ಜೆರುಸಲೇಂ: ಇಸ್ರೇಲ್ ಹಾಗೂ ಗಾಜಾದ ಹಮಾಸ್ ಉಗ್ರರ ನಡುವಿನ ಸಂಘರ್ಷವು (Israel Palestine War) ಮೂರನೇ ದಿನಕ್ಕೆ ಕಾಲಿಟ್ಟಿದೆ. ಹಮಾಸ್ ಉಗ್ರರ ಮೇಲೆ ಇಸ್ರೇಲ್ ಯುದ್ಧ ಘೋಷಿಸಿದೆ. ಹಮಾಸ್ ಉಗ್ರರು ಕೂಡ ಇಸ್ರೇಲ್ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದಾರೆ. ಹೀಗೆ, ಹಮಾಸ್ ಉಗ್ರರು ಮಾಡಿದ ರಾಕೆಟ್ ದಾಳಿಯಿಂದ ಇಸ್ರೇಲ್‌ನಲ್ಲಿರುವ ಕೇರಳದ ಮಹಿಳೆಯೊಬ್ಬರು (Kerala Woman) ಗಂಭೀರವಾಗಿ ಗಾಯಗೊಂಡಿದ್ದಾರೆ.
ಇಸ್ರೇಲ್‌ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ಕೇರಳದ ಕಣ್ಣೂರು ಜಿಲ್ಲೆಯ ಶೀಜಾ ಆನಂದ್ ಅವರು ರಾಕೆಟ್ ದಾಳಿಯಿಂದ ಗಾಯಗೊಂಡಿದ್ದಾರೆ. ಇವರ ಪತಿ ಹಾಗೂ ಮಕ್ಕಳು ಕೇರಳದಲ್ಲಿಯೇ ಇದ್ದಾರೆ. ಪತಿಯ ಜತೆ ವಿಡಿಯೊ ಕಾಲ್‌ನಲ್ಲಿ ಮಾತನಾಡುವ ವೇಳೆಯೇ ಹಮಾಸ್ ಉಗ್ರರು ರಾಕೆಟ್ ದಾಳಿ ಮಾಡಿದ್ದಾರೆ. ಇದರಿಂದಾಗಿ ಶೀಜಾ ಆನಂದ್ ಅವರ ಕೈ, ಕಾಲು ಹಾಗೂ ಹೊಟ್ಟೆಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಶೀಜಾ ಆನಂದ್ ಆರೋಗ್ಯ ಈಗ ಹೇಗಿದೆ?
ಶೀಜಾ ಆನಂದ್ ಅವರ ಬೆನ್ನಿಗೂ ಪೆಟ್ಟಾಗಿದ್ದು, ಅವರಿಗೆ ಟೆಲ್ ಅವಿವ್‌ನಲ್ಲಿ ಚಿಕಿತ್ಸೆ ನೀಡಲಾಗಿದೆ. ಬೆನ್ನುಮೂಳೆಯ ಸರ್ಜರಿ ಮಾಡಲಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಶೀಜಾ ಆನಂದ್ ಕುಟುಂಬಸ್ಥರು ತಿಳಿಸಿದ್ದಾರೆ. “ವಿಡಿಯೊ ಕಾಲ್ ಮೂಲಕ ಶೀಜಾ ಆನಂದ್ ಜತೆ ಮಾತನಾಡಿದೆ. ಅವಳು ಅಪಾಯದಿಂದ ಪಾರಾಗಿದ್ದಾಳೆ. ಸರ್ಜರಿ ಮಾಡಲಾಗಿದ್ದು, ಈಗ ತೊಂದರೆ ಇಲ್ಲ ಎಂಬುದಾಗಿ ವೈದ್ಯರು ತಿಳಿಸಿದ್ದಾರೆ” ಎಂದು ಶೀಜಾ ಆನಂದ್ ತಾಯಿ ಸರೋಜಿನಿ ತಿಳಿಸಿದ್ದಾರೆ.
ಇದನ್ನೂ ಓದಿ: Israel Palestine War: ಗಾಜಾಪಟ್ಟಿ ನಿರ್ನಾಮವೇ ಇಸ್ರೇಲ್ ಗುರಿ; ಬಾಂಬಿಟ್ಟು ಮಸೀದಿ ಉಡೀಸ್!
ಕಳೆದ ಏಳು ವರ್ಷದಿಂದ ಶೀಜಾ ಆನಂದ್ ಅವರು ಇಸ್ರೇಲ್‌ನಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಎರಡು ತಿಂಗಳಲ್ಲಿ ಕೇರಳಕ್ಕೆ ಬಂದು ಹೋಗುವ ಯೋಜನೆ ಹಾಕಿಕೊಂಡರು ಎಂದು ತಿಳಿದುಬಂದಿದೆ. ಇಸ್ರೇಲ್ ಹಾಗೂ ಗಾಜಾ ಉಗ್ರರ ನಡುವಿನ ಸಂಘರ್ಷದಲ್ಲಿ ಇದುವರೆಗೆ ಎರಡೂ ದೇಶಗಳ 1,100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈಗಲೂ ಉಭಯ ರಾಷ್ಟ್ರಗಳು ಸಂಘರ್ಷದಲ್ಲಿ ತೊಡಗಿವೆ.