ತಿರುವನಂತಪುರಂ: ಮಂಗಳವಾರ ಸಂವಿಧಾನದ ಕುರಿತು ಟೀಕೆಯ ಮಾತುಗಳನ್ನು ಆಡಿದ್ದ ಕೇರಳದ ಸಂಸ್ಕೃತಿ ಸಚಿವ ಶಾಜಿ ಚೆರಿಯನ್ ಬುಧವಾರ ರಾಜೀನಾಮೆ ನೀಡಿದ್ದಾರೆ. ಇವರ ಮಾತುಗಳು ಕೇರಳ ರಾಜಕೀಯದಲ್ಲಿ ವಿವಾದ ಸೃಷ್ಟಿಸಿದ್ದವು.
ʼʼನಾನು ರಾಜೀನಾಮೆ ನೀಡಿದ್ದೇನೆ. ಇದು ನನ್ನ ವೈಯಕ್ತಿಕ ನಿರ್ಧಾರ. ನಾನು ಯಾವತ್ತೂ ಸಂವಿಧಾನವನ್ನು ಅಗೌರವಿಸಿಲ್ಲ. ನನ್ನ ಭಾಷಣದಿಂದ ಒಂದು ನಿರ್ದಿಷ್ಟ ಭಾಗವನ್ನು ಆಯ್ದುಕೊಂಡು ಅದನ್ನು ಪ್ರಸಾರ ಮಾಡಿ ಸಿಪಿಐಎಂ ಹಾಗೂ ಎಲ್‌ಡಿಎಫ್ ಮೈತ್ರಿಕೂಟದ ಮೇಲೆ ಕೆಸರು ಎರಚಲು ಬಳಸಲಾಗುತ್ತಿದೆʼʼ ಎಂದು ಶಾಜಿ ಚೆರಿಯನ್ ಹೇಳಿದ್ದಾರೆ.
ಇದನ್ನೂ ಮುನ್ನ ಅವರು ನಿನ್ನೆಯ ತಮ್ಮ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿದ್ದರು. ಇವರ ಹೇಳಿಕೆಯಿಂದ ಪಿಣರಾಯಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು.
ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳು ಚೆರಿಯನ್ ಅವರ ಹೇಳಿಕೆಗಳನ್ನು ʻಅಸಹ್ಯಕರ’ ಎಂದು ಬಣ್ಣಿಸಿದ್ದವು. ಶಾಜಿ ಅವರು ಸಂವಿಧಾನಕ್ಕೆ ಅಗೌರವ ಎಸಗಿದ್ದಾರೆ, ಅವರು ಸಚಿವ ಸ್ಥಾನ ತ್ಯಜಿಸಬೇಕು ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು.
ಪತ್ತನಂತಿಟ್ಟದಲ್ಲಿ ಸೋಮವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಚೆರಿಯನ್, ಸಂವಿಧಾನದ ಕುರಿತು ಕೆಲವು ಟೀಕೆಯ ಮಾತುಗಳನ್ನ ಆಡಿದ್ದರು. “ಇದು ಸುಂದರವಾದ ಸಂವಿಧಾನ ಎಂದು ನಾವು ಆಗಾಗ್ಗೆ ಹೇಳುತ್ತೇವೆ. ಆದರೆ ನಾವು ಬ್ರಿಟಿಷರ ವ್ಯವಸ್ಥೆಯನ್ನು ಕುರುಡಾಗಿ ನಕಲು ಮಾಡಿ ಸಂವಿಧಾನವನ್ನು ಬರೆದಿದ್ದೇವೆ. ಶೋಷಣೆಯ ವಿರುದ್ಧ ಇದು ಎಂದಿಗೂ ಯಾವುದೇ ರಕ್ಷಣೆಯನ್ನು ಒದಗಿಸಿಲ್ಲ. ಇದು ಸಾಮಾನ್ಯ ಜನರು ಮತ್ತು ಕಾರ್ಮಿಕ ವರ್ಗವನ್ನು ಲೂಟಿ ಮಾಡಲು ಸಹಾಯ ಮಾಡಿದೆʼʼ ಎಂದು ಹೇಳಿದ್ದರು.
ಈ ಭಾಷಣದ ಕುರಿತು ಸುದ್ದಿ ಹೊರಬೀಳುತ್ತಿದ್ದಂತೆ, ರಾಜ್ಯಪಾಲರ ಕಚೇರಿಯಿಂದ ಈ ಬಗ್ಗೆ ವರದಿ ಕೇಳಲಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಶಾಜಿ ಅವರಿಂದ ವಿವರ ಕೇಳಿದ್ದರು. ಹೆಚ್ಚಿನ ಮುಜುಗರ ತಪ್ಪಿಸಿಕೊಳ್ಳಲು ಶಾಜಿ ಅವರಿಂದ ರಾಜೀನಾಮೆ ಪಡೆಯಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಕೇರಳದ ಸಚಿವರಿಂದ ಸಂವಿಧಾನ ಅವಹೇಳನ, ಪ್ರತಿಭಟನೆಗೆ ಕಾಂಗ್ರೆಸ್ ಸಜ್ಜು