Site icon Vistara News

Lalu Prasad Yadav: ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌ v/s ಲಾಲೂ ಪುತ್ರಿ

Lalu Prasad Yadav

ಪಾಟ್ನಾ: ಬಿಹಾರದ ಸಾರನ್‌ ಲೋಕಸಭಾ ಕ್ಷೇತ್ರ(Saran)ದಲ್ಲಿ ಲಾಲೂ ಪ್ರಸಾದ್‌ ಯಾದವ್‌(Lalu Prasad Yadav) ವರ್ಸಸ್‌ ಲಾಲೂ ಪುತ್ರಿ ಪರಸ್ಪರ ಮುಖಾಮುಖಿಯಾಗಿ ಕಣಕ್ಕಿದಿದ್ದಾರೆ. ಅರೆ.. ಇದೇನಿದು ಎಂದೇ ಕ್ಷೇತ್ರದಲ್ಲಿ ಅಪ್ಪ-ಮಗಳು ಇಬ್ಬರು ಪರಸ್ಪರ ಎದುರಾಳಿಗಳಾಗಿ ಕಣಕ್ಕಿಳಿದಿದ್ದಾರಾ ಎಂದು ಅಚ್ಚರಿ ಆಗೋದಂತೂ ನಿಜ. ಆದರೆ ನಿಜಾಂಶ ಏನೆಂದರೆ ಆರ್‌ಜೆಡಿ(RJD) ಮುಖ್ಯಸ್ಥ ಲಾಲೂ ಪ್ರಸಾದ್‌ ಯಾದವ್‌ ಅವರ ಹೆಸರನ್ನೇ ಇಟ್ಟುಕೊಂಡಿರುವ ರೈತನೋರ್ವ ಈ ಬಾರಿ ಸಾರನ್‌ ಕ್ಷೇತ್ರದಲ್ಲಿ ರಾಷ್ಟ್ರೀಯ ಜನ ಸಂಭಾವನಾ ಪಕ್ಷದಿಂದ(RJP) ಸ್ಪರ್ಧಿಸುತ್ತಿದ್ದು, ಇವರ ವಿರುದ್ಧ ಆರ್‌ಜೆಡಿಯಿಂದ ಲಾಲೂ ಪುತ್ರಿ ರೋಹಿಣಿ ಆಚಾರ್ಯ ಕಣಕ್ಕಿಳಿದಿದ್ದಾರೆ.

ಯಾರು ಈ ಲಾಲೂ ಪ್ರಸಾದ್‌ ಯಾದವ್‌?

ಸ್ಥಳೀಯ ರೈತನಾಗಿರುವ ಲಾಲೂ ಪ್ರಸಾದ್‌ ಯಾದವ್‌, ಸಾರನ್‌ ಜಿಲ್ಲೆಯವರಾಗಿದ್ದು, ಏಪ್ರಿಲ್‌ 26ರಂದು ಆರ್‌ಜೆಪಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. 2022ರಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಲಾಲೂ ಪ್ರಸಾದ್‌ ಯಾದವ್‌ ಸ್ಪರ್ದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅದೂ ಅಲ್ಲದೇ 2017ರಲ್ಲಿ ಮಾಜಿ ಲೋಕಸಭಾ ಸ್ಪೀಕರ್‌ ಮೀರಾ ಕುಮಾರ್‌ ಮತ್ತು ರಾಮನಾಥ್‌ ಕೋವಿಂದ್‌ ಕಣದಲ್ಲಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಅವರು ನಾಮಪತ್ರ ಸಲ್ಲಿಸಿದ್ದರು. ಬಳಿಕ ಅವರ ನಾಮಪತ್ರವನ್ನು ತಿರಸ್ಕರಿಸಲಾಯಿತು.

ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು, ಸಾರನ್‌ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಅನೇಕ ಬಾರಿ ಸ್ಪರ್ಧಿಸಿದ್ದೇನೆ. ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ವಿರುದ್ಧವೂ ಸ್ಪರ್ಧಿಸಿದ್ದೆ. ಈ ಬಾರಿ ಅವರ ಪುತ್ರಿ ರೋಹಿಣಿ ಆಚಾರ್ಯ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ನಾನು ಬದುಕಲು ಕೃಷಿ ಮಾಡುತ್ತಿದ್ದೇನೆ. ಅದರ ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದ್ದೇನೆ. ನಾನು ಪಂಚಾಯತ್‌ನಿಂದ ಅಧ್ಯಕ್ಷೀಯ ಚುನಾವಣೆವರೆಗೂ ಅದೃಷ್ಟಪರೀಕ್ಷೆಗೆ ನಡೆಸಿದ್ದೇನೆ. ನಾನು ಗೆದ್ದೇ ಗೆಲ್ಲುತ್ತೇನೆ. ಸಾರನ್‌ ಕ್ಷೇತ್ರದ ಜನ ನನ್ನ ಜೊತೆಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: Lok sabha Election 2024: ರಾಯ್‌ಬರೇಲಿಯಲ್ಲಿ ಕಣಕ್ಕಿಳಿದಿರುವ ದಿನೇಶ್‌ ಪ್ರತಾಪ್‌ ಸಿಂಗ್‌ ಹಿನ್ನೆಲೆ ಏನು?

ಇನ್ನು ಕೇವಲ ಪ್ರಚಾರಕ್ಕಾಗಿ, ಮತ ವಿಭಜನೆಗಾಗಿ ಸ್ಪರ್ಧೆ ಎಂಬ ಟೀಕೆಗೆ ಟಾಂಗ್‌ ಕೊಟ್ಟ ಯಾದವ್‌, ನಾನು ಇಂತಹ ಟೀಕೆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರು ನನ್ನ ಪ್ರತಿಸ್ಪರ್ಧಿಗಳು. ಅವರಿಂದ ಇಂತಹ ಹೇಳಿಕೆಗಳು ಬರುವುದು ಸಹಜ. ಇಂತಹ ಟೀಕೆಗಳಿಗೆ ನಾನು ಕುಗ್ಗಲ್ಲ. ನಾನು ಕೇವಲ ನನ್ನ ಮತದಾರರಿಗಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದರು. ಇನ್ನು ಲಾಲೂ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಬಳಿ 5 ಲಕ್ಷ ರೂ ಮತ್ತು ತಮ್ಮ ಪತ್ನಿ ಬಳಿ 2 ಲಕ್ಷ ರೂ. ನಗದು, 17.60 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಹಾಗೂ ತಮ್ಮ ಪತ್ನಿ ಬಳಿ 5.20 ಲಕ್ಷ ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

Exit mobile version