Site icon Vistara News

Land For Job Case | ಬಿಹಾರದಲ್ಲಿಂದು ವಿಶ್ವಾಸ ಮತ ಯಾಚನೆ; ಇಂದೇ ಸಿಬಿಐ ರೇಡ್​ !

CBI

ಪಟನಾ: ಬಿಹಾರದ ಆರ್​​ಜೆಡಿ (ರಾಷ್ಟ್ರೀಯ ಜನತಾ ದಳ್​) ಪಕ್ಷದ ನಾಲ್ವರು ಪ್ರಮುಖ ನಾಯಕರ ಮನೆ ಮೇಲೆ ಇಂದು ಸಿಬಿಐ ದಾಳಿಯಾಗಿದೆ. ಹಿಂದೆ 2004ರಿಂದ 2009ರವರೆಗೆ ಲಾಲು ಪ್ರಸಾದ್​ ಯಾದವ್​ ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದಾಗ ನಡೆದ ‘ಉದ್ಯೋಗಕ್ಕಾಗಿ ಭೂಮಿ’ (Land For Job Case ಗೋಲ್​ಮಾಲ್​ ಕೇಸ್​​ನ ತನಿಖೆಯ ಭಾಗವಾಗಿ ಇಂದು ರೇಡ್​ ಆಗಿದೆ. ಲಾಲು ಪ್ರಸಾದ್​ ಯಾದವ್​ರ ಇಡೀ ಕುಟುಂಬದ ವಿರುದ್ಧ ಇರುವ ಆರೋಪ ಇದು. ಅಷ್ಟೇ ಅಲ್ಲ, ಲಾಲುಗೆ ಆಪ್ತರಾಗಿದ್ದ ಹಲವರ ಹೆಸರೂ ಕೂಡ ಸಿಬಿಐ ಎಫ್​ಐಆರ್​​ನಲ್ಲಿ ಉಲ್ಲೇಖವಾಗಿದೆ. ಕೇಸ್​​ನೊಂದಿಗೆ ಲಿಂಕ್​ ಇದ್ದವರನ್ನೆಲ್ಲ ಸಿಬಿಐ ವಿಚಾರಣೆಗೆ ಒಳಪಡಿಸುತ್ತಿದೆ.

ಇಂದು ವಿಶ್ವಾಸಮತ ಯಾಚನೆ
ಬಿಹಾರದಲ್ಲಿ ಆಗಸ್ಟ್​ 10ರಂದು ಮಹಾ ಘಟ್ ಬಂಧನ್​ ಸರ್ಕಾರ ರಚನೆಯಾಗಿದೆ. ಜೆಡಿಯು ಮತ್ತು ಬಿಜೆಪಿ ಮೈತ್ರಿ ಮುರಿದು ಬಿದ್ದು, ಜೆಡಿಯು-ಆರ್​ಜೆಡಿ-ಕಾಂಗ್ರೆಸ್​​ ಮತ್ತು ಇತರ ಪಕ್ಷಗಳನ್ನೊಳಗೊಂಡ ಸರ್ಕಾರವಿದು. ತನಗೆ 165 ಶಾಸಕರ ಬೆಂಬಲ ಇದೆ ಎಂದು ಸರ್ಕಾರ ರಚನೆ ಮಾಡುವ ಹೊತ್ತಲ್ಲಿ ಹೇಳಿಕೊಂಡಿದ್ದ ಸಿಎಂ ನಿತೀಶ್​ ಕುಮಾರ್ ಇಂದು ಅಲ್ಲಿನ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಲಿದ್ದಾರೆ. ಆದರೆ ಇಂದೇ ಬೆಳಗ್ಗೆ ಆರ್​ಜೆಡಿಯ ಪ್ರಮುಖ ನಾಲ್ವರು ನಾಯಕರ ಮನೆ ಮೇಲೆ ಸಿಬಿಐ ರೇಡ್​ ಆಗಿದೆ.

ಆರ್​ಜೆಡಿ ಪ್ರತಿಭಟನೆ
ಲಾಲು ಪ್ರಸಾದ್ ಯಾದವ್​ ಆಪ್ತರಲ್ಲಿ ಒಬ್ಬರಾದ ಸುನೀಲ್​ ಸಿಂಗ್​, ಸುಬೋಧ್ ರಾಯ್, ಅಷ್ಫಾಕ್ ಕರೀಮ್ ಮತ್ತು ಫೈಯಾಜ್​ ಅಹ್ಮದ್​​ ಮನೆಗಳನ್ನು ಇಂದು ಸಿಬಿಐ ರೇಡ್ ಮಾಡಿದೆ. ಇವರೆಲ್ಲರೂ ಸದ್ಯದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್​ಗೆ ಕೂಡ ಆಪ್ತರು. ಇಂದು ಈ ನಾಯಕರ ಮನೆ ಮೇಲೆ ಸಿಬಿಐ ದಾಳಿಯಾಗುತ್ತಿದ್ದಂತೆ ಆರ್​ಜೆಡಿಯ ಹಲವು ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಹಾರ ವಿಧಾನಸಭೆ ಬಳಿ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದ್ದರ ಬಗ್ಗೆ ಪ್ರತಿಕ್ರಿಯೆ ನೀಡಿದ ಸುನೀಲ್​ ಸಿಂಗ್​, ‘ಈ ದಾಳಿಯನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ. ಹೀಗೆಲ್ಲ ದಾಳಿ ಮಾಡಿಸಿದರೆ, ಶಾಸಕರು ಹೆದರಿಕೊಳ್ಳುತ್ತಾರೆ. ಬಿಜೆಪಿ ಪರವಾಗಿ ನಿಲ್ಲುತ್ತಾರೆ ಎಂದುಕೊಂಡುಬಿಟ್ಟಿದ್ದಾರೆ’ ಎಂದು ಕಿಡಿಕಾರಿದ್ದಾರೆ. ಹಾಗೇ, ಆರ್​ಜೆಡಿಯ ರಾಜ್ಯಸಭಾ ಸಂಸದ ಮನೋಜ್​ ಝಾ ಮಾತನಾಡಿ, ‘ಇಡಿ, ಐಟಿ, ಸಿಬಿಐ ದಾಳಿ ಮಾಡುತ್ತಿದೆ ಎಂದು ವ್ಯಾಖ್ಯಾನಿಸುವುದೇ ತಪ್ಪು. ನಿಜ ಹೇಳಬೇಕು ಎಂದರೆ ಇದು ಬಿಜೆಪಿ ಮಾಡುತ್ತಿರುವ ರೇಡ್​. ತನಿಖಾ ದಳಗಳೆಲ್ಲ ಬಿಜೆಪಿ ಕೈಕೆಳಗೆ ಕೆಲಸ ಮಾಡುತ್ತಿವೆ. ಇಂದು ಬಿಹಾರ ವಿಧಾನಸಭೆಯಲ್ಲಿ ಮಹಾ ಘಟ್​ ಬಂಧನ್​ ಸರ್ಕಾರದ ವಿಶ್ವಾಸ ಮತ ಯಾಚನೆ ನಡೆಯಲಿದೆ. ಆರ್​ಜೆಡಿ ಶಾಸಕರನ್ನು ಹೆದರಿಸಲೇ ಈ ದಾಳಿಯೂ ನಡೆದಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲಾಲು ಆಪ್ತ ಸುನೀಲ್​ ಸಿಂಗ್​ ಸೇರಿ ಆರ್​​ಜೆಡಿ ನಾಯಕರ ಮನೆ ಮೇಲೆ ಸಿಬಿಐ ದಾಳಿ

Exit mobile version