- ಕುವೈತ್‌ನಲ್ಲಿ ವಿದೇಶಿಯರು ಪ್ರತಿಭಟನೆ ನಡೆಸುವುದು ಗಂಭೀರ ಅಪರಾಧ
- ನೂಪುರ್ ಶರ್ಮಾ ವಿರುದ್ಧ ಇತ್ತೀಚೆಗೆ ಬೀದಿಗಿಳಿದು ಪ್ರತಿಭಟಿಸಿದ್ದ ವಲಸಿಗರು
- ವಲಸಿಗರಲ್ಲಿ ಭಾರತ, ಪಾಕ್, ಬಾಂಗ್ಲಾದೇಶ ಮೂಲದವರು
ಕುವೈತ್: ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ ಏಷ್ಯಾ ಮೂಲದ ವಲಸಿಗರನ್ನು ಅವರವರ ದೇಶಗಳಿಗೆ ಗಡಿಪಾರು ಮಾಡಲು ಕುವೈತ್ ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ನೀಡಿದ್ದ ವಿವಾದಾತ್ಮಕ ಹೇಳಿಕೆಗಳನ್ನು ಖಂಡಿಸಿ ಕುವೈತ್ ಕಳವಳ ವ್ಯಕ್ತಪಡಿಸಿತ್ತು. ಭಾರತೀಯ ರಾಯಭಾರಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದೀಗ ನೂಪರ್ ಶರ್ಮಾ ವಿರುದ್ಧ ಪ್ರತಿಭಟಿಸಲು ಬೀದಿಗೊಳಿದ ಏಷ್ಯಾ ಮೂಲದ ವಲಸಿಗರನ್ನು ಬಂಧಿಸಿ ಅವರವರ ದೇಶಗಳಿಗೇ ಗಡಿಪಾರು ಮಾಡಲು ನಿರ್ಧರಿಸಿರುವುದಾಗಿ ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ ಶುಕ್ರವಾರ ಅಲ್ಲಿನ ಬೀದಿಗಳಲ್ಲಿ ಪ್ರತಿಭಟನೆ ನಡೆದಿತ್ತು.
ಈ ಪ್ರತಿಭಟನಾಕಾರರನ್ನು ಬಂಧಿಸಲು ಸರಕಾರ ಸೂಚಿಸಿದೆ. ಎಲ್ಲ ವಲಸಿಗರೂ ಸರಕಾರದ ನಿಯಮಗಳನ್ನು ಪಾಲಿಸಬೇಕು. ಪ್ರತಿಭಟನೆಗಳನ್ನು ನಡೆಸುವಂತಿಲ್ಲ. ಆದ್ದರಿಂದ ಪ್ರತಿಭಟಿಸಿದವರನ್ನು ಅವರ ದೇಶಗಳಿಗೆ ಗರಿಪಾರು ಮಾಡಲು ಸರಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ನೂಪುರ್ ಶರ್ಮಾ ವಿರುದ್ಧ ಕುವೈತ್ ಬೀದಿಗಳಲ್ಲಿ ಪ್ರತಿಭಟಿಸಿದವರಲ್ಲಿ ಭಾರತೀಯರು, ಪಾಕಿಸ್ತಾನಿಗಳು, ಬಾಂಗ್ಲಾದೇಶಿಯರು ಮತ್ತು ಇತರ ಅರಬ್ ರಾಷ್ಟ್ರಗಳ ಜನ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೂನ್ 10ರಂದು ಶುಕ್ರವಾರದ ಪ್ರಾರ್ಥನೆ ಬಳಿಕ 40-50 ವಲಸಿಗರು ಕುವೈತ್‌ನ ಫಹಹೀಲ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿ ಧಿಕ್ಕಾರಗಳನ್ನು ಕೂಗಿದ್ದರು. ಕುವೈತ್‌ನಲ್ಲಿ ವಿದೇಶಿಯರು ಪ್ರತಿಭಟನೆ ನಡೆಸುವುದನ್ನು ಗಂಭೀರ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ ವಲಸಿಗರು ಇಂಥ ದುಸ್ಸಾಹಸಕ್ಕೆ ಕೈ ಹಾಕದಿರುವಂತೆ ಸಂದೇಶ ರವಾನಿಸಲು ಪ್ರತಿಭಟನೆಯಲ್ಲಿ ಭಾಗವಹಿಸಿದವರನ್ನು ಗಡಿಪಾರು ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.