Site icon Vistara News

Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಹತ್ಯೆ; ಹಂತಕನ ಬಗ್ಗೆ ಸಹೋದರಿ ಬಿಚ್ಚಿಟ್ಟ ರಹಸ್ಯವೇನು?

Kolkata Doctor Murder Case

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್‌.ಜಿ. ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ (Kolkata Doctor Murder Case) ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಪ್ರಕರಣದ ಆರೋಪಿಯಾಗಿ ಬಂಧಿಸಲ್ಪಟ್ಟಿರುವ ಸಂಜಯ್ ರಾಯ್‌ (Sanjay Roy)ನ ಸಹೋದರಿ ಇದೀಗ ಮಾಧ್ಯಮದೊಂದಿಗೆ ಮಾತನಾಡಿದ್ದು, ಸಹೋದರ ತಪ್ಪು ಮಾಡಿದ್ದು ಸಾಬೀತಾದರೆ ಯಾವ ಶಿಕ್ಷೆಯನ್ನಾದರೂ ನೀಡಿ. ಅದನ್ನು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಜತೆಗೆ ಸಂಜಯ್‌ ರಾಯ್‌ ಬಗ್ಗೆ ಕೆಲವು ಅಪರೂಪದ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಒಡಹುಟ್ಟಿದರವರಾದರೂ ತಾವು ಸುಮಾರು 17 ವರ್ಷಗಳಿಂದ ಪರಸ್ಪರ ಬೇಟಿಯಾಗಿಲ್ಲ ಮತ್ತು ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

ಹಂತಕನ ಸಹೋದರಿ ಹೇಳಿದ್ದೇನು?

ಎಎನ್‌ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸಂಜಯ್ ರಾಯ್‌ ಸಹೋದರಿ, ”ಕಳೆದ 17 ವರ್ಷಗಳಿಂದ ಆತನೊಂದಿಗೆ ಯಾವುದೇ ಸಂಪರ್ಕ ಇಲ್ಲ. ಆತನೊಂದಿಗೆ ಮಾತನಾಡಿಯೇ ಅಷ್ಟು ವರ್ಷವಾಯ್ತು. ಆತ ಅಥವಾ ನಾನು ಪರಸ್ಪರ ಭೇಟಿಯಾಗಿಲ್ಲ. ಹೀಗಾಗಿ ಆತನ ಬಗ್ಗೆ ಏನು ಹೇಳಲೂ ಸಾಧ್ಯವಿಲ್ಲ. ತಂದೆಗೆ ನನ್ನ ಮದುವೆ ಇಷ್ಟವಿರಲಿಲ್ಲ. ಹೀಗಾಗಿ ಮದುವೆಯಾದ ಬಳಿಕ ತವರಿನೊಂದಿಗಿನ ಎಲ್ಲ ಸಂಬಂಧವನ್ನು ಕಡಿದು ಹೋಗಿದೆ. ಹೀಗಾಗಿ ಅವರೊಂದಿಗೆ ಯಾವುದೇ ಸಂಪರ್ಕ ಇಟ್ಟುಕೊಂಡಿಲ್ಲʼʼ ಎಂದು ಹೇಳಿದ್ದಾರೆ.

ಬಾಲ್ಯದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ

ಸಂಜಯ್ ರಾಯ್‌ ಬಾಲ್ಯದಲ್ಲಿ ಸಾಮಾನ್ಯ ಮಕ್ಕಳಂತೆಯೇ ಇದ್ದ ಎಂದು ಅವರು ತಿಳಿಸಿದ್ದಾರೆ. ʼʼನಾನು ಗಮನಿಸಿದ ಹಾಗೆ ಆತನಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಬಾಲ್ಯದಲ್ಲಿ ಸಾಮಾನ್ಯ ಮಕ್ಕಳಂತೆಯೇ ಇದ್ದ. ಆರಂಭದಲ್ಲಿ ಆತ ಪೊಲೀಸ್‌ ಇಲಾಖೆಯ ಉದ್ಯೋಗದಲ್ಲಿದ್ದ. ಕೆಲವೊಮ್ಮೆ ಆತನಿಗೆ ಹಗಲು / ರಾತ್ರಿ ಪಾಳಯದಲ್ಲಿ ಕೆಲಸವಿರುತ್ತಿತ್ತು. ಹೀಗಾಗಿ ಮನೆಯಲ್ಲಿದ್ದಾಗಲೂ ನಾವು ಹೆಚ್ಚು ಬೆರೆಯುತ್ತಿರಲಿಲ್ಲ. ಆಗೆಲ್ಲ ಆತ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾಗಲೀ, ಜಗಳವಾಡಿದ್ದಾಗಲೀ ನನ್ನ ಗಮನಕ್ಕೆ ಬಂದಿಲ್ಲʼʼ ಎಂದು ವಿವರಿಸಿದ್ದಾರೆ.

ಅದಾಗ್ಯೂ ಆತ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದೇ ಆಗಿದ್ದಲ್ಲಿ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ. ʼʼಆತ ಈ ನೀಚ ಕೃತ್ಯ ಎಸಗಿರುವುದು ಸಾಬೀತಾದರೆ ಸೂಕ್ತ ಶಿಕ್ಷೆ ಸಿಗಲಿ. ಆತನಿಗೆ ಯಾವುದೇ ಶಿಕ್ಷೆ ನೀಡಿದರೂ ಒಪ್ಪಿಕೊಳ್ಳುತ್ತೇನೆ. ವೈದ್ಯೆಯ ಮೇಲೆ ಆತ ಎಸಗಿದ್ದು ಅತಿ ಘೋರ ಕೃತ್ಯʼʼ ಎಂದು ಹೇಳಿದ್ದಾರೆ.

ಸುಳ್ಳುಪತ್ತೆ ಪರೀಕ್ಷೆ

ಈ ಮಧ್ಯೆ ಪ್ರಮುಖ ಆರೋಪಿ ಸಂಜಯ್ ರಾಯ್ ಮತ್ತು ಇತರ ಆರು ಜನರ ಸುಳ್ಳು ಪತ್ತೆ ಪರೀಕ್ಷೆಗಳನ್ನು ಕೇಂದ್ರ ತನಿಖಾ ದಳ (ಸಿಬಿಐ) ಪ್ರಾರಂಭಿಸಿದೆ. ಸಂಜಯ್ ರಾಯ್ ಜೈಲಿನಲ್ಲಿ ಪಾಲಿಗ್ರಾಫ್ ಪರೀಕ್ಷೆಗೆ ಒಳಗಾಗಲಿದ್ದಾನೆ. ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್, ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ವೈದ್ಯರು ಮತ್ತು ಸಿವಿಲ್ ಸ್ವಯಂಸೇವಕನನ್ನು – ಸಿಬಿಐ ಕಚೇರಿಯಲ್ಲಿ ಅಧಿಕಾರಿಗಳು ಪರೀಕ್ಷೆಗೆ ಒಳಪಡಿಸಲಿದ್ದಾರೆ. ಈ ಪಾಲಿಗ್ರಾಫ್ ಪರೀಕ್ಷೆಗಳನ್ನು ನಡೆಸಲು ದೆಹಲಿಯ ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ (CFSL) ವಿಶೇಷ ತಂಡ ಕೋಲ್ಕತ್ತಾಕ್ಕೆ ಆಗಮಿಸಿದೆ.

Exit mobile version