ನಮ್ಮ ಸಾಮಾಜಿಕ, ಸಾರ್ವಜನಿಕ ಜನಜೀವನವನ್ನು ಸಹನೀಯಗೊಳಿಸಿರುವವರು ಕಾರ್ಮಿಕರು. ಸದ್ದಿಲ್ಲದೇ ಸದಾ ಕಾಯಕದಲ್ಲಿ ನಿರತರಾಗಿರುವ ಕಾರ್ಮಿಕರಿಗೆ ನಮ್ಮ ಗೌರವಗಳು ಸಲ್ಲುತ್ತವೆ. ಜಗತ್ತಿನಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಹರಡಿಕೊಂಡಿರುವ ಕಾರ್ಮಿಕರ ಕಾಯಕವನ್ನು ಗೌರವಿಸಲು ಪ್ರಪಂಚದಾದ್ಯಂತ ಪ್ರತಿ ವರ್ಷ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ.
ಕಾರ್ಮಿಕರ ಸಾಧನೆಗಳನ್ನು ಗೌರವಿಸುವುದು, ಅವರ ಹಕ್ಕುಗಳ ಬಗ್ಗೆ ಜಾಗೃತರಾಗಲು ಪ್ರೋತ್ಸಾಹಿಸುವುದು, ಇವೆಲ್ಲವೂ ಮೇ 1ರ ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಆಚರಣೆಯ ಹಿನ್ನೆಲೆ. ʼಮೇ ದಿನ’ ಎಂದೇ ಇದು ಜನಪ್ರಿಯ. 19ನೇ ಶತಮಾನದಲ್ಲಿ ಅಮೆರಿಕದಲ್ಲಿ ನಡೆದ ಕಾರ್ಮಿಕ ಸಂಘಟನೆಗಳ ಚಳವಳಿಯಲ್ಲಿ ಇದರ ಮೂಲವಿದೆ. ನಿರ್ದಿಷ್ಟವಾಗಿ, ಕಾರ್ಮಿಕರಿಂದ ದಿನಕ್ಕೆ ಎಂಟು ಗಂಟೆಗಳ ಕೆಲಸ ಮಾತ್ರ ಮಾಡಿಸಬೇಕು ಎಂಬ ಬೇಡಿಕೆಯನ್ನು ಮಂಡಿಸಿ ನಡೆಸಿದ, ಅದನ್ನು ಸಾಧಿಸಿಕೊಂಡ ಚಳವಳಿಯಿದು.
ಮೇ ಒಂದು ಕಾರ್ಮಿಕರ ದಿನವೆಂದು ಅಂಗೀಕರಿಸಿದ ಮೊದಲ ರಾಜ್ಯ ನ್ಯೂಯಾರ್ಕ್. ಫೆಬ್ರವರಿ 21, 1887ರಂದು ಒರೆಗಾನ್ ಕಾರ್ಮಿಕರ ಹಕ್ಕುಗಳ ಮೇಲೆ ಕಾನೂನನ್ನು ಅಂಗೀಕರಿಸಿದ ಮೊದಲನೆಯ ರಾಜ್ಯ. ಕಾರ್ಮಿಕರನ್ನು ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿಸಬಾರದು ಎಂದು ನಿಯಮ ಮಾಡಲಾಯಿತು. ಇದರೊಂದಿಗೆ ಮೇ 1ರಂದು ರಜೆ ಘೋಷಿಸಲೂ ನಿರ್ಧರಿಸಲಾಯಿತು.
ಭಾರತದಲ್ಲಿ ಕಾರ್ಮಿಕ ದಿನ
ಭಾರತದಲ್ಲಿ ಮೇ 1, 1923ರಂದು ಚೆನ್ನೈನಲ್ಲಿ ಕಾರ್ಮಿಕರ ದಿನವನ್ನು ಮೊದಲ ಬಾರಿಗೆ ಆಚರಿಸಲು ಪ್ರಾರಂಭಿಸಲಾಯಿತು. ಇದನ್ನು ಕಾಮ್‌ಗಾರ್ ದಿವಸ್, ಅಂತಾರಾಷ್ಟ್ರೀಯ ಶ್ರಮಿಕ ದಿವಸ ಎಂದೂ ಕರೆಯಲಾಗುತ್ತದೆ. ಈ ದಿನವನ್ನು ಮೊದಲು ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆಚರಿಸಿತು. ರಾಷ್ಟ್ರೀಯ ರಜಾದಿನವೂ ಹೌದು. ಈ ದಿನದಂದು, ಕಾರ್ಮಿಕರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ, ಶೋಷಣೆಗೆ ಒಳಗಾಗದಂತೆ ರಕ್ಷಿಸುವ ಮೆರವಣಿಗೆಗಳು, ಕಾರ್ಯಕ್ರಮಗಳು ಮತ್ತು ಪ್ರತಿಭಟನೆಗಳನ್ನು ಕಾರ್ಮಿಕ ಸಂಘಟನೆಗಳು ಆಚರಿಸುತ್ತಾರೆ.
ಇದನ್ನೂ ಓದಿ: Pilot Training Scheme: ಕಾರ್ಮಿಕರ ಮಕ್ಕಳು ಪೈಲಟ್ ಆಗೋದು ಪಕ್ಕಾ; ತರಬೇತಿಗೆ ಕಾರ್ಮಿಕ ಇಲಾಖೆ ವಿಶಿಷ್ಟ ಯೋಜನೆ