಪಿ-ಜೆಡಿಎಸ್ ಮೈತ್ರಿ ಬೆಂಬಲಿಸುತ್ತದೆ ಎಂದು ಹೇಳಿಲ್ಲ: ಎಚ್.ಡಿ.ದೇವೇಗೌಡ ಸ್ಪಷ್ಟನೆ
ಈ ಮಧ್ಯೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಎಲ್ಡಿಎಫ್ನ ಪಾಲುದಾರ ಜೆಡಿಎಸ್ನ ಮೈತ್ರಿಯನ್ನು ಅನುಮೋದಿಸಿದ್ದಾರೆ ಎಂಬ ಹೇಳಿಕೆಗಳನ್ನು ತಿರಸ್ಕರಿಸಿ, ಆಧಾರರಹಿತ ಮತ್ತು ಸತ್ಯದಿಂದ ದೂರ ಎಂದು ಹೇಳಿದ್ದರು.
ಕರ್ನಾಟಕದಲ್ಲಿ ಜೆಡಿಎಸ್ನ ಬಿಜೆಪಿ ಮೈತ್ರಿಯನ್ನು ಕೇರಳದ ಆಡಳಿತಾರೂಢ ಎಡಪಕ್ಷಗಳು ಅನುಮೋದಿಸಿವೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಕೇರಳ ಸಿಪಿಎಂ ಗ್ರಹಿಕೆಯಲ್ಲಿ ಗೊಂದಲವಿದೆ ಎಂದು ತಮ್ಮ ನಿಲುವನ್ನು ಜೆಡಿಎಸ್ ಮುಖ್ಯಸ್ಥ ಎಚ್ ಡಿ ದೇವೇಗೌಡರು ಸ್ಪಷ್ಟಪಡಿಸಿದ್ದರು. ಈ ಮಧ್ಯೆ, ಕೇರಳ ಜೆಡಿಎಸ್ ಸ್ವತಂತ್ರ ಅಸ್ತಿತ್ವ ಕಾಯ್ದುಕೊಳ್ಳುವುದಾಗಿ ಘೋಷಣೆ ಮಾಡಿದ್ದರಿಂದ ಸಚಿವ ಕೃಷ್ಣಮೂರ್ತಿ ಅವರನ್ನು ಸಂಪುಟದಿಂದ ಕೈ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಿಪಿಎಂ ಹೇಳಿದೆ.