Site icon Vistara News

Mansoon session: ಏರುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ರೂಪಾಯಿ, ಸರಕಾರಕ್ಕಿದೆ ʻಅಗ್ನಿಪಥʼ

parliament

ನವ ದೆಹಲಿ: ಮತ್ತೆ ಮತ್ತೆ ಎದ್ದು ಬರುತ್ತಿರುವ ಚೀನಾ ಗಡಿ ವಿವಾದ, ಏರುತ್ತಿರುವ ನಿರುದ್ಯೋಗ, ಕುಸಿಯುತ್ತಿರುವ ರೂಪಾಯಿಯ ನಡುವೆ ʻಅಗ್ನಿಪಥʼದಲ್ಲಿ ನಡೆಯಬೇಕಾದ ಅನಿವಾರ್ಯತೆ ಕೇಂದ್ರ ಸರಕಾರಕ್ಕೆ. ಇವೆಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಸರಕಾರವನ್ನು ತುದಿಗಾಲಿನಲ್ಲಿ ನಿಲ್ಲಿಸುವ ಪ್ರಯತ್ನ ಪ್ರತಿಪಕ್ಷಗಳದ್ದು. ಹೀಗಾಗಿ ಜುಲೈ ೧೮ರಿಂದ ಆರಂಭವಾಗಲಿರುವ ಸಂಸತ್ತಿನ ಉಭಯ ಸದನಗಳ ಅಧಿವೇಶನ (Mansoon session) ಮುಂಗಾರಿನ ಅಬ್ಬರದ ನಡುವೆಯೂ ಬಿಸಿಯೇರುವುದು ಖಚಿತ.

ಸಂಸತ್ತಿನಲ್ಲಿ ನಡೆಯಲಿರುವ ಕೋಲಾಹಲಕ್ಕೆ ಪೂರ್ವಭಾವಿಯಾಗಿಯೇ ಈ ವಿಚಾರಗಳ ಬಗ್ಗೆ ಆಗಲೇ ಸಾಕಷ್ಟು ಬೀದಿ ಕಾಳಗ ನಡೆದಿದೆ. ಅವೆಲ್ಲದಕ್ಕೂ ಒಂದು ಅಧಿಕೃತ ಮುದ್ರೆ ಬೀಳಲಿರುವುದು ಸಂಸತ್ತಿನಲ್ಲಿ. ಕಾಂಗ್ರೆಸ್‌ ಸಹಿತ ಪ್ರತಿಪಕ್ಷಗಳು ಬಿಜೆಪಿ ನೇತೃತ್ವದ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ಲ್ಯಾನ್‌ ಮಾಡುತ್ತಿದ್ದರೆ, ಸರಕಾರ ಅದನ್ನು ಎದುರಿಸಲು ಸಜ್ಜಾಗುತ್ತಿದೆ. ಹೀಗಾಗಿ ಜುಲೈ ೧೮ರಂದು ಆರಂಭಗೊಂಡು ಆಗಸ್ಟ್‌ ೧೨ರವರೆಗೆ ನಡೆಯಲಿರುವ ಅಧಿವೇಶನದಲ್ಲಿ ಕಾವು ಜೋರಾಗಿರಲಿದೆ.

ಚೀನಾ ಗಡಿ ವಿವಾದ
ಭಾರತ-ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಈಗಾಗಲೇ ಬಿಜೆಪಿ ಮೇಲೆ ದಾಳಿ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಇಮೇಜ್‌ ಉಳಿಸಿಕೊಳ್ಳುವುದಕ್ಕಾಗಿ ಚೀನಾವನ್ನು ಓಲೈಸುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಹಾಗಿದ್ದರೆ ಭಾರತೀಯ ಸೇನೆ ಮೇಲೆ ಕಾಂಗ್ರೆಸ್‌ಗೆ ನಂಬಿಕೆ ಇದೆಯೋ ಇಲ್ಲವೋ ಎಂದು ಪ್ರಶ್ನಿಸಿದೆ.
ಪೂರ್ವ ಲಡಾಖ್‌ನಲ್ಲಿ ಗಡಿ ವಿವಾದ ತೀವ್ರಗೊಂಡು ಎರಡು ವರ್ಷಗಳೇ ಕಳೆದವು. ಈಗಲೂ ಮೋದಿ ಅವರು ಡಿಡಿಎಲ್‌ಜೆ (ದಿಲ್‌ವಾಲೇ ದುಲ್ಹನಿಯಾ ಲೇ ಜಾಯೇಂಗೇ ಸಿನಿಮಾದ ಹೆಸರಿನ ಹೃಸ್ವ ರೂಪ) ತಂತ್ರ ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಲೋಕಸಭಾ ಮುಖ್ಯ ಸಚೇತಕ ಗೌರವ್‌ ಗೊಗೊಯಿ ಹೇಳಿದ್ದಾರೆ

ಅವರ ಪ್ರಕಾರ ಡಿಡಿಎಲ್‌ಜೆ ಅಂದರೆ,
D-deny-ನಿರಾಕರಣೆ
D-Distract-ದಿಕ್ಕು ತಪ್ಪಿಸುವುದು
L-Lie- ಸುಳ್ಳು ಹೇಳುವುದು
J- Justify- ಸಮರ್ಥನೆ ಮಾಡುವುದು
ಪ್ರಧಾನಿ ಮೋದಿ ಅವರ ʻಯಾರೂ ಕೂಡಾ ಭಾರತದ ಭೂಭಾಗವನ್ನು ಪ್ರವೇಶಿಸಿಲ್ಲʼ ಎಂಬ ಹೇಳಿಕೆಯನ್ನು ಉಲ್ಲೇಖಿಸಿರುವ ಅವರು, ʻಹೀಗಿದ್ದರೂ ಭಾರತ ಸುಮಾರು ೧೦೦೦ ಚದರ ಕಿಲೋ ಮೀಟರ್‌ ವ್ಯಾಪ್ತಿಯ ಭೂಭಾಗದ ಮೇಲೆ ನಿಯಂತ್ರಣ ಕಳೆದುಕೊಂಡಿದೆ. ಹಿಂದೆ ನಮ್ಮ ಸೈನಿಕರು ಗಸ್ತು ತಿರುಗುತ್ತಿದ್ದ ಜಾಗವನ್ನು ಈಗ ಚೀನಾ ಸೈನಿಕರು ಅತಿಕ್ರಮಿಸಿದ್ದಾರೆ. ನಾವೀಗ ಅವರನ್ನು ಅಲ್ಲಿಂದ ಹೊರಗೆ ಕಳುಹಿಸಲು ಸಾಧ್ಯವಾಗುತ್ತಿಲ್ಲʼʼ ಎಂದು ಹೇಳಿದ್ದಾರೆ.

ಚೀನಾ ವಿಷಯಕ್ಕೆ ಸಂಬಂಧಿಸಿ, ರಕ್ಷಣೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಗೆ ಆಗಾಗ ವಿವರ ನೀಡಬೇಕು ಮತ್ತು ಸಂಸತ್ತಿನಲ್ಲಿ ಎರಡು ದಿನಗಳ ಕಾಲ ಚರ್ಚೆಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್‌ ಕೇಳಿದೆ.

ಅಗ್ನಿಪಥ್‌ ಯೋಜನೆಗೆ ಆಕ್ರೋಶ
ಭಾರತೀಯ ಸೇನೆಗೆ ನಿಯೋಜನೆಗೊಳ್ಳುವ ಸೈನಿಕರ ಪೈಕಿ ಶೇ. ೭೫ರಷ್ಟು ಯೋಧರನ್ನು ನಾಲ್ಕು ವರ್ಷಗಳ ಬಳಿಕ ನಿವೃತ್ತಿಗೆ ಒಳಪಡಿಸುವ ಅಗ್ನಿಪಥ್‌ ಯೋಜನೆಯ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ಎದ್ದಿದ್ದ ಭಾವನಾಸ್ಫೋಟವನ್ನು ನಗದೀಕರಿಸಲು ಕಾಂಗ್ರೆಸ್‌ ಮುಂದಾಗಿದೆ. ಇದರ ಜತೆಗೆ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ಕಾಂಗ್ರೆಸ್‌ ಬಿಚ್ಚಿಡುವ ನಿರೀಕ್ಷೆ ಇದೆ.

ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಅಪಮೌಲ್ಯಗೊಳ್ಳುತ್ತಿರುವುದು. ಒಂದು ಡಾಲರ್‌ ಮೌಲ್ಯ ೮೦ ರೂ. ಸನಿಹಕ್ಕೆ ಬಂದಿರುವುದು ಪ್ರತಿಪಕ್ಷಗಳ ಕೈಗೆ ಇನ್ನೊಂದು ಅಸ್ತ್ರವಾಗಲಿದೆ. ಇದರ ಜತೆಗೆ ರೈತಾಂದೋಲನದ ವೇಳೆ ಸರಕಾರ ರೈತರಿಗೆ ನೀಡಿರುವ ಭರವಸೆಗಳನ್ನೂ ಈಡೇರಿಸಿಲ್ಲ ಎಂಬ ಅಂಶವನ್ನು ಮುಂದಿಟ್ಟುಕೊಂಡು ಸರಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ| Monsoon Session | ಸಂಸತ್ತಿನ ಮುಂಗಾರು ಅಧಿವೇಶನ ಜು.18 ರಿಂದ ಆರಂಭ

Exit mobile version