Site icon Vistara News

ಲಿವ್‌ ಇನ್‌ ಪಾರ್ಟ್‌ನರ್‌ನನ್ನೇ ಕೊಂದು ಪೊಲೀಸರಿಗೆ ಕರೆ ಮಾಡಿದಳು ಕೊಲೆಗಾತಿ! ಮುಂದೇನಾಯ್ತು?

Live In Couple

Kolkata woman stabs live-in partner to death, then informs cops

ಕೋಲ್ಕೊತಾ: ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ (Live In Relationship) ಇರುವವರು, ಪರಸ್ಪರ ಪ್ರೀತಿಸಿ, ಒಂದೇ ಕಡೆ ನೆಲೆಸಿ, ಇನ್ನೇನು ಮದುವೆಯಾಗಬೇಕು ಎಂದಾಗ ಬ್ರೇಕಪ್‌ (Break Up) ಮಾಡಿಕೊಳ್ಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ, ಕೆಲ ತಿಂಗಳಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿರುವವರನ್ನು ಭೀಕರವಾಗಿ ಕೊಲೆ ಮಾಡುವ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇದಕ್ಕೆ ನಿದರ್ಶನ ಎಂಬಂತೆ, ಕೋಲ್ಕೊತಾದಲ್ಲಿ (Kolkata) ಮಹಿಳೆಯು ಲಿವ್‌ ಇನ್‌ ರಿಲೇಷನ್‌ನಲ್ಲಿದ್ದ ವ್ಯಕ್ತಿಯನ್ನು ಭೀಕರವಾಗಿ ಕೊಲೆಗೈದಿದ್ದಾಳೆ.

ಸಾರ್ಥಕ್‌ ದಾಸ್‌ (30) ಹತ್ಯೆಗೀಡಾದವರು. ಸಂಗಾತಿ ಪೌಲ್‌ (32) ಎಂಬ ಮಹಿಳೆಯೇ ಹತ್ಯೆಗೈದಿದ್ದಾಳೆ. ಸಾರ್ಥಕ್‌ ದಾಸ್‌ ಹಾಗೂ ಸಂಗಾತಿ ಪೌಲ್‌ ಅವರು ಕೆಲ ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದರು. ಕೋಲ್ಕೊತಾದ ಮಧುಗಢ ಪ್ರದೇಶದ ಮಧುಬನಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ಇದ್ದರು. ಆದರೆ, ಕೆಲ ದಿನಗಳಿಂದ ಇಬ್ಬರ ಮಧ್ಯೆಯೂ ಹೆಚ್ಚು ಜಗಳ ಆಗುತ್ತಿದ್ದವು. ಸಂಬಂಧದಲ್ಲಿ ಬಿರುಕು ಬಿಟ್ಟಿತ್ತು. ಇದೇ ಕಾರಣಕ್ಕೆ ಸಾರ್ಥಕ್‌ ದಾಸ್‌ ಅವರನ್ನು ಸಂಗಾತಿ ಪೌಲ್‌ ಚಾಕು ಇರಿದು ಹತ್ಯೆಗೈದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

“ಸಾರ್ಥಕ್‌ ದಾಸ್‌ ಅವರಿಗೆ ಸಂಗಾತಿ ಪೌಲ್‌ ಪದೇಪದೆ ಚಾಕು ಇರಿದಿದ್ದಾಳೆ. ಚಾಕು ಇರಿದು ಕೊಲೆ ಮಾಡಿದ ಬಳಿಕ ಆತನ ಶವವನ್ನು ಅಪಾರ್ಟ್‌ಮೆಂಟ್‌ನ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಎಸೆದಿದ್ದಾಳೆ. ಅಷ್ಟೇ ಅಲ್ಲ, ಕೊಲೆ ಮಾಡಿದ ನಂತರ ಪೊಲೀಸರಿಗೆ ಕರೆ ಮಾಡಿ, ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

“ಸ್ಥಳಕ್ಕೆ ತೆರಳುವ ಹೊತ್ತಿಗೆ ಸ್ವಿಮ್ಮಿಂಗ್‌ನಲ್ಲಿ ಸಾರ್ಥಕ್‌ ದಾಸ್‌ ತೇಲಾಡುತ್ತಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂಬುದಾಗಿ ವೈದ್ಯರು ಘೋಷಿಸಿದರು. ಸಂಗಾತಿ ಪೌಲ್‌ಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Live In Partner: ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯ ಹತ್ಯೆಗೈದ ವ್ಯಕ್ತಿ

ಕ್ಯಾಬ್‌ ಡ್ರೈವರ್‌ ಆಗಿರುವ ಸಾರ್ಥಕ್‌ ದಾಸ್‌ ಅವರು ಫೋಟೊಗ್ರಫಿಯಲ್ಲೂ ಆಸಕ್ತಿ ಹೊಂದಿದ್ದರು. ಸಾರ್ಥಕ್‌ ದಾಸ್‌ ಹಾಗೂ ಸಂಗಾತಿ ಪೌಲ್‌ ಅವರು ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ, ನಂತರ ಲಿವ್‌ ಇನ್‌ನಲ್ಲಿದ್ದರು. ಸಂಗಾತಿ ಪೌಲ್‌ಗೆ ಈಗಾಗಲೇ ಮದುವೆಯಾಗಿದ್ದು, ಮಗು ಕೂಡ ಇದೆ. ಮೊದಲ ಮದುವೆ ಮುರಿದು ಬಿದ್ದ ಬಳಿಕ ಸಾರ್ಥಕ್‌ ದಾಸ್‌ ಜತೆ ಇದ್ದರು ಎನ್ನಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version