Site icon Vistara News

Amritpal Singh: ಖಲಿಸ್ತಾನಿ ಉಗ್ರ ಅಮೃತ್‌ಪಾಲ್‌ ಸಿಂಗ್‌ ಬಳಿ ಸ್ವಂತ ಮಿಲಿಟರಿ, ಬಾಂಬ್‌ ಸ್ಕ್ವಾಡ್!‌

amritpal singh

ಅಮೃತ್‌ಪಾಲ್‌ ಸಿಂಗ್‌

ಅಮೃತಸರ: ಪೊಲೀಸರ ವ್ಯಾಪಕ ಶೋಧದ ಬಳಿಕವೂ ಇನ್ನೂ ಸೆರೆಸಿಗದ ಖಲಿಸ್ತಾನಿ ನಾಯಕ ಅಮೃತ್‌ಪಾಲ್‌ ಸಿಂಗ್‌ ಬಗ್ಗೆ ಕಂಗೆಡಿಸುವ ಇನ್ನಷ್ಟು ಅಂಶಗಳು ಹೊರಹೊಮ್ಮುತ್ತಿವೆ. ಈತ ತನ್ನದೇ ಆದ ಮಿಲಿಟರಿ ಕಟ್ಟಿದ್ದ, ಈತನ ಬಳಿ ಬಾಂಬ್‌ ಸ್ಕ್ವಾಡ್‌ ಇತ್ತು ಎಂಬುದು ಬಯಲಾಗಿದೆ.

ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ನಾಯಕನಾಗಿದ್ದ ಅಮೃತ್‌ಪಾಲ್‌, ಆನಂದ್‌ಪುರ್‌ ಖಾಲ್ಸಾ ಫೋರ್ಸ್‌ (AKF) ಎಂಬ ಹೆಸರಿನ ತನ್ನದೇ ಸೈನ್ಯವನ್ನು ಕಟ್ಟಲು ಯತ್ನಿಸಿದ್ದ. ಇದು ಖಲಿಸ್ತಾನಿ ಟೈಗರ್‌ ಫೋರ್ಸ್‌ (KTF) ಎಂಬ ಈ ಹಿಂದಿನ ಉಗ್ರ ಸಂಘಟನೆಯ ರೀತಿಯಲ್ಲಿತ್ತು. ಜತೆಗೆ ಒಂದು ಮಾನವ ಬಾಂಬ್‌ ಸ್ಕ್ವಾಡ್‌ ಅನ್ನೂ ಸಿದ್ಧಪಡಿಸುತ್ತಿದ್ದ.

ಶನಿವಾರದಿಂದ ಪಂಜಾಬ್‌ ಪೊಲೀಸರು ಅಮೃತ್‌ಪಾಲ್‌ನ ಬೆನ್ನು ಬಿದ್ದಿದ್ದಾರೆ. ಪೊಲೀಸರಿಂದ ತಲೆ ತಪ್ಪಿಸಿಕೊಂಡು ಓಡಾಡುತ್ತಿರುವ ಈತ ಹಾಗೂ ಇವನ 78 ಸಹಚರರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಈಗಾಗಲೇ ಇವನು ಪೊಲೀಸರ ವಶದಲ್ಲಿದ್ದಾನೆ ಎಂದೂ ಹೇಳಲಾಗಿದ್ದು, ಇವನ ಸ್ಥಿತಿಗತಿಯ ಬಗ್ಗೆ ಪೊಲೀಸರು ಮಾಹಿತಿ ನೀಡಬೇಕು ಎಂದೂ ಕೋರ್ಟ್‌ನಲ್ಲಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಲಾಗಿದೆ.

ಅಮೃತ್‌ಪಾಲ್‌ ಸಿಂಗ್‌ ಮಾದಕದ್ರವ್ಯ ವ್ಯಸನ ತಡೆ ಶಿಬಿರಗಳನ್ನು ಹಾಗೂ ಗುರುದ್ವಾರಗಳನ್ನು ತನ್ನ ಆಯುಧ ಸಂಗ್ರಹಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಆತ್ಮಹತ್ಯಾ ಬಾಂಬ್‌ ದಾಳಿಗೆ ಯುವಕರನ್ನು ಸಿದ್ಧಗೊಳಿಸುತ್ತಿದ್ದಾನೆ ಎಂದು ಮಾಹಿತಿಯನ್ನು ಬೇಹುಗಾರಿಕೆ ಸಂಸ್ಥೆಗಳು ನೀಡಿದ್ದವು. ಮಾದಕವ್ಯಸನದಿಂದ ಮುಕ್ತರಾಗುತ್ತಿದ್ದ ಯುವಕರನ್ನು ಈತ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದ ಎಂದು ಗೊತ್ತಾಗಿದೆ. ಇವರ ಬ್ರೈನ್‌ವಾಶ್‌ ಮಾಡಿ, ಹಿಂದಿನ ಪಂಜಾಬ್‌ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಅವರನ್ನು ಹತ್ಯೆ ಮಾಡಿದ ಆತ್ಮಹತ್ಯಾ ದಾಳಿಕೋಳ ದಿಲಾವರ್‌ ಸಿಂಗ್‌ ಎಂಬಾತನ ಹಾದಿಯಲ್ಲಿ ನಡೆಯಲು ಪ್ರಚೋದಿಸುತ್ತಿದ್ದ.‌

ಇದನ್ನೂ ಓದಿ: Amritpal Singh: ಬಂಧಿತ ಸಹಚರರಲ್ಲಿ ನಾಲ್ವರನ್ನು ಅಸ್ಸಾಂಗೆ ಕಳಿಸಿದ ಪಂಜಾಬ್​ ಪೊಲೀಸ್​; ಇನ್ನೂ ಸಿಕ್ಕಿಲ್ಲ ಅಮೃತ್​ಪಾಲ್​ ಸಿಂಗ್​!

ದುಬೈಯಿಂದ ಕಳೆದ ವರ್ಷ ಹಿಂದಿರುಗಿದ್ದ ಅಮೃತ್‌ಪಾಲ್‌, ಪಾಕಿಸ್ತಾನದ ಐಎಸ್‌ಐ ಹಾಗೂ ಕೆನಡಾದಲ್ಲಿರುವ ಖಲಿಸ್ತಾನಿ ಭಯೋತ್ಪಾದಕರ ಸಂಪರ್ಕದಲ್ಲಿದ್ದಾನೆ. ಪಂಜಾಬ್‌ನಲ್ಲಿ ಯುವಕರ ಮನಸ್ಸು ಕೆಡಿಸಿ ಅವರನ್ನು ಆತ್ಮಹತ್ಯಾ ದಾಳಿಕೋರರಾಗುವಂತೆ ಪ್ರಚೋದಿಸುತ್ತಿದ್ದ. ಇದಕ್ಕಾಗಿ ತಯಾರಿಸಲಾಗಿದ್ದ ಶಸ್ತ್ರಾಸ್ತ್ರಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಯೂನಿಫಾರ್ಮ್‌ಗಳು ಹಾಗೂ ಜಾಕೆಟ್‌ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೇಲೆ AKF ಎಂಬ ಮಾರ್ಕ್‌ ಹಾಕಲಾಗಿದೆ.

ಇತ್ತೀಚೆಗೆ ಆತ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾದ ಗತಿಯೇ ಆಗಲಿದೆ ಎಂದು ಎಚ್ಚರಿಸಿದ್ದ ಹಿನ್ನೆಲೆಯಲ್ಲಿ, ಅವನ ಸಿದ್ಧತೆಗಳು ಹೆಚ್ಚು ಗಂಭೀರ ತನಿಖೆಗೆ ಅರ್ಹವಾಗಿವೆ. ಈತ ದುಬೈಯಲ್ಲಿ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ಐಎಸ್‌ಐ ಸಂಪರ್ಕಕ್ಕೆ ಬಂದಿದ್ದು, ಅಲ್ಲಿ ಭಾರತವಿರೋಧಿ ಕೃತ್ಯಗಳಿಗೆ ಅಗತ್ಯವಾದ ಪರಿಣತಿಯನ್ನು ಪಡೆದಿದ್ದ. ಇದಕ್ಕೆ ಐಎಸ್‌ಐ ಹಣಸಹಾಯ ಮಾಡುವ ಆಶ್ವಾಸನೆ ನೀಡಿತ್ತು.

ಇದನ್ನೂ ಓದಿ: Amritpal Singh: ಖಲಿಸ್ತಾನ ಪ್ರತ್ಯೇಕ ರಾಷ್ಟ್ರದ ವಿಷಬೀಜ ಬಿತ್ತುತ್ತಿರುವ ಅಮೃತ್‌ ಪಾಲ್‌ ಸಿಂಗ್‌ ಬಂಧನ?

Exit mobile version