Site icon Vistara News

Kolkata Doctor Murder Case: ನೋ ಸೇಫ್ಟಿ…ನೋ ಡ್ಯೂಟಿ- ವೈದ್ಯೆ ಕೊಲೆ ಖಂಡಿಸಿ ದೇಶವ್ಯಾಪಿ ಭಾರೀ ಪ್ರತಿಭಟನೆ

kolkata doctor murder case

ಕೋಲ್ಕತಾ: ಪಶ್ಚಿಮ ಬಂಗಾಳ(West Bengal)ದ ಕೋಲ್ಕತ್ತಾ(Kolkata)ದಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ(Kolkata Doctor Murder Case) ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ, ಧರಣಿ ಭುಗಿಲೆದ್ದಿದೆ. ಅನೇಕ ಆಸ್ಪತ್ರೆಗಳಲ್ಲಿ ಒಪಿಡಿ ಬಂದ್‌ ಮಾಡಿ ವೈದ್ಯರು ಪ್ರತಿಭಟನೆ ನಡೆಸಿದ್ದು, ರೋಗಿಗಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಪರದಾಡುವಂತಾಯಿತು.

ಪಶ್ಚಿಮ ಬಂಗಾಳ, ಉತ್ತರಪ್ರದೇಶ, ದಿಲ್ಲಿ ಸೇರಿದಂತೆ ಅನೇಕ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮತ್ತು ವೈದ್ಯರು ಪ್ರತಿಭಟನೆ ನಡೆಸಿ, ನೋ ಸೇಫ್ಟಿ….ನೋ ಡ್ಯೂಟಿ ಎಂದು ಘೋಷಣೆ ಕೂಗಿದರು. ಇನ್ನು ಹಲವೆಡೆ ಚಿಕಿತ್ಸೆ ನೀಡುವಂತೆ ರೋಗಿಗಳು ಒಪಿಡಿ ಬಾಗಿಲು ಬಡಿಯುತ್ತಿರುವ ದೃಶ್ಯ ಕಂಡು ಬಂತು. ಅಗತ್ಯ ಸೇವೆಗಳು ತೆರೆದಿರುತ್ತವೆ ಎಂದು ವೈದ್ಯರ ಸಂಘ ಸ್ಪಷ್ಟಪಡಿಸಿದ್ದರೂ, ಹೊರರೋಗಿ ವಿಭಾಗಗಳ (OPDs) ಹೊರಗೆ ರೋಗಿಗಳು ಸರತಿ ಸಾಲಿನಲ್ಲಿ ನಿಂತಿರುವುದನ್ನು ಕಾಣಬಹುದಾಗಿದೆ.

ಏನಿದು ಘಟನೆ?

ಕೋಲ್ಕತಾದಲ್ಲಿನ ಸರ್ಕಾರಿ ಸ್ವಾಮ್ಯದ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಶುಕ್ರವಾರ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಎರಡನೇ ವರ್ಷದ ಸ್ನಾತಕೋತ್ತರ ವೈದ್ಯಕೀಯ ಪದವಿ ವಿದ್ಯಾರ್ಥಿಯಾಗಿದ್ದ ಆಕೆ, ಗುರುವಾರ ರಾತ್ರಿ ತಡವಾಗಿ ಊಟ ಮುಗಿಸಿ ಕ್ಯಾಂಪಸ್‌ನ ಮೂರನೇ ಮಹಡಿಯಲ್ಲಿನ ಸೆಮಿನಾರ್ ಹಾಲ್‌ಗೆ ಓದುವ ಸಲುವಾಗಿ ತೆರಳಿದ್ದರು. ಶುಕ್ರವಾರ ಬೆಳಿಗ್ಗೆ ಅವರ ಶವ ಪತ್ತೆಯಾಗಿತ್ತು.
ಆಸ್ಪತ್ರೆಯ ವೈದ್ಯರೊಬ್ಬರು ಮಾಹಿತಿ ನೀಡಿ, ʼʼಸಂತ್ರಸ್ತೆ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಊಟ ಮಾಡಿದ್ದಾರೆ. ಬಳಿಕ ಸೆಮಿನಾರ್ ಹಾಲ್‌ಗೆ ತೆರಳಿದ್ದರು. ನಂತರ ಸೆಮಿನಾರ್‌ ಹಾಲ್‌ನಲ್ಲಿ ಅವರ ಶವ ಪತ್ತೆಯಾಗಿತ್ತುʼʼ ಎಂದು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ(West Bengal)ದ ರಾಜಧಾನಿ ಕೋಲ್ಕತಾದಲ್ಲಿ ದೇಶವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, 31 ವರ್ಷದ ಮಹಿಳಾ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂದು ದೆಹಲಿ ಏಮ್ಸ್‌(AIIMS) ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(FORDA) ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟಿದೆ.

ಇದನ್ನೂ ಓದಿ: Kolkata Doctor Murder Case: ಟ್ರೈನಿ ವೈದ್ಯೆಯ ಅತ್ಯಾಚಾರ, ಕೊಲೆ; ಏಮ್ಸ್‌ ವೈದ್ಯರ ಪ್ರೊಟೆಸ್ಟ್‌-ಪ್ರಾಂಶುಪಾಲರು ರಿಸೈನ್‌

Exit mobile version