ಲಂಡನ್: ಬರೋಬ್ಬರಿ 70 ವರ್ಷಗಳ ಬಳಿಕ ಬ್ರಿಟನ್‌ನಲ್ಲಿ ರಾಜ- ರಾಣಿಯ ಪಟ್ಟಾಭಿಷೇಕ ನಡೆಯುತ್ತಿದೆ. ಮೇ 6ರಂದು ನಡೆಯಲಿರುವ ಅದ್ಧೂರಿ ಪಟ್ಟಾಭಿಷೇಕ (King Charles Coronation) ಸಮಾರಂಭದಲ್ಲಿ 74 ವರ್ಷದ ಪ್ರಿನ್ಸ್ ಚಾರ್ಲ್ಸ್ III ಅಧಿಕೃತವಾಗಿ ರಾಜನಾಗಿ ಪಟ್ಟವೇರಲಿದ್ದಾರೆ. ಈ ಸಮಾರಂಭಕ್ಕೆ ಭಾರತದಿಂದ ಅಧಿಕೃತವಾಗಿ ಹಲವರನ್ನು ಆಹ್ವಾನಿಸಲಾಗಿದೆ.
ಸಮಾರಂಭ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬ್ಬೆ ಅರಮನೆಯಲ್ಲಿ ನಡೆಯಲಿದ್ದು, ವಿಶೇಷವಾಗಿ ಅಮಂತ್ರಿತರಾದ 2,200 ಅತಿಥಿಗಳು ಭಾಗವಹಿಸಲಿದ್ದಾರೆ. ಯುನೈಟೆಡ್ ಕಿಂಗ್‌ಡಮ್‌ನ ಪ್ರಧಾನ ಮಂತ್ರಿ ರಿಷಿ ಸುನಕ್ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ, ಧ್ವಜಧಾರಿಗಳ ಮೆರವಣಿಗೆಯನ್ನು ಮುನ್ನಡೆಸಲಿದ್ದಾರೆ. ರಾಜಮನೆತನದ ಅತಿಥಿ ಪಟ್ಟಿಯಲ್ಲಿರುವ ಅನೇಕ ಭಾರತೀಯರ ಉಪಸ್ಥಿತಿ ಭಾರತೀಯರ ಗಮನ ಸೆಳೆದಿದೆ.
ನಮ್ಮ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಮಾರಂಭದಲ್ಲಿ ಭಾರತದ ಅಧಿಕೃತ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಮುಂಬೈ ಡಬ್ಬಾವಾಲಾಗಳು: ಲಂಚ್‌ಬಾಕ್ಸ್ ವಿತರಣೆಯ ನಿಖರ ಸೇವೆಗೆ ಹೆಸರುವಾಸಿಯಾದ ಮುಂಬೈನ ಡಬ್ಬಾವಾಲಾಗಳನ್ನು ಅವರ ಸಮುದಾಯದ ಕೆಲವು ಸದಸ್ಯರು ಪ್ರತಿನಿಧಿಸಲಿದ್ದಾರೆ. ಕಿಂಗ್ ಚಾರ್ಲ್ಸ್ ಅವರ ಮದುವೆಯಲ್ಲಿ ಹಾಜರಿದ್ದ ಅತಿಥಿಗಳ ಪಟ್ಟಿಯಲ್ಲಿ ಇವರೂ ಇದ್ದರು. ಇವರು ಮಹಾರಾಷ್ಟ್ರದ ವಾರಕರಿ ಸಮುದಾಯದ ಪುಣೇರಿ ಪಗ್ಡಿ ಹಾಗೂ ಶಾಲನ್ನು ರಾಜನಿಗೆ ಹೊದೆಸಲಿದ್ದಾರೆ.
ನಟಿ ಸೋನಂ ಕಪೂರ್: ಬಾಲಿವುಡ್ ನಟಿ ಸೋನಂ ಕಪೂರ್ ರಾಯಲ್ ಅತಿಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯರಲ್ಲಿ ಒಬ್ಬರು. ಆಕೆ ಸಮಾರಂಭದಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಸಭೆಗೆ ಸಂಬಂಧಿಸಿದ ನಿರೂಪಣೆ ಮಾಡಬೇಕಿದೆ.
ಸೌರಭ್ ಫಡ್ಕೆ: ಪುಣೆಯಿಂದ ಬಂದು ಬ್ರಿಟನ್‌ನಲ್ಲಿ ನೆಲೆಸಿರುವ ಆರ್ಕಿಟೆಕ್ಟ್ ಸೌರಭ್ ಫಡ್ಕೆ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಸೌರಭ್ ಅವರು ಪ್ರಿನ್ಸ್ ಫೌಂಡೇಶನ್‌ನ ಬಿಲ್ಡಿಂಗ್ ಕ್ರಾಫ್ಟ್ ಪ್ರೋಗ್ರಾಂ ಮತ್ತು ಪ್ರಿನ್ಸ್ ಫೌಂಡೇಶನ್ ಸ್ಕೂಲ್ ಆಫ್ ಟ್ರೆಡಿಷನಲ್ ಆರ್ಟ್ಸ್‌ನ ಪದವೀಧರ. ಹಲವಾರು ವರ್ಷಗಳಿಂದ ಗ್ರಾಮೀಣ ಭಾರತದಲ್ಲಿ ಶಾಲೆಗಳನ್ನು ನಿರ್ಮಿಸುವ ಮತ್ತು ವಿದ್ಯಾರ್ಥಿಗಳಿಗೆ ಕಲಿಸುವ ಚಾರಿಟಿ ಚಾಂಪಿಯನ್‌ಗಳಲ್ಲಿ ಒಬ್ಬರು.
ಗುಲ್ಫ್‌ಶಾ: ದೆಹಲಿ ನಿವಾಸಿ ಗುಲ್ಫ್‌ಶಾ ಅವರು 2022ರಲ್ಲಿ ಪ್ರತಿಷ್ಠಿತ ಪ್ರಿನ್ಸ್ ಟ್ರಸ್ಟ್ ಗ್ಲೋಬಲ್ ಪ್ರಶಸ್ತಿಯನ್ನು ಪಡೆದಿದ್ದರು. ಪ್ರಿನ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಪಾಲುದಾರ ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್‌ನ ಸ್ಥಾಪಕರಲ್ಲಿ ಅವರು ಒಬ್ಬರಾಗಿದ್ದಾರೆ. ಒಬ್ಬ ಸಾಮಾನ್ಯ ಎಲೆಕ್ಟ್ರಿಷಿಯನ್‌ನ ಮಗಳಾಗಿ ಈಕೆ ಈ ಸಾಧನೆ ಮಾಡಿದ್ದಾರೆ.
ಡಾ. ಇಸಾಕ್ ಮಥಾಯ್: ಬೆಂಗಳೂರಿನ ಸೌಖ್ಯ ಇಂಟರ್‌ನ್ಯಾಶನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್‌ನ ನಿರ್ದೇಶಕ ಡಾ.ಮಥಾಯ್ ಸಮಾರಂಭಕ್ಕೆ ಆಹ್ವಾನ ಪಡೆದಿದ್ದಾರೆ. ಕ್ವೀನ್ ಕನ್ಸೋರ್ಟ್ ಕ್ಯಾಮಿಲಿಯಾ ಅವರು ಸೌಖ್ಯ ಯುರೋಪ್‌ನ ನಿಯಮಿತ ಗ್ರಾಹಕರು. ಇದನ್ನು ಲಂಡನ್‌ನಲ್ಲಿ 101 ಕ್ಲಿನಿಕ್ ಎಂದೂ ಕರೆಯುತ್ತಾರೆ. ಇದು ಯುರೋಪಿನ ಮೊದಲ ಮತ್ತು ಅತಿದೊಡ್ಡ ಹೋಲಿಸ್ಟಿಕ್ ಹೆಲ್ತ್‌ಕೇರ್ ಕ್ಲಿನಿಕ್. ಪ್ರಿನ್ಸ್ ಚಾರ್ಲ್ಸ್ ಕೂಡ 2019ರಲ್ಲಿ ಇದಕ್ಕೆ ಭೇಟಿ ನೀಡಿದ್ದಾರೆ. ರಾಣಿ ಎಲಿಜಬೆತ್ ಅವರ ಅಂತ್ಯಕ್ರಿಯೆಗೂ ಇವರನ್ನು ಆಹ್ವಾನಿಸಲಾಗಿತ್ತು.
ಮಂಜು ಮಾಲ್ಹಿ: ಇವರು ಪ್ರಸಿದ್ಧ ಚೆಫ್. ಬ್ರಿಟಿಷ್ ಆಂಗ್ಲೋ-ಇಂಡಿಯನ್ ಪಾಕಪದ್ಧತಿ ತಜ್ಞ ಮತ್ತು ಚಾರಿಟಿ ಓಪನ್ ಏಜ್‌ನ ರೆಸಿಡೆಂಟ್ ಚೆಫ್. ಈಕೆ ಭಾರತೀಯ ಸಾಂಪ್ರದಾಯಿಕ ಪಾಕಪದ್ಧತಿಗಳಿಂದ ಪ್ರಭಾವಿತಳು. 51 ವರ್ಷದ ಈಕೆ ಕೋವಿಡ್ ಸಮಯದಲ್ಲಿ ಮಾಡಿದ ಚಾರಿಟಿಗಾಗಿ ಬ್ರಿಟಿಷ್ ಎಂಪೈರ್ ಮೆಡಲ್ (BEM) ಸಹ ಪಡೆದಿದ್ದಾರೆ.
ಇದನ್ನೂ ಓದಿ: ಬ್ರಿಟನ್ ರಾಜನೆಡೆಗೆ ಮೂರು ಮೊಟ್ಟೆ ಎಸೆದ ವಿದ್ಯಾರ್ಥಿ; ಸ್ವಲ್ಪದರಲ್ಲೇ ತಪ್ಪಿಸಿಕೊಂಡ ಕಿಂಗ್ ಚಾರ್ಲ್ಸ್-ಕ್ಯಾಮಿಲ್ಲಾ