ನವದೆಹಲಿ: ಭಾರತದ ಪೊಲೀಸ್ ಇಲಾಖೆಯ ಮಾಜಿ ಅಧಿಕಾರಿ ಹಾಗೂ ಪಾಂಡಿಚೆರಿ ಕೇಂದ್ರಾಡಳಿತ ಪ್ರದೇಶದ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ (Kiran Bedi) ಅವರ ಬದುಕು ಅನೇಕರಿಗೆ ಸ್ಫೂರ್ತಿ. 71ರ ವಯಸ್ಸಿನಲ್ಲೂ ಫಿಟ್ ಅಂಡ್ ಫೈನ್ ಆಗಿರುವ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದು, ಅದರಲ್ಲಿ ತಮ್ಮ ಫಿಟ್‌ನೆಸ್‌ನ ಮಂತ್ರವನ್ನು ತಿಳಿಸಿದ್ದಾರೆ.
ಕಿರಣ್ ಬೇಡಿ ಅವರು ಇದುವರೆಗೆ ಎಂದಿಗೂ ಸಮೋಸಾ, ಪೂರಿ, ಕಚೋರಿ, ಪಕೋಡಾವನ್ನು ಸೇವಿಸಿಲ್ಲವಂತೆ. “ನಾನು ಸುಮ್ಮನೆ ಅನಾವಶ್ಯಕ ತಿಂಡಿಗಳನ್ನು ತಿನ್ನುವುದಿಲ್ಲ. ಹಾಗೆಯೇ ಗೊತ್ತಿದ್ದೂ ಗೊತ್ತಿದ್ದೂ ಎಣ್ಣೆಯಲ್ಲಿ ಕರಿದ ತಿಂಡಿಯನ್ನು ತಿನ್ನುವುದಿಲ್ಲ. ಪಾನಿ ಪುರಿ ತಿನ್ನಬೇಕು ಎಂದೆನಿಸಿದರೆ ಗಂಜಿ ಕುಡಿದುಬಿಡುತ್ತೇನೆ. ನನಗೆ ನಡೆದಾಡುವುದು ಎಂದರೆ ಇಷ್ಟ. ನನ್ನ ದಿನಚರಿಯಲ್ಲಿ ಫಿಟ್‌ನೆಸ್ ಇದ್ದೇ ಇರುತ್ತದೆ. ಒಂದು ವೇಳೆ ಒಂದು ದಿನ ಫಿಟ್‌ನೆಸ್‌ಗೆ ಸಮಯ ಕೊಡಲು ಆಗಲಿಲ್ಲ ಎಂದಾದರೆ ಆ ದಿನ ಒಂದು ಹೊತ್ತಿನ ಊಟ ಬಿಟ್ಟುಬಿಡುತ್ತೇನೆ. ನನಗೇನೂ ಹಸಿವಾಗುವುದಿಲ್ಲ. ಆಹಾರವನ್ನು ಆನಂದಿಸಿಕೊಂಡು ತಿನ್ನಬೇಕು. ಹಾಗೆ ಮಾಡಬೇಕೆಂದರೆ ನಾನು ಕೆಲಸ ಮಾಡಬೇಕು. ಹಾಗಾಗಿ ನನ್ನ ಈ ಫಿಟ್‌ನೆಸ್ ಮಂತ್ರಕ್ಕೆ ನಾನು ಮೋಸ ಮಾಡಿಕೊಳ್ಳುವುದಿಲ್ಲ. ನನ್ನ ವ್ಯಾಯಾಮಕ್ಕೂ ನನ್ನ ಹಸಿವಿಗೂ ಸಂಬಂಧವಿದೆ. ಸಂಜೆ ಹೊತ್ತು ವಾಕಿಂಗ್ ಮಾಡುತ್ತೇನೆ, ಬೆಳಿಗ್ಗೆ ಹೊತ್ತು ಯೋಗ ಮತ್ತು ಧ್ಯಾನವನ್ನು ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Viral News : ಇದರಲ್ಲಿರುವ ಮುತ್ತನ್ನು 30 ಸೆಕೆಂಡುಗಳೊಳಗೆ ಹುಡುಕಿ ನೋಡೋಣ!
ಕಿರಣ್ ಬೇಡಿ ಅವರು ಹೇಳುವ ಪ್ರಕಾರ ಧ್ಯಾನವು ನಮ್ಮನ್ನು ಸುತ್ತಮುತ್ತ ಏನಾಗುತ್ತಿದೆ ಎನ್ನುವುದರ ಬಗ್ಗೆ ಸೂಕ್ಷ್ಮವಾಗಿರಲು ಸಹಾಯ ಮಾಡುತ್ತದೆ. “ಧ್ಯಾನ ಮಾಡುವುದು ಒಳ್ಳೆಯದು. ಅದರಿಂದ ನಿಮಗೆ ಏನಾಗುತ್ತಿದೆ ಎನ್ನುವುದರ ಬಗ್ಗೆ ನೀವು ಹೆಚ್ಚು ಸಂವೇದನಾಶೀಲರಾಗುತ್ತೀರಿ. ನಿಮ್ಮ ಮನಸ್ಸು ಪ್ರಜ್ಞಾಪೂರ್ವಕ ಸುಧಾರಣೆಯನ್ನು ಕಾಣುತ್ತದೆ. ವರ್ತಮಾನದ ಬಗ್ಗೆ ಯೋಚಿಸಲು ನಿಮಗೆ ಸಹಾಯ ಮಾಡುತ್ತದೆ. ನನಗೂ ಭೂತಕಾಲ ಮತ್ತು ಭವಿಷ್ಯ ಕಾಲದ ಬಗ್ಗೆ ಚಿಂತನೆಗಳು ಬರುತ್ತವೆ. ಆದರೆ ಅದನ್ನು ಹತೋಟಿಗೆ ತಂದು ವರ್ತಮಾನದ ಬಗ್ಗೆ ಯೋಚಿಸಲು ನನ್ನ ಧ್ಯಾನ ನನಗೆ ಸಹಾಯ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ.
ನಮ್ಮೊಂದಿಗೆ ನಾವು ಮಾತನಾಡಿಕೊಳ್ಳುವ ಬಗ್ಗೆ ಮಾತನಾಡಿದ ಕಿರಣ್ ಬೇಡಿ ಅವರು, “ನಾನು ವಿದ್ಯಾರ್ಥಿಯಾಗಿದ್ದ ಸಮಯದಲ್ಲಿ ಹಲವಾರು ವಿಚಾರಗಳನ್ನು ನಾನು ನನ್ನ ಕುಟುಂಬದೊಂದಿಗೆ ಹಂಚಿಕೊಳ್ಳಲು ಆಗುತ್ತಿರಲಿಲ್ಲ. ಆಗ ನಾನು ನನ್ನೊಂದಿಗೆ ಮಾತನಾಡಿಕೊಳ್ಳುತ್ತಿದೆ. ದಿನ್ನಚರಿ ಬರೆಯುತ್ತಿದ್ದೆ. ಈಗಲೂ ಹಾಗೇ ನಾನು ನನ್ನೊಂದಿಗೆ ಮಾತನಾಡಿಕೊಳ್ಳುತ್ತೇನೆ. ಗಟ್ಟಿಯಾಗಿ ಅಲ್ಲದಿದ್ದರೂ ಮನಸ್ಸಿನಲ್ಲಿ ನಾನು ನನ್ನೊಂದಿಗೆ ಮಾತನಾಡಿಕೊಳ್ಳುತ್ತೇನೆ. ಇದರಿಂದ ನನ್ನ ಮನಸ್ಥಿತಿಯನ್ನು ನನಗೆ ಅಳೆದುಕೊಳ್ಳಲು ಸಾಧ್ಯ” ಎಂದು ಅವರು ನುಡಿದಿದ್ದಾರೆ.
ಇದನ್ನೂ ಓದಿ: Viral News : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಇನ್ನಿಲ್ಲ; ಅಬ್ಬಾ! ಎಷ್ಟೊಂದು ವರ್ಷ ಬದುಕಿದ್ದರು!
“ನಾನು ಡಾ.ಅಬ್ದುಲ್ ಕಲಾ ಅವರ ರೀತಿಯಲ್ಲಿ ಸಾಯಲು ಬಯಸುತ್ತೇನೆ. ಅವರು ಪಾಠ ಮಾಡುವಾಗಲೇ ನಿಧನರಾದರು. ಯಾರಿಗೂ ತೊಂದರೆ ಕೊಡದೆ, ಅನಾರೋಗ್ಯಕ್ಕೆ ಒಳಗಾಗದೆ ಹಾಗೆಯೇ ಪ್ರಾಣ ಹೋಗಬೇಕು. ಈಗ 30-40ರ ವಯಸ್ಸಿನಲ್ಲಿರುವವರು ಮೊದಲು ನೀವು ನಿಮ್ಮ ಪರಿಸ್ಥಿತಿಯನ್ನು ಒಪ್ಪಿಕೊಳ್ಳಿ. ನಿಮ್ಮ ಪರಿಸ್ಥಿತಿಯನ್ನು ತಿರಸ್ಕರಿಸುವ ಬದಲು ಅದನ್ನು ಬದಲಾಯಿಸುವ ನಿರ್ಧಾರವನ್ನು ತೆಗೆದುಕೊಳ್ಳಿ. ನಿಮ್ಮ ಶಕ್ತಿಯನ್ನು ವ್ಯರ್ಥ ಮಾಡಬೇಡಿ. ಯಾವುದೇ ವಿಷಯವನ್ನು ಲಘುವಾಗಿ ತೆಗೆದುಕೊಳ್ಳಬೇಡಿ” ಎಂದು ಸಾವಿನ ಬಗ್ಗೆ ಹಾಗೂ ಯುವಜನತೆ ಬಗ್ಗೆ ಹೇಳಿದರು ಕಿರಣ್ ಬೇಡಿ ಅವರು.