ದಿಸ್ಪುರ: ನೆಚ್ಚಿನ ನಟ-ನಟಿ, ಗಾಯಕ-ಗಾಯಕಿ ಸೇರಿ ಯಾವುದೇ ಸೆಲೆಬ್ರಿಟಿ (Celebrity) ಸಿಕ್ಕರೆ ಹೇಗೆ ವರ್ತಿಸುತ್ತೇವೆ? ಅವರ ಜತೆ ಒಂದು ಸೆಲ್ಫಿ ತೆಗೆದುಕೊಳ್ಳುತ್ತೇವೆ. ತುಸು ಸಮಯ ಸಿಕ್ಕರೂ ಆಟೋಗ್ರಾಫ್ ಹಾಕಿಸಿಕೊಳ್ಳುತ್ತೇವೆ. ಆದರೆ, ಅಸ್ಸಾಂನಲ್ಲಿ (Assam) ಲೇಡಿ ಕಾನ್‌ಸ್ಟೆಬಲ್ ಒಬ್ಬರು (Lady Constable) ಮೆಚ್ಚಿದ ಗಾಯಕನನ್ನು ವೇದಿಕೆ ಮೇಲೆಯೇ ತಬ್ಬಿಕೊಂಡು, ಗಾಯಕನ ಕೆನ್ನೆಗೊಂದು ಮುತ್ತು ಕೊಟ್ಟು ಅಭಿಮಾನ ಮೆರೆದಿದ್ದಾರೆ. ಆದರೆ, ಗಾಯಕನಿಗೆ ವೇದಿಕೆ ಮೇಲೆಯೇ ಮುತ್ತುಕೊಟ್ಟ ಮಹಿಳಾ ಪೇದೆಯನ್ನು ಈಗ ಅಮಾನತು ಮಾಡಲಾಗಿದೆ.
ಹೌದು, ಅಸ್ಸಾಂನ ದಿಬ್ರುಗಢದಲ್ಲಿ ಮೇ 10ರಂದು ಮ್ಯೂಸಿಕ್ ಕನ್ಸರ್ಟ್ ಆಯೋಜಿಸಲಾಗಿತ್ತು. ಗ್ಯಾಂಗ್‌ಸ್ಟರ್ ಬಾಲಿವುಡ್ ಸಿನಿಮಾದ ಯಾ ಅಲಿ ಎಂಬ ಹಾಡು ಹಾಡಿದ ಖ್ಯಾತ ಜುಬೀನ್ ಗರ್ಗ್ ಅವರು ಮ್ಯೂಸಿಕ್ ಕನ್ಸರ್ಟ್ ನಡೆಸಿಕೊಟ್ಟರು. ಅವರ ಮನಮೋಹಕ ಹಾಡಿಗೆ ಅಲ್ಲಿ ನೆರೆದಿದ್ದ ಎಲ್ಲರೂ ಚಪ್ಪಾಳೆ, ಕೇಕೆ ಮೂಲಕ ಪ್ರೋತ್ಸಾಹ ನೀಡಿದರು. ಆದರೆ, ಅಲ್ಲಿಯೇ ಇದ್ದ ಮಹಿಳಾ ಪೇದೆ ಮಿಲಿಪ್ರಭಾ ಚುಟಿಯಾ ಅವರು ವೇದಿಕೆ ಮೇಲೆ ಹತ್ತಿ ಜುಬೀನ್ ಗರ್ಗ್ ಅವರಿಗೆ ಮುತ್ತು ಕೊಟ್ಟರು. ಈ ವಿಡಿಯೊ ಭಾರಿ ವೈರಲ್ ಕೂಡ ಆಯಿತು.
Assam Police's woman Home Guard constable Milliprabha Chutia suspended for hugging Zubeen Garg on bihu stage. pic.twitter.com/xp5k1b37Oi
— Nandan Pratim Sharma Bordoloi (@NANDANPRATIM) May 14, 2024
ನೆಚ್ಚಿನ ಗಾಯಕನ ಹಾಡಿಗೆ ಫಿದಾ ಆದ ಮಿಲಿಪ್ರಭಾ ಚುಟಿಯಾ ಅವರು ವೇದಿಕೆ ಮೇಲೆ ಹತ್ತಿ ಜುಬೀನ್ ಗರ್ಗ್ ಅವರನ್ನು ಗಟ್ಟಿಯಾಗಿ ತಬ್ಬಿಕೊಂಡರು. ಅವರನ್ನು ಮನಸಾರೆ ಹೊಗಳಿದರು. ಗಾಯಕನ ಮೇಲೆ ಎಷ್ಟು ಅಭಿಮಾನ ಹೊಂದಿದ್ದೇನೆ ಎಂಬುದನ್ನು ಭಾವುಕರಾಗಿ ತಿಳಿಸಿದರು. ಇದೇ ವೇಳೆ ಅವರು ಜುಬೀನ್ ಗರ್ಗ್ ಅವರ ಕೆನ್ನೆಗೆ ಪದೇಪದೆ ಮುತ್ತು ಕೊಟ್ಟರು. ಅಷ್ಟೇ ಅಲ್ಲ, ಗಾಯಕನ ಪಾದ ಮುಟ್ಟಿ ನಮಸ್ಕಾರ ಮಾಡಿದರು. ವಿಡಿಯೊ ವೈರಲ್ ಆಗುತ್ತಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಯಿತು.
ವಿಡಿಯೊ ವೈರಲ್ ಆಗುತ್ತಲೇ ಮಿಲಿಪ್ರಭಾ ಚುಟಿಯಾ ಅವರನ್ನು ಅಸ್ಸಾಂ ಪೊಲೀಸ್ ಇಲಾಖೆಯು ಅಮಾನತುಗೊಳಿಸಿದೆ. ಪೊಲೀಸ್ ಇಲಾಖೆಯ ಶಿಸ್ತು ಹಾಗೂ ಸಾರ್ವಜನಿಕ ವರ್ತನೆಯ ನಿಯಮಗಳನ್ನು ಮೀರಿದ ಆರೋಪದಲ್ಲಿ ಅವರನ್ನು ಅಮಾನತುಗೊಳಿಸಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೇದೆ ವರ್ತನೆ ಬಗ್ಗೆ ಪರ-ವಿರೋಧ ಚರ್ಚೆಯಾಗಿದೆ. ನೆಚ್ಚಿನ ಗಾಯಕನನ್ನು ತಬ್ಬಿಕೊಂಡು, ಮುತ್ತು ಕೊಡುವುದರಲ್ಲಿ ಅಶ್ಲೀಲತೆ ಏನಿದೆ ಎಂದು ಒಂದಷ್ಟು ಜನ ಹೇಳಿದರೆ, ಪೊಲೀಸ್ ಅಧಿಕಾರಿಯಾದವರು ಸಾರ್ವಜನಿಕವಾಗಿ ಹೇಗಿರಬೇಕು ಎಂಬುದು ಗೊತ್ತಿರಬೇಕು ಎಂದು ಒಂದಷ್ಟು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಜಾಹೀರಾತು ನೋಡಿ ಗುಟ್ಕಾ ತಿಂದ ಮಕ್ಕಳು; ನಟ ಸಾಯಲ್ಲ, ನಾವು ಸಾಯ್ತೀವಾ ಅಂದರು!