ಗಾಂಧಿನಗರ: ಕಳೆದ ವರ್ಷ ಗುಜರಾತ್‌ನಲ್ಲಿ ತನ್ನನ್ನು ತಾನೇ ಮದುವೆಯಾಗುವ (Sologamy) ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದ ಕ್ಷಮಾ ಬಿಂದು (Kshama Bindu) ಅವರು ಮೊದಲ ವರ್ಷದ ಸ್ವಯಂ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಅಲ್ಲದೆ, ಕಳೆದ ಒಂದು ವರ್ಷದ ವೈವಾಹಿಕ ಜೀವನದ ಕುರಿತು ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅವರ ವಿವಾಹ ವಾರ್ಷಿಕೋತ್ಸವ ಜರ್ನಿಯ ವಿಡಿಯೊ ಈಗ ವೈರಲ್ ಆಗಿದೆ.
ಕ್ಷಮಾ ಬಿಂದು ಅವರು ಕಳೆದ ವರ್ಷ ತಮ್ಮನ್ನು ತಾವೇ ಮದುವೆಯಾಗಿದ್ದು, ಮದುವೆಯಾದ ಸುಂದರ ಕ್ಷಣಗಳು, ಸ್ವಯಂ ಮದುವೆಯ ಮೊದಲ ವಾರ್ಷಿಕೋತ್ಸವದ ಆಚರಣೆ, ಒಂದು ವರ್ಷದಲ್ಲಿ ಮಾಡಿದ ಪ್ರವಾಸ, ಅನುಭವಿಸಿದ ಮಧುರ ಕ್ಷಣಗಳು ಇರುವ ವಿಡಿಯೊವನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಸ್ವಯಂ ವಿವಾಹವಾದ ಒಂದು ವರ್ಷದಲ್ಲಿ ಹೇಗೆ ಬದುಕನ್ನು ಖುಷಿಯಿಂದ ಕಳೆದೆ ಎಂಬುದನ್ನು ಅವರು ವಿಡಿಯೊ ಮೂಲಕ ಜನರ ಎದುರಿಟ್ಟಿದ್ದಾರೆ. ಇದಕ್ಕೆ ಜನ ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕ್ಷಮಾ ಬಿಂದು ಅವರು ತಮಗೆ ತಾವೇ “Happy Anniversary” ಎಂದು ವಿಶ್ ಮಾಡಿಕೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೊ
ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾಗಿ 24 ಗಂಟೆಯಲ್ಲೇ ವಿಚ್ಛೇದನ ಪಡೆದ ಯುವತಿ; ಒಂದಿನವೂ ಕಳೆಯಲಾಗಲಿಲ್ಲವಂತೆ!
ಕ್ಷಮಾ ಬಿಂದು 2022 ಜೂ.11 ರಂದು ಗುಜರಾತ್‌ನ ದೇವಸ್ಥಾನವೊಂದರಲ್ಲಿ ನನ್ನನ್ನು ನಾನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದರು. ಆದರೆ ಬಿಜೆಪಿ ನಾಯಕಿ ಸುನೀತಾ ಶುಕ್ಲಾ, ʼಇಂಥ ಸ್ವಯಂ ಮದುವೆಗಳಿಗೆ ನನ್ನ ವಿರೋಧವಿದೆ. ಇದರಿಂದ ಹಿಂದು ಜನಸಂಖ್ಯೆ ಕಡಿಮೆಯಾಗುತ್ತದೆ. ಕ್ಷಮಾ ಬಿಂದು ಯಾವುದೇ ದೇವಸ್ಥಾನದಲ್ಲೂ ಸ್ವಯಂ ವಿವಾಹವಾಗಲು ನಾವು ಅವಕಾಶ ಕೊಡುವುದಿಲ್ಲʼ ಎಂದು ಹೇಳಿದ್ದರು. ಇವರಷ್ಟೇ ಅಲ್ಲ, ಕಾಂಗ್ರೆಸ್‌ನ ಕೆಲವು ರಾಜಕಾರಣಿಗಳೂ ಇದನ್ನು ವಿರೋಧಿಸಿದ್ದರು. ತಮ್ಮ ಸೋಲೊಗಮಿಗೆ ವಿರೋಧ ವ್ಯಕ್ತವಾಗುತ್ತಿರುವುದನ್ನು ಗಮನಿಸಿದ ಕ್ಷಮಾ ಬಿಂದು ಜೂನ್ 9ರಂದೇ ತಮ್ಮನ್ನು ತಾವು ವರಿಸಿದ್ದರು. ಇದು ದೇಶದ ಮೊದಲ ಸ್ವಯಂ ಮದುವೆ ಎಂದು ಕೂಡ ಖ್ಯಾತಿಯಾಗಿತ್ತು.
ಗುಜರಾತ್‌ನ ಗೋತ್ರಿ ಏರಿಯಾದಲ್ಲಿರುವ ತಮ್ಮ ಮನೆಯಲ್ಲಿಯೇ ಕ್ಷಮಾ ಮದುವೆಯಾಗಿದ್ದರು. ಸುಮಾರು 40 ನಿಮಿಷಗಳ ಕಾಲ ವಿವಾಹ ಕಾರ್ಯಕ್ರಮ ನಡೆದಿತ್ತು. ಇನ್ನೊಂದು ಬಹುಮುಖ್ಯ ಅಂಶವೆಂದರೆ ಪುರೋಹಿತರೂ ಇರಲಿಲ್ಲ. ಆದರೆ ಕ್ಷಮಾ ಇಚ್ಛೆಯೇ ಹಾಗಿತ್ತು. ಅವರಿಗೆ ವರನೇ ಬೇಕಾಗಿಲ್ಲ ಎಂದ ಮೇಲೆ ಪುರೋಹಿತರು ಬಂದೇನು ಮಾಡುತ್ತಾರೆ? ಇಷ್ಟೆಲ್ಲ ಆದ ಮೇಲೆ ತನ್ನನ್ನು ತಾನು ವಿವಾಹಿತ ಮಹಿಳೆ ಎಂದೇ ಕ್ಷಮಾ ಬಿಂದು ಕರೆದುಕೊಂಡಿದ್ದರು. ಮತ್ತು ಹೀಗೆ ಕರೆದುಕೊಳ್ಳಲು ಸಂತೋಷವಾಗುತ್ತಿದೆ ಎಂದೂ ತಿಳಿಸಿದ್ದರು. ಅದರಂತೆ, ಅವರು ಒಂದು ವರ್ಷವನ್ನು ಸಂತಸದಿಂದ ಕಳೆದಿದ್ದಾರೆ.