ಗ್ಲಾಸ್ಗೋ: ಕೆನಡಾದ ಜತೆಗೆ (India Canada row) ನಡೆಯುತ್ತಿರುವ ಭಾರತದ ಖಲಿಸ್ತಾನ್ ಗಲಾಟೆಯ (Khalistan row) ನಡುವೆ, ಸ್ಕಾಟ್ಲೆಂಡ್‌ನಲ್ಲಿಯೂ ಆಘಾತಕಾರಿ ಘಟನೆ ನಡೆದಿದೆ. ಬ್ರಿಟನ್‌ನ ಭಾರತೀಯ ರಾಯಭಾರಿ (Indian High Commissioner to the UK) ವಿಕ್ರಮ್ ದೊರೈಸ್ವಾಮಿ (Vikram Doraiswami) ಅವರನ್ನು ಸ್ಕಾಟ್ಲೆಂಡ್‌ನ (Scotland) ಗ್ಲಾಸ್ಗೋದಲ್ಲಿ ಗುರುದ್ವಾರದೊಳಕ್ಕೆ ಪ್ರವೇಶಿಸದಂತೆ ಖಲಿಸ್ತಾನಿಗಳು ತಡೆದಿದ್ದು, ಮರಳಿ ಕಳಿಸಿದ್ದಾರೆ.
ʼಸಿಖ್ ಯೂತ್ ಯುಕೆ’ ಎಂಬ ಇನ್‌ಸ್ಟಾಗ್ರಾಮ್ ಚಾನೆಲ್‌ನಲ್ಲಿ ಈ ಘಟನೆಯ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅದರ ಪ್ರಕಾರ ಖಲಿಸ್ತಾನಿ ಪರ ಕಾರ್ಯಕರ್ತನೊಬ್ಬ, ಆಲ್ಬರ್ಟ್ ಡ್ರೈವ್‌ನಲ್ಲಿರುವ ಗ್ಲಾಸ್ಗೋ ಗುರುದ್ವಾರವನ್ನು ಪ್ರವೇಶಿಸದಂತೆ ದೊರೈಸ್ವಾಮಿಯನ್ನು ತಡೆಯುತ್ತಿರುವುದನ್ನು ತೋರಿಸಲಾಗಿದೆ.
ಗುರುದ್ವಾರದ ಪಾರ್ಕಿಂಗ್‌ನಲ್ಲಿ ರಾಜತಾಂತ್ರಿಕರ ಕಾರಿನ ಬಳಿ ಇಬ್ಬರು ವ್ಯಕ್ತಿಗಳು ಬಂದು, ಅವರು ಬಾಗಿಲು ತೆರೆಯದಂತೆ ಗಟ್ಟಿಯಾಗಿ ತಡೆಯುತ್ತಾರೆ. ಒಳಗಿನಿಂದ ರಾಯಭಾರಿ ಲಾಕ್ ಆಗಿದ್ದ ಕಾರಿನ ಬಾಗಿಲನ್ನು ತೆರೆಯಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ನಂತರ ಗುರುದ್ವಾರ ಆವರಣದಿಂದ ಹೈಕಮಿಷನರ್ ಕಾರು ಹೊರಡುವುದನ್ನು ವಿಡಿಯೋ ತೋರಿಸಿದೆ. “ಅವರು ಕೆನಡಾ ಮತ್ತು ಇತರ ಸ್ಥಳಗಳಲ್ಲಿ ಸಿಖ್ಖರನ್ನು ನೋಯಿಸುತ್ತಿದ್ದಾರೆ, ನಾವು ಇಲ್ಲಿ ಗ್ಲಾಸ್ಗೋದಲ್ಲಿ ಮಾಡಿದಂತೆ ಪ್ರತಿಯೊಬ್ಬ ಸಿಖ್ಖನೂ ಯಾವುದೇ ಭಾರತೀಯ ರಾಯಭಾರಿ ವಿರುದ್ಧ ಪ್ರತಿಭಟಿಸಬೇಕು” ಎಂದು ಪ್ರತಿಭಟನಾಕಾರ ವೀಡಿಯೊದಲ್ಲಿ ಹೇಳಿದ್ದಾನೆ.
ಮಾಧ್ಯಮ ವರದಿಯ ಪ್ರಕಾರ, ದೊರೈಸ್ವಾಮಿ ಅವರು ಗ್ಲಾಸ್ಗೋ ಗುರುದ್ವಾರದ ಗುರುದ್ವಾರ ಸಮಿತಿಯೊಂದಿಗೆ ಇಂದು ಸಭೆಯೊಂದನ್ನು ಯೋಜಿಸಿದ್ದರು.
ದೊರೈಸ್ವಾಮಿ ಅವರಿಗೆ ಪ್ರವೇಶ ನಿರಾಕರಿಸಿದ ಘಟನೆಯನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರವಾಗಿ ಖಂಡಿಸಿದೆ. ಘಟನೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ, “ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಯಾವುದೇ ಧರ್ಮ ಅಥವಾ ಸಮುದಾಯದವರು ಇಲ್ಲಿಗೆ (ಗುರುದ್ವಾರ) ಬರಬಹುದು. ನಾವು ಹಿಂಸಾಚಾರವನ್ನು ನಂಬುವ ಧರ್ಮವಲ್ಲ. ಬದಲಾಗಿ ಮಾನವೀಯತೆಯ ಸಂರಕ್ಷಕರು. ಪ್ರಧಾನಿ ಮೋದಿ ಅವರು ನಮ್ಮ ಸಮುದಾಯದ ಕೆಲಸವನ್ನು ಶ್ಲಾಘಿಸಿದ್ದಾರೆ. ಸಿಖ್ಖರು ವಿಶ್ವದ ಎಲ್ಲೆಡೆಯನ್ನು ಪ್ರತಿನಿಧಿಸುತ್ತಾರೆ. ಪ್ರಪಂಚದಲ್ಲಿ ಸಿಖ್ಖರಿಗೆ ಸುರಕ್ಷಿತವಾದ ಸ್ಥಳ ಭಾರತದಲ್ಲಿದೆ…” ಎಂದಿದ್ದಾರೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಯ ನಂತರ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕತೆ ಹಳಸಿದೆ. ಈ ವರ್ಷದ ಆರಂಭದಲ್ಲಿ, ಲಂಡನ್‌ನಲ್ಲಿಯೂ ಭಾರತೀಯ ಹೈಕಮಿಷನ್‌ನ ಹೊರಗೆ ಖಲಿಸ್ತಾನಿಗಳ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿತ್ತು. ಈ ಸಂದರ್ಭದಲ್ಲಿ ಖಲಿಸ್ತಾನ್ ಪರ ಕಾರ್ಯಕರ್ತರು ಬಾಲ್ಕನಿಗೆ ಹತ್ತಿ ಕಟ್ಟಡದ ಮುಂಭಾಗದ ಕಂಬದಿಂದ ರಾಷ್ಟ್ರಧ್ವಜವನ್ನು ಕೆಳಗೆ ಎಳೆದಿದ್ದರು. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಲ್ಲಿ ಭದ್ರತೆಯ ಕೊರತೆಯಿದೆ ಎಂದಿದ್ದ ಭಾರತ, ಇದಕ್ಕೆ ಪ್ರತಿಕ್ರಿಯೆಯಾಗಿ ಹೊಸದಿಲ್ಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಮತ್ತು ಹೈಕಮಿಷನರ್ ನಿವಾಸದ ಹೊರಗಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕಿತ್ತು.
ಇದನ್ನೂ ಓದಿ: India Canada Row: ಕೆನಡಾ ಮಿಲಿಟರಿ ವೆಬ್‌ಸೈಟ್‌ಗೇ ಗುನ್ನಾ ಇಟ್ಟ ಭಾರತೀಯ ಹ್ಯಾಕರ್ಸ್ ಗ್ರೂಪ್!