ಹೊಸದಿಲ್ಲಿ: ಖಲಿಸ್ತಾನ್ ಉಗ್ರರು (Khalistani Terrorist) ಹಾಗೂ ಗ್ಯಾಂಗ್‌ಸ್ಟರ್‌ಗಳ (gangsters) ನಡುವಿನ ಲಿಂಕ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ಆರು ರಾಜ್ಯಗಳ 50 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ದಾಳಿ (NIA raid) ನಡೆಸಿದೆ.
ಮೂಲಗಳ ಪ್ರಕಾರ, ಖಲಿಸ್ತಾನ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹವಾಲಾ ಆಪರೇಟರ್‌ಗಳು, ದರೋಡೆಕೋರರು, ಮತ್ತಿತರ ಸಂಘಟಿತ ಅಪರಾಧ ಜಾಲಗಳಲ್ಲಿ ಸಕ್ರಿಯರಾದವರನ್ನು ಬಂಧಿಸಲು ದಾಳಿಗಳು ನಡೆಯುತ್ತಿವೆ. ಪಂಜಾಬ್‌ನಲ್ಲಿ 30, ರಾಜಸ್ಥಾನದಲ್ಲಿ 13, ಹರಿಯಾಣದಲ್ಲಿ 4, ಉತ್ತರಾಖಂಡದಲ್ಲಿ 2 ಮತ್ತು ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ತಲಾ 1 ಸ್ಥಳಗಳಲ್ಲಿ ದಾಳಿ ನಡೆದಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯು (National investigation Agency- NIA) ಭಾರತದಿಂದ ಪರಾರಿಯಾಗಿ ಬ್ರಿಟನ್, ಅಮೆರಿಕ, ಕೆನಡಾ, ದುಬೈ, ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿ ನೆಲೆಸಿರುವ 19 ಖಲಿಸ್ತಾನಿ ಭಯೋತ್ಪಾದಕರ ಪಟ್ಟಿಯನ್ನು ಈ ಹಿಂದೆ ಬಿಡುಗಡೆ ಮಾಡಿದ್ದು, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನಿಷೇಧಿತ ಖಲಿಸ್ತಾನಿ ಪರವಾದ ಸಿಖ್ಸ್ ಫಾರ್ ಜಸ್ಟಿಸ್ (sikhs for justice- SFJ) ನ ಸದಸ್ಯ, ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಂಬಾತನ ಆಸ್ತಿಯನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡ ಒಂದು ದಿನದ ನಂತರ ಈ ಕ್ರಮ ಬಂದಿದೆ. ವರದಿಗಳ ಪ್ರಕಾರ, ಪರಾರಿಯಾದ ಈ 19 ಮಂದಿಯ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಇವರು ವಿದೇಶದಲ್ಲಿದ್ದುಕೊಂಡು ಭಾರತ ವಿರೋಧಿ ಪ್ರಚಾರ ನಡೆಸುತ್ತಿದ್ದಾರೆ.
10 ಲಕ್ಷ ರೂ.ಗಳ ಬಹುಮಾನ
ಘೊಷಿತ ಭಯೋತ್ಪಾದಕ ಹರ್ವಿಂದರ್ ಸಿಂಗ್ ಸಂಧು ಅಲಿಯಾಸ್ ರಿಂಡಾ ಮತ್ತು ಲಖ್ಬೀರ್ ಸಿಂಗ್ ಸಂಧು ಅಲಿಯಾಸ್ ಲಾಂಡಾ ಅವರನ್ನು ಬಂಧಿಸಲು ಸಹಾಯ ಮಾಡುವವರಿಗೆ ತಲಾ 10 ಲಕ್ಷ ರೂಪಾಯಿ ಬಹುಮಾನವನ್ನು ಎನ್ಐಎ ಘೋಷಿಸಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪದ ಮೇಲೆ ನಿಷೇಧಿತ ಸಂಘಟನೆಯಾದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (ಬಿಕೆಐ) ನೊಂದಿಗೆ ಇವರಿಗೆ ಸಂಬಂಧವಿದೆ.
ಖಲಿಸ್ತಾನ್ ಪರ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಎನ್‌ಐಎ ಬುಧವಾರ ಬಿಕೆಐನ ಮೂವರು ಸಹಚರರಾದ ಫಿರೋಜ್‌ಪುರದ ಪರ್ಮಿಂದರ್ ಸಿಂಗ್ ಕೈರಾ, ಪಂಜಾಬ್‌ನ ತರ್ನ್ ತರನ್‌ನ ಸತ್ನಾಮ್ ಸಿಂಗ್ ಮತ್ತು ಯದ್ವಿಂದರ್ ಸಿಂಗ್ ಅವರ ತಲೆಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದೆ.
NIA ಪ್ರಕಾರ, ಭಾರತದ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕದಡುವ ಮತ್ತು ಪಂಜಾಬ್‌ನಲ್ಲಿ ಭಯೋತ್ಪಾದನೆಯನ್ನು ಹರಡುವ ಗುರಿಯನ್ನು ಹೊಂದಿರುವ BKIನ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿ ಈ ವರ್ಷದ ಆರಂಭದಲ್ಲಿ ದಾಖಲಾದ ಪ್ರಕರಣದಲ್ಲಿ ಮತ್ತು ಇತರ ನಾಲ್ವರು ಬೇಕಾಗಿದ್ದಾರೆ.
ಇದನ್ನೂ ಓದಿ: Khalistani Terrorist : ವಿದೇಶದಲ್ಲಿ ಕುಳಿತು ದುಷ್ಕೃತ್ಯ ನಡೆಸುವ 19 ಖಲಿಸ್ತಾನಿ ಉಗ್ರರ ಪಟ್ಟಿ ಬಿಡುಗಡೆ ಮಾಡಿದ ಎನ್ಐಎ