ನವದೆಹಲಿ: ಪಾಕಿಸ್ತಾನದ ಐಎಸ್ಐ(Pakistan ISI) ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ಖಲಿಸ್ತಾನ್ ಜನಾಭಿಪ್ರಾಯ(Khalistan referendum) ಸಂಗ್ರಹವನ್ನು ಆಯೋಜಿಸುತ್ತಿದೆಯೇ ಹೊರತು ಭಾರತದಲ್ಲಿನ ಸಿಖ್ಖರಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖಲಿಸ್ತಾನ ಪರ ಮಾಜಿ ನಾಯಕ ಹಾಗೂ ದಳ್ ಖಸ್ಲಾ ಸಂಘಟನೆಯ ಸಂಸ್ಥಾಪಕ ಜಸ್ವಂತ್ ಸಿಂಗ್ ಠಾಕೇದಾರ್ ಹೇಳಿದ್ದಾರೆ.
ಕೆಲವು ಸಿಖ್ಖರು ಪಾಕಿಸ್ತಾನದ ಸಾಧನವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಸಿಖ್ಖರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದಾರೆ, ಅವರ ಉನ್ನತಿಗೆ ಕೆಲಸ ಮಾಡುತ್ತಿದ್ದಾರೆಂದು ಠಾಕೇದಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್‌ನಲ್ಲಿರುವ ಸಿಖ್ ಪ್ರತ್ಯೇಕತವಾದಿ ನಾಯಕ ಠಾಕೇದಾರ್ ಅವರನ್ನು ಎಎನ್ಐ ಸುದ್ದಿ ಸಂಸ್ಥೆ ಸಂದರ್ಶನ ಮಾಡಿದೆ. ಅಮೆರಿಕದಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿರುವ, ಗುರ್‌ಪತ್ವಂತ್ ಸಿಂಗ್ ಪನ್ನೂನ್ ನೇತೃತ್ವದ ಸಿಖ್ ಫಾರ್ ಜಸ್ಟೀಸ್(SFJ) ಸಿಖ್ಖರಿಗಾಗಿ ಪ್ರತ್ಯೇಕ ರಾಷ್ಟ್ರಕ್ಕೆ ಸಂಬಂಧಿಸಿದಂತೆ ಜನಮತ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದೆ. ಈ ಅಭಿಯಾನ ಕುರಿತು ಠಾಕೇದಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಯಾರು ಪಂಜಾಬ್‌ನಲ್ಲಿದ್ದಾರೋ ಅವರು ಜನಮತದ ಬೇಡಿಕೆಯನ್ನು ಹೊಂದಿಲ್ಲ. ಹಾಗೆಯೇ, ಕೆನಡಾ, ಅಮೆರಿಕ ಅಥವಾ ಬ್ರಿಟನ್‌ನಲ್ಲಿರುವ ಸಿಖ್ಖರಿಗೆ ಈ ಜನಮತದಲ್ಲಿ ಮತ ಹಾಕುವ ಹಕ್ಕಿಲ್ಲ ಎಂದು ಠಾಕೇದಾರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಖಲಿಸ್ತಾನ ಪರ ನಿಲುವು, 8 ಯುಟ್ಯೂಬ್ ಚಾನೆಲ್ ಬ್ಲಾಕ್ ಮಾಡಿದ ಕೇಂದ್ರ ಸರ್ಕಾರ
ಇದೊಂದು ಜನರನ್ನು ತಪ್ಪುದಾರಿಗೆಳೆಯುವ ಪಾಖಂಡಿತನ. ಜನರಿಗೆ ಗೊತ್ತಿದೆ, ಇದು ಅವರ ಆದಾಯದ ಮೂಲವಾಗಿದೆ ಎಂದು ಠಾಕೇದಾರ್ ಅವರು ತೀವ್ರವಾಗಿ ಜನಮತ ಸಂಗ್ರಹ ಅಭಿಯಾನ ನಡೆಸುವವರ ವಿರುದ್ಧ ಕಿಡಿಕಾರಿದ್ದಾರೆ. ಇದೇ ವೇಳೆ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೇಲಿನ ದಾಳಿಯಲ್ಲಿ ಸಿಖ್ಖರ ಕೈವಾಡ ಇಲ್ಲ ಎಂದೂ ಪ್ರತಿಕ್ರಿಯಿಸಿದರು.