ನವದೆಹಲಿ: ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (Sikhs For Justice) ಸಂಘಟನೆಯ ಉಗ್ರ, ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಪ್ತಿ ಮಾಡಿದ ಬೆನ್ನಲ್ಲೇ ಉಗ್ರನ ಕುರಿತು ಮತ್ತೊಂದು ಸ್ಫೋಟಕ ಮಾಹಿತಿ ಲಭ್ಯವಾಗಿದೆ. “ಭಾರತವನ್ನು ವಿಭಜಿಸಿ, ಹಲವು ದೇಶಗಳನ್ನಾಗಿ ಸೃಷ್ಟಿಸುವುದು ಗುರುಪತ್ವಂತ್ ಸಿಂಗ್ ಪನ್ನುನ್ ಗುರಿಯಾಗಿದೆ” ಎಂದು ಎನ್‌ಐಎ ಮೂಲಗಳಿಂದ ತಿಳಿದುಬಂದಿದೆ.
“ಗುರುಪತ್ವಂಗ್ ಸಿಂಗ್ ಪನ್ನುನ್ ಭಾರತದ ಏಕತೆ ಹಾಗೂ ಸಮಗ್ರತೆಗೆ ಸವಾಲೊಡ್ಡಿದ್ದಾನೆ. ಆಡಿಯೊ ಮೆಸೇಜ್‌ಗಳ ಪರಿಶೀಲನೆ ಬಳಿಕ ಇಂತಹ ಮಾಹಿತಿ ಲಭ್ಯವಾಗಿದೆ. ಭಾರತವನ್ನು ವಿಭಜಿಸಿ, ಹಲವು ದೇಶಗಳನ್ನು ಸೃಷ್ಟಿಸುವುದು, ಕಾಶ್ಮೀರದ ಜನರಿಗಾಗಿಯೇ ಒಂದು ದೇಶವನ್ನು ರಚಿಸುವುದು ಹಾಗೂ ಮುಸ್ಲಿಂ ದೇಶವನ್ನು ಕೂಡ ಸ್ಥಾಪಿಸುವುದು ಆತನ ಗುರಿಯಾಗಿದೆ. ಹಲವು ಬಾರಿ ಬೆದರಿಕೆಗಳ ಮೂಲಕವೂ ಗುರುಪತ್ವಂತ್ ಸಿಂಗ್ ಪನ್ನುನ್ ತನ್ನ ಕುತಂತ್ರ ಬುದ್ಧಿಯನ್ನು ಪ್ರದರ್ಶಿಸಿದ್ದಾನೆ” ಎಂದು ಮೂಲಗಳು ತಿಳಿಸಿವೆ.
ಖಲಿಸ್ತಾನಿ ಉಗ್ರರ ವಿಚಾರಕ್ಕಾಗಿಯೇ ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಳೆದ ಜೂನ್‌ನಲ್ಲಿ ಹತ್ಯೆಗೀಡಾದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಭಾರತ, ಮಾಡಿರುವ ಆರೋಪಗಳಿಗೆ ಸರಿಯಾದ ಸಾಕ್ಷ್ಯ ಕೊಡಿ ಎಂದಿದೆ. ಆದರೆ, ಇದುವರೆಗೆ ಕೆನಡಾ ಹತ್ಯೆಯ ಕುರಿತು ಯಾವುದೇ ನಿಖರ ಮಾಹಿತಿ ಒದಗಿಸಿಲ್ಲ ಎಂದು ತಿಳಿದುಬಂದಿದೆ.
ಪನ್ನುನ್ ಆಸ್ತಿ ಜಪ್ತಿ
ಖಲಿಸ್ತಾನಿ ಉಗ್ರರ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ಮಧ್ಯೆ ಬಿಕ್ಕಟ್ಟು ಉಂಟಾದ ಬೆನ್ನಲ್ಲೇ, ಗುರುಪತ್ವಂತ್ ಸಿಂಗ್ ಪನ್ನುನ್ ಆಸ್ತಿಯನ್ನು ಎನ್‌ಐಎ ಜಪ್ತಿ ಮಾಡಿದೆ. ಚಂಡಿಗಢದಲ್ಲಿರುವ ಒಂದು ನಿವಾಸ, ಅಮೃತಸರದ ಖಾನ್‌ಕೋಟ್‌ನಲ್ಲಿರುವ ಕೃಷಿ ಜಮೀನು ಹಾಗೂ ಪನ್ನು ಗ್ರಾಮದಲ್ಲಿರುವ ಕೃಷಿ ಜಮೀನನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಾರ್ವಜನಿಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ನಿವಾಸಕ್ಕೆ ಎನ್‌ಐಎ ನೋಟಿಸ್ ಅಂಟಿಸಿದೆ. ಜಮೀನಿನಲ್ಲೂ ಜಪ್ತಿ ಕುರಿತು ನೋಟಿಸ್ ಅಂಟಿಸಲಾಗಿದೆ.
ಇದನ್ನೂ ಓದಿ: India Canada Row: ಅತ್ತ ದರಿ ಇತ್ತ ಪುಲಿ; ಭಾರತದ ಜತೆಗಿನ ಸಂಬಂಧ ಮುಖ್ಯ ಎಂದ ಕೆನಡಾ ಸಚಿವ
ಜಿ20 ಶೃಂಗಸಭೆಗೆ ಬೆದರಿಕೆ ಹಾಕಿದ್ದ ಪನ್ನುನ್
ವಿದೇಶದಲ್ಲಿ ಕುಳಿತೇ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾನೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಅಡ್ಡಿಪಡಿಸಬೇಕು ಎಂದು ಭಾರತದ ಮುಸ್ಲಿಮರಿಗೆ ಈತ ಕರೆ ನೀಡಿದ್ದ. “ಕಾಶ್ಮೀರದ ಮುಸ್ಲಿಮರು ದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ಅಡ್ಡಿಪಡಿಸಬೇಕು. ಶುಕ್ರವಾರದ ಪ್ರಾರ್ಥನೆ ಬಳಿಕ ದೆಹಲಿಯಲ್ಲಿರುವ ಪ್ರಗತಿ ಮೈದಾನಕ್ಕೆ (ಶೃಂಗಸಭೆ ನಡೆಯುವ ಸ್ಥಳ) ಪರೇಡ್ ನಡೆಸಬೇಕು. ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನ ಧ್ವಜ ಹಾರಿಸಲಾಗುತ್ತದೆ” ಎಂದು ಗುರ್‌ಪತ್ವಂತ್ ಸಿಂಗ್ ಪನ್ನುನ್ ಎಚ್ಚರಿಕೆ ನೀಡಿದ್ದ.