ತಿರುವನಂತಪುರಂ: ಕೋಟ್ಯಂತರ ಜನ ಲಾಟರಿ ಟಿಕೆಟ್ ಖರೀದಿಸುತ್ತಾರೆ. ಆದರೆ, ಕೆಲವೆಂದರೆ ಕೆಲವೇ ಜನಕ್ಕೆ ಮಾತ್ರ ಅದೃಷ್ಟ ಖುಲಾಯಿಸುತ್ತದೆ. ಬಂಪರ್ ಲಾಟರಿ ಹೊಡೆಯಲು ಕೂಡ ತುಂಬ ಅದೃಷ್ಟ ಬೇಕು. ಈ ಅದೃಷ್ಟಕ್ಕೆ ಕೇರಳದ 11 ಮಹಿಳಾ ಪೌರ ಕಾರ್ಮಿಕರೇ ನಿದರ್ಶನವಾಗಿದ್ದಾರೆ. ಹೌದು, ಕೇರಳದಲ್ಲಿ (Kerala) 11 ಜನ ಸೇರಿ 250 ರೂಪಾಯಿ ಮೌಲ್ಯದ ಲಾಟರಿ ಟಿಕೆಟ್ ಖರೀದಿಸಿದ್ದು, ಅವರಿಗೆ 10 ಕೋಟಿ ರೂ. ಬಂಪರ್ ಲಾಟರಿ (Kerala Lottery) ಹೊಡೆದಿದೆ. ನಿನ್ನೆ-ಮೊನ್ನೆಯ ತನಕ ಪುರಸಭೆ ವ್ಯಾಪ್ತಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯರೀಗ ಕೋಟ್ಯಧೀಶರಾಗಿದ್ದಾರೆ.
ಮಲಪ್ಪುರಂ ಜಿಲ್ಲೆ ಪರಪ್ಪನಂಗಡಿ ಪುರಸಭೆಯ ಹರಿತಾ ಕರ್ಮ ಸೇನಾದ 11 ಮಹಿಳಾ ಕಾರ್ಮಿಕರು ಈಗ ಅದೃಷ್ಟ ಲಕ್ಷ್ಮೀಯರಾಗಿ ಬದಲಾಗಿದ್ದಾರೆ. ಇವರು 2023ರ ಮುಂಗಾರು ಬಂಪರ್ ಲಾಟರಿ (Monsoon Bumper) ಖರೀದಿಸಿದ್ದು, 250 ರೂಪಾಯಿಯ ಲಾಟರಿ ಟಿಕೆಟ್ ಈಗ ಅವರ ಜೀವನವನ್ನೇ ಬದಲಿಸಿದೆ. ಇದುವರೆಗೆ ಇವರು ಮೂರು ಬಾರಿ ಲಾಟರಿ ಟಿಕೆಟ್ ಖರೀದಿಸಿರಲಿಲ್ಲ. ಈಗ ನಾಲ್ಕನೇ ಬಾರಿ ಖರೀದಿಸಿದಾಗ ಅದೃಷ್ಟ ಖುಲಾಯಿಸಿದೆ.
11 ಮಹಿಳಾ ಕಾರ್ಮಿಕರಲ್ಲಿ ರಾಧಾ ಎಂಬುವರು ಲಾಟರಿ ಟಿಕೆಟ್ ಖರೀದಿಸೋಣ ಎಂದು ಹೇಳಿದ್ದಾರೆ. ಇದಕ್ಕೆ ಉಳಿದೆಲ್ಲ ಮಹಿಳಾ ಕಾರ್ಮಿಕರು ಒಪ್ಪಿಗೆ ಸೂಚಿಸಿ. ಎಲ್ಲರೂ ಒಂದಿಷ್ಟು ಮೊತ್ತ ಹಾಕಿ 250 ರೂ. ಒಗ್ಗೂಡಿಸಿದ್ದಾರೆ. ಈಗ ಅದು 10 ಕೋಟಿ ರೂ. ಆಗಿ ಬದಲಾಗಿದೆ. ಲಾಟರಿಯ 10 ಕೋಟಿ ರೂಪಾಯಿಯಲ್ಲಿ ಆಜೆಂಟ್ ಕಮಿಷನ್ ಹಾಗೂ ಆದಾಯ ತೆರಿಗೆ ಕಡಿತವಾಗಿ, 11 ಮಹಿಳೆಯರಲ್ಲಿ ಒಬ್ಬ ಮಹಿಳೆಯ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ.
ಇದನ್ನೂ ಓದಿ: Lottery: ಬಡ ಟೈಲರ್‌ಗೆ ಒಲಿದ ಅದೃಷ್ಟ ಲಕ್ಷ್ಮಿ; ಉಪ್ಪಿನಂಗಡಿಯ ವ್ಯಕ್ತಿಗೆ ಕೇರಳ ಲಾಟರಿಯಲ್ಲಿ ಬಂತು 80 ಲಕ್ಷ!
ಕೇರಳದಲ್ಲಿ ರಾಜ್ಯ ಸರ್ಕಾರವೇ ಪ್ರಮುಖ ಹಬ್ಬಗಳು ಸೇರಿ ಹಲವು ಸಂದರ್ಭಗಳಲ್ಲಿ ಲಾಟರಿ ಆಯೋಜನೆ ಮಾಡುತ್ತದೆ. ಅದರಂತೆ, ಮುಂಗಾರು ಲಾಟರಿಯನ್ನು ಜುಲೈ 26ರಂದು ಘೋಷಣೆಯಾದಾಗ, ಮಹಿಳೆಯರಿಗೆ ಬಂಪರ್ ಲಾಟರಿ ಲಭಿಸಿದೆ. “ನಾವು 11 ಜನರೂ ಸಮನಾಗಿ ದುಡ್ಡು ಹಾಕಿ 250 ರೂ. ಹೊಂದಿಸಿದೆವು. ಇಷ್ಟು ಹಣ ಕೊಟ್ಟು ಲಾಟರಿ ಟಿಕೆಟ್ ಖರೀದಿಸಿದೆವು. ಈಗ ಬಂಪರ್ ಲಾಟರಿ ಲಭಿಸಿರುವುದು ಖುಷಿಯಾಗಿದೆ” ಎಂದು ಲಾಟರಿ ಟಿಕೆಟ್ ಖರೀದಿಸುವ ಐಡಿಯಾ ಕೊಟ್ಟ ರಾಧಾ ತಿಳಿಸಿದ್ದಾರೆ.