ಒಟ್ಟಾವ: ಮಾಜಿ ಪ್ರಧಾನಿ ಇಂಧಿರಾ ಗಾಂಧಿ ಅವರ ಹತ್ಯೆಯನ್ನು ಕೆನಡಾದಲ್ಲಿರುವ ಖಲಿಸ್ತಾನಿಗಳು ಸಂಭ್ರಮಾಚರಣೆ ಮಾಡಿದ ಕೆಲವೇ ದಿನಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು (Khalistani Terrorist) ಕೆನಡಾದ ಸುರ‍್ರೆ ನಗರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹರ್ದೀಪ್ ಸಿಂಗ್ ನಿಜ್ಜಾರ್ ಭಾರತದ ಮೋಸ್ಟ್ ವಾಂಟೆಡ್ ಉಗ್ರನಾಗಿದ್ದು, ಎನ್‌ಐಎ ಈತನ ವಿರುದ್ಧ ತನಿಖೆ ನಡೆಸುತ್ತಿತ್ತು.
ಪಂಜಾಬಿಗಳೇ ಹೆಚ್ಚಿರುವ ಸುರ‍್ರೆ ನಗರದ ಗುರುನಾನಕ್ ಸಿಖ್ ಗುರುದ್ವಾರದ ಬಳಿಕ ಖಲಿಸ್ತಾನಿ ಉಗ್ರನನ್ನು ಹತ್ಯೆ ಮಾಡಲಾಗಿದೆ. ಪಂಜಾಬ್‌ನಲ್ಲಿ ಅರ್ಚಕರೊಬ್ಬರ ಕೊಲೆಗೆ ಪಿತೂರಿ ನಡೆಸಿರುವುದು, ಮೂಲಭೂತವಾದದ ಪ್ರಸರಣ ಸೇರಿ ನಾಲ್ಕು ಪ್ರಕರಣಗಳಲ್ಲಿ ಎನ್‌ಐಎ ಉಗ್ರನ ವಿರುದ್ಧ ತನಿಖೆ ನಡೆಸುತ್ತಿದೆ. ಅಲ್ಲದೆ, ಈತನ ಕುರಿತು ಮಾಹಿತಿ ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಕೂಡ ಎನ್‌ಐಎ ಘೋಷಿಸಿದೆ.
ಖಲಿಸ್ತಾನ್ ಟೈಗರ್ ಫೋರ್ಸ್ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್ ಸಮುದಾಯದವರನ್ನು ಎತ್ತಿಕಟ್ಟುತ್ತಿದ್ದ. ಹಾಗಾಗಿ, ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಗೆ ಸೇರಿಸಿದೆ.
ಇದನ್ನೂ ಓದಿ: Avtar Khanda Dies: ಬ್ರಿಟನ್‌ನಲ್ಲಿ ಭಾರತದ ತಿರಂಗಾ ಕೆಳಗಿಳಿಸಿದ್ದ ಖಲಿಸ್ತಾನ್ ಉಗ್ರ ಅವತಾರ್ ಖಂಡಾ ಸಾವು
ಕೆಲ ದಿನಗಳ ಹಿಂದಷ್ಟೇ ಖಲಿಸ್ತಾನಿ ಉಗ್ರ, ಖಲಿಸ್ತಾನ್ ನಾಯಕ, ಬಂಧಿತ ಅಮೃತ್‌ಪಾಲ್ ಸಿಂಗ್‌ನ ಆಪ್ತ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರ ರೂವಾರಿ ಅವತಾರ್ ಸಿಂಗ್ ಖಂಡಾ ಲಂಡನ್‌ನಲ್ಲಿ ಮೃತಪಟ್ಟಿದ್ದ. ಲಂಡನ್‌ನಲ್ಲಿ ಜೂನ್ 15ರಂದು ಆತ ಮೃತಪಟ್ಟಿದ್ದು, ಇದಕ್ಕೆ ಕ್ಯಾನ್ಸರ್ ಕಾರಣ ಎಂದು ಹೇಳಲಾಗುತ್ತಿದೆ. ಇದಲ್ಲದೆ, ಅಮೃತ್‌ಪಾಲ್ ಸಿಂಗ್ ಬಂಧನದ ಬಳಿಕ ಕೆನಡಾದಲ್ಲಿರುವ ಖಲಿಸ್ತಾನಿಗಳು ಇನ್ನಷ್ಟು ತೀವ್ರವಾಗಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ತಿಳಿದುಬಂದಿದೆ.