ತಿರುವನಂತಪುರಂ: ದೇಶದ ಹಲವೆಡೆ ಕೋಟ್ಯಂತರ ಜನ ಲಾಟರಿ ಟಿಕೆಟ್ ಖರೀದಿಸುತ್ತಾರೆ. ಕೆಲವೆಂದರೆ ಕೆಲವೇ ಜನಕ್ಕೆ ಮಾತ್ರ ಅದೃಷ್ಟ ಖುಲಾಯಿಸುತ್ತದೆ. ಬಂಪರ್ ಲಾಟರಿ (Lottery) ಹೊಡೆಯಲು ಕೂಡ ತುಂಬ ಅದೃಷ್ಟ ಬೇಕು. ಹೀಗೆ, ಅದೃಷ್ಟ ಎಂದರೆ ಏನು ಎಂಬುದಕ್ಕೆ ಕೇರಳದ ನಜರ್ (Nazar) ಎಂಬ ವ್ಯಕ್ತಿಯೇ ಸಾಕ್ಷಿಯಾಗಿದ್ದಾರೆ. ಹೌದು, ಕೇರಳದ ಕಣ್ಣೂರಿನವರಾದ ನಜರ್ ಅವರಿಗೆ 10 ಕೋಟಿ ರೂ. ಬಂಪರ್ ಲಾಟರಿ (Kerala Summer Lottery) ಹೊಡೆದಿದೆ. ಆಟೋ ಚಾಲಕರಾಗಿರುವ ಇವರೀಗ ರಾತ್ರೋರಾತ್ರಿ ಕೋಟ್ಯಧೀಶರಾಗಿದ್ದಾರೆ.
ಹೌದು, ಕೇರಳದ ಬಂಪರ್ ಸಮ್ಮರ್ ಲಾಟರಿಯ ಬಹುಮಾನ ಘೋಷಣೆಯಾಗಿದೆ. ಕಣ್ಣೂರಿನ ಕಾರ್ತಿಕಾಪುರಂನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ ನಜರ್ ಅವರಿಗೆ ಮೊದಲ ಬಹುಮಾನ ಲಭಿಸಿದ್ದು, ಇವರೀಗ 10 ಕೋಟಿ ರೂಪಾಯಿಗೆ ಒಡೆಯರಾಗಿದ್ದಾರೆ. ರಾತ್ರೋರಾತ್ರಿ ಇವರು ಕೋಟ್ಯಧೀಶರಾಗಿದ್ದು, ನಜರ್ ಸೇರಿ ಇವರ ಕುಟುಂಬಸ್ಥರಿಗೆ ಇನ್ನೂ ಲಾಟರಿ ಸುದ್ದಿ ತಿಳಿದು ಸುಧಾರಿಸಿಕೊಳ್ಳಲು ಆಗಿಲ್ಲ ಎಂದು ತಿಳಿದುಬಂದಿದೆ. “ನನಗೆ ಲಾಟರಿ ಬಹುಮಾನ ಸಿಕ್ಕಿದೆ ಎಂಬ ಸುದ್ದಿ ತಿಳಿದು ಶಾಕ್ ಆಯಿತು. ಈಗಲೂ ನಾನು ಈ ಸುದ್ದಿಯ ಗುಂಗಿನಿಂದ ಹೊರಬಂದಿಲ್ಲ” ಎಂಬುದಾಗಿ ನಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇರಳದಲ್ಲಿ ರಾಜ್ಯ ಸರ್ಕಾರವೇ ಪ್ರಮುಖ ಹಬ್ಬಗಳು ಸೇರಿ ಹಲವು ಸಂದರ್ಭಗಳಲ್ಲಿ ಲಾಟರಿ ಆಯೋಜನೆ ಮಾಡುತ್ತದೆ. ಅದರಂತೆ, ತಿರುವನಂತಪುರಂನಲ್ಲಿರುವ ಗೋರ್ಕಿ ಭವನದಲ್ಲಿ ಬಂಪರ್ ಸಮ್ಮರ್ ಲಾಟರಿ ಘೋಷಣೆ ಮಾಡಲಾಗಿದೆ. ಎರಡನೇ ಬಹುಮಾನವು 50 ಲಕ್ಷ ರೂ. ಆಗಿದೆ. 10 ಕೋಟಿ ರೂ. ಬಹುಮಾನದ ಲಾಟರಿ ಟಿಕೆಟ್‌ಅನ್ನು ಆಲಕೋಡೆಯಲ್ಲಿರುವ ಶ್ರೀ ರಾಜರಾಜೇಶ್ವರ ಏಜೆನ್ಸಿಯು ಮಾರಾಟ ಮಾಡಿತ್ತು ಎಂದು ತಿಳಿದುಬಂದಿದೆ.
ಇದನ್ನೂ ಓದಿ: Dolly Chaiwala: ಅಬ್ಬಬ್ಬಾ ಲಾಟರಿ: ಬಿಲ್ ಗೇಟ್ಸ್ ಭೇಟಿ ಆಯ್ತು; ಈಗ ಮಾಲ್ಡೀವ್ಸ್‌ನಲ್ಲಿ ಡಾಲಿ ಚಾಯ್‌ವಾಲಾ ಮಿಂಚು
ಬೇಸಿಗೆ ಬಂಪರ್ ಲಾಟರಿಗೆ ಈ ಬಾರಿ ಸುಮಾರು 36 ಲಕ್ಷ ಲಾಟರಿ ಟಿಕೆಟ್‌ಗಳನ್ನು ಪ್ರಿಂಟ್ ಮಾಡಲಾಗಿತ್ತು. ಅವುಗಳಲ್ಲಿ 33.5 ಲಕ್ಷ ಟಿಕೆಟ್‌ಗಳಲ್ಲಿ ಮಾರಾಟ ಮಾಡಲಾಗಿತ್ತು. ಇನ್ನು, ಮೊದಲ ಬಹುಮಾನವಾಗಿ 10 ಕೋಟಿ ರೂ. ಗೆದ್ದ ನಜರ್ ಅವರ ಕುಟುಂಬಸ್ಥರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. 10 ಕೋಟಿ ರೂಪಾಯಿಯಲ್ಲಿ ಟ್ಯಾಕ್ಸ್ ಕಡಿತಗೊಂಡು ಎಷ್ಟು ಮೊತ್ತ ಕೈಸೇರುತ್ತದೆ, ಅಷ್ಟು ದುಡ್ಡು ತೆಗೆದುಕೊಂಡು ಮುಂದೇನು ಮಾಡಬೇಕು ಎಂಬ ಯೋಚನೆಯಲ್ಲಿ ಕುಟುಂಬಸ್ಥರಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ