Site icon Vistara News

Khalistan Row: ಕೆನಡಾದಲ್ಲಿ ಭಾರತೀಯ ರಾಯಭಾರಿಗಳ ಕೊಲೆ ಬೆದರಿಕೆ ಪೋಸ್ಟರ್‌ಗಳು ಮತ್ತೆ ಪ್ರತ್ಯಕ್ಷ, ಟ್ರುಡೊ ಮೌನ

khalistan posters

ಒಟ್ಟಾವ: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಭಾರತದ ವಿರುದ್ಧ ದಂಗೆಗೆ, ಭಾರತೀಯ ರಾಜತಾಂತ್ರಿಕರ ಹತ್ಯೆಗೆ ಕರೆ ನೀಡುವ ಖಲಿಸ್ತಾನಿ ಉಗ್ರರ ಪೋಸ್ಟರ್‌ಗಳು (Khalistan Row) ಮತ್ತೆ ಪ್ರತ್ಯಕ್ಷವಾಗಿವೆ. ಆದರೆ ಕೆನಡಾ ಸರ್ಕಾರ (India Canada Row) ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಖಲಿಸ್ತಾನಿಗಳ ನೆಲೆಯಾಗಿರುವ ಸರ್ರೆಯಲ್ಲಿ ಇವರ ಚಟುವಟಿಕೆ ಅಡೆತಡೆಯಿಲ್ಲದೆ ಮುಂದುವರಿದಿದೆ. ಭಾರತೀಯ ರಾಜತಾಂತ್ರಿಕರ ಹತ್ಯೆಗೆ ಕರೆನೀಡುವ ಪೋಸ್ಟರ್‌ಗಳನ್ನು ದೇಶದಲ್ಲಿ ಅಲ್ಲಲ್ಲಿ ಪ್ರದರ್ಶಿಸಲಾಗುತ್ತಿದೆ. ಈ ಸರ್ರೆಯಲ್ಲಿರುವ ಗುರುದ್ವಾರದ ಬಳಿಯೇ ಜೂನ್ 18ರಂದು ಖಲಿಸ್ತಾನ್ ಟೈಗರ್ ಫೋರ್ಸ್ ಭಯೋತ್ಪಾದಕ (Khalistan Tiger Force terrorist) ಹರ್ದೀಪ್ ಸಿಂಗ್ ನಿಜ್ಜರ್‌ನನ್ನು (Hardeep Singh Nijjar) ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಗುರುದ್ವಾರ ಆತನ ನಿರ್ವಹಣೆಯಲ್ಲಿತ್ತು.

ನಿಷೇಧಿತ ಭಯೋತ್ಪಾದಕ ಜಿಎಸ್ ಪನ್ನು ಕೂಡ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ (Canada PM Justin Trudeau) ಅವರಿಗೆ ಪತ್ರ ಬರೆದು, ಭಾರತೀಯ ರಾಯಭಾರಿ ಸಂಜಯ್ ಕುಮಾರ್ ವರ್ಮಾ ಅವರನ್ನು ಉಚ್ಚಾಟಿಸುವಂತೆ ಒತ್ತಾಯಿಸಿದ್ದಾನೆ. ತೀವ್ರಗಾಮಿಗಳು ಇಲ್ಲಿ ಭಾರತದ ವಿರುದ್ಧ ಪೂರ್ಣ ಪ್ರಮಾಣದ ಪ್ರಚಾರ ನಡೆಸುತ್ತಿದ್ದಾರೆ. ಭಾರತೀಯ ಏಜೆಂಟರು ಅವರನ್ನು ಹತ್ಯೆ ಮಾಡಲು ಮುಂದಾಗಿದ್ದು, ಸಿಖ್ಖರು ಸುರಕ್ಷಿತವಾಗಿರುವಂತೆ ಕೆನಡಾದ ಗುಪ್ತಚರರು ಸಿಖ್‌ ಸಮುದಾಯದೊಳಗೆ ಪ್ರಚಾರ ಮಾಡುತ್ತಿದ್ದಾರೆ.

ಉಗ್ರಗಾಮಿ ನಿಜ್ಜರ್ ಹತ್ಯೆಗಾಗಿ ಭಾರತೀಯ ಕಾನ್ಸುಲ್ ಜನರಲ್ ಮನೀಶ್ ಮತ್ತು ಇತರರನ್ನು ಗುರಿಯಾಗಿಸಿಕೊಂಡು ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಹೊರಗೆ ಪ್ರತಿಭಟಿಸಲು ಮೂಲಭೂತವಾದಿ ಸಿಖ್ಖರು ಅಕ್ಟೋಬರ್ 21ರಂದು “ಕಿಲ್ ಇಂಡಿಯಾ” ಕಾರ್ ರ್ಯಾಲಿಯನ್ನು ಆಯೋಜಿಸುತ್ತಿದ್ದಾರೆ. ಇದು ಮತ್ತು ಅಕ್ಟೋಬರ್ 28ರ ನಿಜ್ಜರ್‌ ಹತ್ಯೆ ಕುರಿತ ʼಜನಾಭಿಪ್ರಾಯ ಸಂಗ್ರಹಣೆʼಗೆ ಕೆನಡಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಾಕಿಸ್ತಾನಿ ಏಜೆಂಟರ ಬೆಂಬಲವೂ ಇದೆ.

ಜಸ್ಟಿನ್‌ ಟ್ರುಡೊ ಸರ್ಕಾರ ಭಾರತದ ಮನವಿಗಳಿಗೆ ಕಿವುಡಾಗಿದ್ದು, ʼಸಿಕ್ಖರ ವಾಕ್ ಸ್ವಾತಂತ್ರ್ಯʼದ ಹೆಸರನ್ನು ಮುಂದಿಟ್ಟುಕೊಂಡು ಖಲಿಸ್ತಾನಿಗಳಿಗೆ ಮರೆಯಲ್ಲಿ ಬೆಂಬಲ ನೀಡುತ್ತಿದೆ. ಕೆನಡಾದಲ್ಲಿ ಭಾರತದ ವಿರುದ್ಧ ಪ್ರತ್ಯೇಕತಾವಾದಿ ಚಳವಳಿಯನ್ನು ಉತ್ತೇಜಿಸುತ್ತಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡವಿದೆ ಎನ್ನುತ್ತ ಭಾರತ-ಯುಎಸ್ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡಿಸಲು ಶ್ರಮಿಸುತ್ತಿದೆ.

ಪಂಜಾಬ್‌ನ ಸಿಖ್ ಯುವಕರನ್ನು ಆಮಿಷಕ್ಕೆ ಒಳಪಡಿಸಿ ಮೂಲಭೂತವಾದಿಗಳನ್ನಾಗಿಸುತ್ತಿರುವ ಖಲಿಸ್ತಾನಿಗಳು, ಭಾರತದಲ್ಲಿ ಸಿಖ್ಖರ ವಿರುದ್ಧ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಅಪಪ್ರಚಾರ ಮಾಡಿ ಕೆನಡಾ, ಯುಕೆ, ಯುಎಸ್ ಮತ್ತು ಜರ್ಮನಿಯಲ್ಲಿ ಭಾರಿ ಹಣವನ್ನು ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: Khalistan Row: ಭಾರತದ ಬಿಗಿಪಟ್ಟಿಗೆ ಮಣಿದು ಕೊನೆಗೂ ಕ್ರಮಕ್ಕೆ ಮುಂದಾದ ಕೆನಡಾ, ಒಬ್ಬನ ಬಂಧನ

Exit mobile version