ನವದೆಹಲಿ: ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್‌ನನ್ನು ಕೇಂದ್ರ ಗೃಹ ಸಚಿವಾಲಯವು(Union Home Ministry) ಭಯೋತ್ಪಾದಕ (Goldy brar is Terrorist) ಎಂದು ಘೋಷಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(UAPA)ಯಡಿ ಗೋಲ್ಡಿ ಬ್ರಾರ್‌ನಿಗೆ ಉಗ್ರ ಪಟ್ಟ ಕಟ್ಟಲಾಗಿದೆ. ಕಾಂಗ್ರೆಸ್ ರಾಜಕಾರಣಿಯೂ ಆಗಿದ್ದ ಖ್ಯಾತ ರ್ಯಾಪ್ ಸಿಂಗರ್ ಸಿಧು ಮೂಸೆವಾಲಾ (Sidhu Moosewala) ಕೊಲೆ ಹೊಣೆಯನ್ನು ಈತ ಹೊತ್ತುಕೊಂಡಿದ್ದ.
ಗೋಲ್ಡಿ ಬ್ರಾರ್ ಎಂದೇ ಕುಖ್ಯಾತನಾಗಿರುವ ಸತೀಂದರ್ಜಿತ್ ಸಿಂಗ್, ವಿದ್ಯಾರ್ಥಿ ವೀಸಾ ಮೂಲಕ 2007ರಲ್ಲಿ ಕೆನಾಡಗೆ ಹೋಗಿದ್ದ. ಕೊಲೆ, ಸುಲಿಗೆ ಸೇರಿದಂತೆ ತನ್ನ ಕ್ರಿಮಿನಲ್ ಚಟುವಟಿಕೆಗಳನ್ನು ಕೆನಡಾದಲ್ಲಿದ್ದುಕೊಂಡೇ ನಡೆಸುತ್ತಿದ್ದಾನೆ. ಈತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿಯ ನಿಕಟವರ್ತಿಯಾಗಿದ್ದಾನೆ.
ಶಂಶೇರ್ ಸಿಂಗ್ ಮತ್ತು ಪ್ರೀತ್ಪಾಲ್ ಕೌರ್ ಅವರ ಪುತ್ರ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಪ್ರಸ್ತುತ ಕೆನಡಾದ ಬ್ರಾಂಪ್ಟನ್‌ನಲ್ಲಿ ವಾಸಿಸುತ್ತಿದ್ದಾನೆ. ಈತ ಖಲಿಸ್ತಾನ್ ಪರ ಭಯೋತ್ಪಾದಕ ಗುಂಪು ಬಬ್ಬರ್ ಖಾಲ್ಸಾದೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಕೇಂದ್ರ ಸರ್ಕಾರವು ತನ್ನ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಗಡಿಯಾಚೆಗಿನ ಏಜೆನ್ಸಿಯ ಬೆಂಬಲದೊಂದಿಗೆ ಬ್ರಾರ್ ಅನೇಕ ಹತ್ಯೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಮತ್ತು ರಾಷ್ಟ್ರೀಯವಾದಿ ಪರ ನಾಯಕರಿಗೆ ಬೆದರಿಕೆ ಕರೆಗಳನ್ನು ಮಾಡುವಲ್ಲಿ ಮುಂಚೂಣಿಯಲ್ಲಿದದಾನೆ. ಅನೇಕರಿಗೆ ವಸೂಲಿಗೆ ಬೇಡಿಕೆ ಇಟ್ಟಿದ್ದಾನೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹತ್ಯೆ ಮಾಡುವ ಬೆದರಿಕೆಗಳನ್ನು ಹಾಕುತ್ತಾನೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಗೋಲ್ಡಿ ಬ್ರಾರ್ ಗಡಿಯಾಚೆಯಿಂದ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕ ವಸ್ತುಗಳನ್ನು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಭಾರತದಲ್ಲಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಈತನ ಪಾಲಿದೆ. ಬ್ರಾರ್ ಪಂಜಾಬ್‌ನ ಶಾಂತಿ, ಕೋಮು ಸೌಹಾರ್ದತೆ ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾನೆ. ವಿಧ್ವಂಸಕ ಕೃತ್ಯಗಳು, ಭಯೋತ್ಪಾದನಾ ಘಟಕಗಳನ್ನು ಹೆಚ್ಚಿಸುವುದು, ಉದ್ದೇಶಿತ ಹತ್ಯೆಗಳು ಮತ್ತು ಇತರ ದೇಶವಿರೋಧಿ ಚಟುವಟಿಕೆಗಳಿಗೆ ಈತ ಉತ್ತೇಜನ ನೀಡುತ್ತಿದ್ದಾನೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Goldy Brar: ಭಾರತದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ತಲೆಗೆ 1.5 ಕೋಟಿ ರೂ. ಬಹುಮಾನ ಘೋಷಿಸಿದ ಕೆನಡಾ