ಬ್ರಿಟನ್: ಭಾರತದಲ್ಲಿ ಖಲಿಸ್ತಾನಿಗಳ ನಾಯಕ ಅಮೃತ್‌ಪಾಲ್ ಸಿಂಗ್‌ನನ್ನು ಬಂಧಿಸಲಾಗಿದ್ದು, ಕೆನಡಾ ಸೇರಿ ಹಲವು ದೇಶಗಳಲ್ಲಿ ಖಲಿಸ್ತಾನಿಗಳ ಉಗ್ರರನ್ನು ಹತ್ಯೆಗೈಯಲಾಗಿದೆ. ಹಾಗಾಗಿ, ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಖಲಿಸ್ತಾನಿ ಉಗ್ರರು ಸಂಚು ರೂಪಿಸಲಾಗಿದೆ ಎಂದು ಕೆಲ ದಿನಗಳ ಹಿಂದಷ್ಟೇ ಗುಪ್ತಚರ ಇಲಾಖೆ ಎಚ್ಚರಿಸಿತ್ತು. ಇದರ ಬೆನ್ನಲ್ಲೇ, ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಎದುರು 30-40 ಖಲಿಸ್ತಾನಿ ಉಗ್ರರು ಪ್ರತಿಭಟನೆ ನಡೆಸುವ ಮೂಲಕ ಉದ್ಧಟತನ ಮಾಡಿದ್ದಾರೆ.
ಶನಿವಾರ ಸಂಜೆ ಖಲಿಸ್ತಾನಿ ಉಗ್ರರು ಉಗ್ರ ಸಂಘಟನೆಯ ಧ್ವಜ ಹಿಡಿದು ಲಂಡನ್‌ನಲ್ಲಿರುವ ಹೈಕಮಿಷನ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ ಭದ್ರತೆ ಹೆಚ್ಚಿಸಿದ ಪೊಲೀಸರು ಹೆಚ್ಚು ಹೊತ್ತು ಉಗ್ರರು ಕಚೇರಿ ಎದುರು ಇರಲು ಬಿಟ್ಟಿಲ್ಲ. ಕೊನೆಗೆ ಪೊಲೀಸರಿಗೆ ಹೆದರಿದ ಉಗ್ರರು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ. ಕೆಲ ತಿಂಗಳ ಹಿಂದಷ್ಟೇ ಪಂಜಾಬ್‌ನಲ್ಲಿ ಅಮೃತ್‌ಪಾಲ್ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾಗ ಲಂಡನ್ ಹೈಕಮಿಷನ್ ಕಚೇರಿಗೆ ನುಗ್ಗಿದ್ದ ಖಲಿಸ್ತಾನಿಗಳು ಭಾರತದ ಧ್ವಜವನ್ನು ತೆರವುಗೊಳಿಸಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.
#WATCH | 30-40 Khalistanis gathered outside Indian High Commission in London around 12:30 pm to 2:30 pm GMT today. UK Police were present at the spot. Protesters have left the site now pic.twitter.com/HtSraIXmoe
— ANI (@ANI) July 8, 2023
ಖಲಿಸ್ತಾನಿ ಉಗ್ರರ ಹತ್ಯೆ
ಕೆಲ ತಿಂಗಳಲ್ಲಿ ವಿದೇಶದಲ್ಲಿರುವ ಮೂವರು ಖಲಿಸ್ತಾನಿ ಉಗ್ರರು ಹತ್ಯೆಗೀಡಾಗಿದ್ದಾರೆ. ಮೇ ತಿಂಗಳಲ್ಲಿ ಪಾಕಿಸ್ತಾನ ಮೂಲದ ಖಲಿಸ್ತಾನಿ ಉಗ್ರ ಪರಮ್‌ಜಿತ್ ಸಿಂಗ್ ಪಂಜ್ವಾರ್, ಜೂನ್‌ನಲ್ಲಿ ಅವತಾರ್ ಸಿಂಗ್ ಖಂಡಾ ಬ್ರಿಟನ್‌ನಲ್ಲಿ ಹತ್ಯೆಗೀಡಾಗಿದ್ದಾರೆ. ಹಾಗೆಯೇ, ಜೂನ್‌ನಲ್ಲಿಯೇ ಕೆನಡಾದಲ್ಲಿ ಖಲಿಸ್ತಾನಿಗಳ ನಾಯ ಹರ್ದೀಪ್ ಸಿಂಗ್ ನಿಜ್ಜಾರ್‌ನನ್ನು ಹತ್ಯೆ ಮಾಡಲಾಗಿದೆ. ಇದರಿಂದಾಗಿ ಖಲಿಸ್ತಾನಿ ಉಗ್ರರು ಒತ್ತಡದಲ್ಲಿದ್ದಾರೆ. ಏಕಾಏಕಿ ತಮ್ಮ ನಾಯಕರ ಹತ್ಯೆಯಿಂದ ಅವರು ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Khalistani Terrorists: ಹಿಂದು ನಾಯಕರು, ಭಾರತದ ರಾಯಭಾರಿಗಳೇ ಖಲಿಸ್ತಾನಿಗಳ ಟಾರ್ಗೆಟ್; ಗುಪ್ತಚರ ಇಲಾಖೆ ಅಲರ್ಟ್
ಯಾರ‍್ಯಾರು ಟಾರ್ಗೆಟ್?
ವಿದೇಶಗಳಲ್ಲಿರುವ ಭಾರತದ ರಾಯಭಾರಿಗಳು, ಪಂಜಾಬ್‌ನಲ್ಲಿರುವ ಹಿಂದು ಪ್ರಮುಖರನ್ನು ಗುರಿಯಾಗಿಸಿ ದಾಳಿ ಮಾಡಲು ಖಲಿಸ್ತಾನಿಗಳು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಅದರಲ್ಲೂ, ಖಲಿಸ್ತಾನಿಗಳೇ ಜಾಸ್ತಿ ಇರುವ ಅಮೆರಿಕ, ಬ್ರಿಟನ್, ಕೆನಡಾ ಹಾಗೂ ಆಸ್ಟ್ರೇಲಿಯಾದಲ್ಲಿರುವ ಭಾರತದ ರಾಯಭಾರಿಗಳು ಪ್ರಮುಖ ಗುರಿಯಾಗಿದ್ದಾರೆ. ಇದಕ್ಕಾಗಿ, ಈ ರಾಷ್ಟ್ರಗಳಲ್ಲಿರುವ ಭಾರತದ ರಾಯಭಾರಿ ಹಾಗೂ ರಾಜತಾಂತ್ರಿಕ ಕಚೇರಿಗಳ ಭದ್ರತೆ ಹೆಚ್ಚಿಸಲಾಗುತ್ತಿದೆ. ಹಾಗೆಯೇ, ಖಲಿಸ್ತಾನಿ ಚಟುವಟಿಕೆಗಳ ಮೇಲೆ ಹೆಚ್ಚಿನ ನಿಗಾ ಇರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.