ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (RG Kar Medical College and Hospital)ಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ, ಕೊಲೆ (Kolkata Doctor Murder Case) ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ (Sanjay Roy)ನನ್ನು ಸುಳ್ಳು ಪತ್ತೆ ಪರೀಕ್ಷೆ (Polygraph test)ಗೆ ಒಳಪಡಿಸಲಾಗಿದ್ದು, ಈ ವೇಳೆ ಕೆಲವೊಂದು ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಸಂಜಯ್ ರಾಯ್ ಬಂಧಿತನಾಗಿರುವ ಪ್ರೆಸಿಡೆನ್ಸಿ ಜೈಲಿನಲ್ಲಿ ಈ ಪರೀಕ್ಷೆ ನಡೆಸಲಾಗಿದೆ.
ತಾನು ಸೆಮಿನಾರ್ ಹಾಲ್ ತಲುಪಿದಾಗಲೇ ಸಂತ್ರಸ್ತೆ ಮೃತಪಟ್ಟಿದ್ದಳು ಎಂದು ಸಂಜಯ್ ರಾಯ್ ಹೇಳಿಕೊಂಡಿದ್ದಾನೆ ಎಂದು ವರದಿಯಾಗಿದೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿರಪರಾಧಿ ಎಂದು ಹೇಳಿಕೊಂಡ ಕೆಲವು ದಿನಗಳ ನಂತರ ಸಂಜಯ್ ರಾಯ್‌ನನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಲ್ಲೂ ಇದೇ ಮಾತನ್ನು ಪುನರಿಚ್ಚರಿಸಿರುವುದು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Kolkata doctor rape-murder case: Former RG Kar Medical College Principal Sandip Ghosh reaches CBI office
— ANI Digital (@ani_digital) August 22, 2024
Read @ANI Story | https://t.co/n4k81aJ57Y#Kolkata #rape #murder #RGKarMedicalcollege pic.twitter.com/GlrXS2KU7L
ಅದಾಗ್ಯೂ ಸುಳ್ಳು ಪತ್ತೆ ಪರೀಕ್ಷೆಯ ಸಮಯದಲ್ಲಿ ಸಂಜಯ್ ರಾಯ್ ತೀವ್ರ ಆತಂಕಕ್ಕೆ ಒಳಗಾಗಿದ್ದ ಎಂದು ವರದಿ ತಿಳಿಸಿದೆ. ʼʼಸಿಬಿಐ ಅಧಿಕಾರಿಗಳು ಹಲವು ಪುರಾವೆಗಳನ್ನು ಮುಂದಿಟ್ಟಾಗ ಅದಕ್ಕೆ ಅನೇಕ ಕಾರಣಗಳನ್ನು ನೀಡಿದ್ದಾನೆ. ಸಂತ್ರಸ್ತೆಯ ಬಳಿಗೆ ಬಂದಾಗ ಆಕೆ ಅದಾಗಲೇ ಮೃತಪಟ್ಟಿದ್ದಳಂತೆ. ಇದರಿಂದ ಭಯಗೊಂಡು ಸ್ಥಳದಿಂದ ಓಡಿ ಹೋಗಿದ್ದಾಗಿ ಸಂಜಯ್ ರಾಯ್ ತಿಳಿಸಿದ್ದಾನೆ ಎಂದು ಮೂಲಗಳು ಹೇಳಿವೆ.
ಸಂಜಯ್ ರಾಯ್ ಆರಂಭದಲ್ಲಿ ಅತ್ಯಾಚಾರ ಮತ್ತು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದ. ಆದಾಗ್ಯೂ ಇತ್ತೀಚೆಗೆ ಯು ಟರ್ನ್ ತೆಗೆದುಕೊಂಡು, ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲಾಗಿದೆ ಮತ್ತು ತಾನು ನಿರಪರಾಧಿ ಎಂದು ಹೇಳಿದ್ದಾನೆಂದು ಕೋಲ್ಕತಾ ಪೊಲೀಸರು ಮಾಹಿತಿ ನೀಡಿದ್ದಾರೆ.
ಜೈಲಾಧಿಕಾರಿಗಳ ಬಳಿ ಹೇಳಿದ್ದೇನು?
ಸಂಜಯ್ ರಾಯ್ ಜೈಲಾಧಿಕಾರಿಗಳ ಬಳಿ ಈ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ ಸೀಲ್ಡಾದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ನ್ಯಾಯಾಲಯದ ಮುಂದೆ ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸಲು ಪಾಲಿಗ್ರಾಫ್ ಪರೀಕ್ಷೆ ಎದುರಿಸಲು ಸಮ್ಮತಿಸಿದ್ದ. ಆದರೆ ಸಿಬಿಐ ಮತ್ತು ಪೊಲೀಸರು ಆತನ ಹೇಳಿಕೆಗಳಲ್ಲಿ ಅಸ್ಪಷ್ಟತೆಯನ್ನು ಗುರುತಿಸಿದ್ದಾರೆ. ಆತ ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಮುಖಕ್ಕೆ ಆದ ಗಾಯಗಳು ಮತ್ತು ಕೊಲೆ ನಡೆದ ಸಮಯದಲ್ಲಿ ಆ ಸ್ಥಳದಲ್ಲಿ ಯಾಕಿದ್ದ ಎನ್ನುವುದಕ್ಕೆ ಯಾವುದೇ ಸಮರ್ಪಕ ಕಾರಣ ನೀಡಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Kolkata Doctor Murder Case: ಕೋಲ್ಕತ್ತಾ ವೈದ್ಯೆಯ ಹತ್ಯೆ; ಹಂತಕನ ಬಗ್ಗೆ ಸಹೋದರಿ ಬಿಚ್ಚಿಟ್ಟ ರಹಸ್ಯವೇನು?
ಸಿಸಿ ಟಿವಿ ಕ್ಯಾಮೆರಾದಲ್ಲಿ ಸಂಜಯ್ ರಾಯ್ ಮುಖ ಪತ್ತೆ
ಆಗಸ್ಟ್ 9ರಂದು ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಅರೆಬೆತ್ತಲೆ ಸ್ಥಿತಿಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯ ಶವ ಪತ್ತೆಯಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್‌ನನ್ನು ಆಗಸ್ಟ್ 10ರಂದು ಕೋಲ್ಕತಾ ಪೊಲೀಸರು ಬಂಧಿಸಿದ್ದರು. ಸಿಸಿಟಿವಿ ಕ್ಯಾಮೆರಾದಲ್ಲಿ ಸಂಜಯ್ ರಾಯ್ ಸೆಮಿನಾರ್ ಹಾಲ್‌ಗೆ ಪ್ರವೇಶಿಸುತ್ತಿರುವುದು ಕಂಡು ಬಂದಿತ್ತು. ಅಲ್ಲದೆ ಶವದ ಬಳಿ ಆತನ ಬ್ಲೂಟೂತ್ ಸಾಧನವು ಪತ್ತೆಯಾಗಿತ್ತು. ಇದೇ ಕಾರಣಕ್ಕೆ ರಾಯ್‌ನನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದೆ.