ಪಟನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕಿ ರಾಬ್ರಿ ದೇವಿ (Rabri Devi) ಮತ್ತು ಅವರ ಪುತ್ರಿಯರಾದ ಮಿಸಾ ಭಾರತಿ (Misa Bharti) ಮತ್ತು ಹೇಮಾ ಯಾದವ್ ವಿರುದ್ಧ ಜಾರಿ ನಿರ್ದೇಶನಾಲಯ (Enforcement directorate – ED) ʼಉದ್ಯೋಗಕ್ಕಾಗಿ ಭೂಮಿ ಲಂಚʼ (Land for Jobs Case) ಪ್ರಕರಣದಲ್ಲಿ ಮಂಗಳವಾರ ಚಾರ್ಜ್‌ಶೀಟ್ ಸಲ್ಲಿಸಿದೆ.
ಉದ್ಯೋಗಕ್ಕಾಗಿ ಭೂಮಿಯನ್ನು ಲಂಚವಾಗಿ ಪಡೆದ ಹಗರಣದಲ್ಲಿ ಚಾರ್ಜ್‌ಶೀಟ್ ಅನ್ನು ದೆಹಲಿಯ ವಿಶೇಷ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನ್ಯಾಯಾಲಯವು ಜನವರಿ 16ರಂದು ಪ್ರಕರಣದ ವಿಚಾರಣೆಗೆ ಸಿದ್ಧವಾಗಿದೆ ಎಂದು ವರದಿಯಾಗಿದೆ.
4,751 ಪುಟಗಳ ಚಾರ್ಜ್‌ಶೀಟ್‌ನಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರ ಕುಟುಂಬದ ಆಪ್ತ ಸಹಾಯಕ ಅಮಿತ್ ಕತ್ಯಾಲ್ ಮತ್ತು ಇತರ ವ್ಯಕ್ತಿಗಳು ಹಾಗೂ ಕಂಪನಿಗಳನ್ನು ಹೆಸರಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವರ್ಷ ನವೆಂಬರ್‌ನಲ್ಲಿ ಕತ್ಯಾಲ್ ಅವರನ್ನು ಬಂಧಿಸಲಾಗಿತ್ತು. ಅವರ ವಿರುದ್ಧದ ಇಡಿ ಪ್ರಕ್ರಿಯೆಗಳನ್ನು ರದ್ದುಗೊಳಿಸಲು ದೆಹಲಿ ಹೈಕೋರ್ಟ್ ನಿರಾಕರಿಸಿದೆ.
ಜಾರಿ ನಿರ್ದೇಶನಾಲಯವು ಇದೇ ಪ್ರಕರಣದಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಯಾದವ್ ಅವರಿಗೂ ಈ ಹಿಂದೆ ಹಲವು ಬಾರಿ ಸಮನ್ಸ್ ಜಾರಿ ಮಾಡಿತ್ತು. ಆದರೆ ಅವರು ಇನ್ನೂ ತನಿಖೆಗೆ ಹಾಜರಾಗಿಲ್ಲ.
ಇಡಿ ಸಮನ್ಸ್‌ನ ಕುರಿತು ಕೇಂದ್ರದ ವಿರುದ್ಧ ಲಾಲು ವಾಗ್ದಾಳಿ ನಡೆಸಿದ್ದಾರೆ. “ಈ ಏಜೆನ್ಸಿಗಳ ತಪ್ಪಿಲ್ಲ ಎಂದು ನಾನು ಯಾವಾಗಲೂ ಸಮರ್ಥಿಸಿಕೊಳ್ಳುತ್ತೇನೆ. ಯಾಕೆಂದರೆ ಅವು ಮೇಲಿನಿಂದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ನಾನು ಸ್ವಲ್ಪ ಸಮಯದ ಹಿಂದೆ ಹೇಳಿದ ಭವಿಷ್ಯ ನಿಜವಾಗಿದೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ವಿಧಾನಸಭಾ ಚುನಾವಣೆಗಳು ಮುಗಿದ ಕೂಡಲೇ ಈ ಸಂಸ್ಥೆಗಳು ವ್ಯವಹಾರಕ್ಕೆ ಮರಳುತ್ತವೆ ಮತ್ತು ತಮ್ಮ ಗುರಿಗಳನ್ನು ಬಿಹಾರ, ಜಾರ್ಖಂಡ್ ಮತ್ತು ದೆಹಲಿ ಕಡೆಗೆ ತಿರುಗಿಸಲಿವೆ ಎಂದು ನಾನು ಹೇಳಿದ್ದೆʼʼ ಎಂದು ಲಾಲು ಟೀಕಿಸಿದ್ದಾರೆ.
ಪ್ರಕರಣವೇನು?
2004 ಮತ್ತು 2009ರ ನಡುವೆ ಲಾಲು ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಆಡಳಿತದಲ್ಲಿ ರೈಲ್ವೆ ಸಚಿವರಾಗಿದ್ದಾಗ ಉದ್ಯೋಗಕ್ಕಾಗಿ ಭೂ ಹಗರಣ ನಡೆದಿತ್ತು. ಕೇಂದ್ರೀಯ ತನಿಖಾ ದಳ (ಸಿಬಿಐ) ರೈಲ್ವೆಯಲ್ಲಿ ಅಕ್ರಮ ನೇಮಕಾತಿಗಳನ್ನು ಮಾಡಲಾಗಿತ್ತು. ನೇಮಕಾತಿಗಾಗಿ ಭಾರತೀಯ ರೈಲ್ವೇಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಉಲ್ಲಂಘಿಸಲಾಗಿತ್ತು. ರೈಲ್ವೆಯಲ್ಲಿ ಉದ್ಯೋಗಗಳನ್ನು ಪಡೆದವರು ನೇರವಾಗಿ ಅಥವಾ ಅವರ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಮೂಲಕ ಲಾಲು ಅವರ ಕುಟುಂಬ ಸದಸ್ಯರಿಗೆ ಹೆಚ್ಚು ಕಡಿಮೆ ಪುಕ್ಕಟೆಯಾಗಿ ತಮ್ಮ ಭೂಮಿಯನ್ನು ಮಾರಾಟ ಮಾಡಿಕೊಂಡಿದ್ದರು.
ಆದರೆ ಲಾಲು ಯಾದವ್ ಕುಟುಂಬ ಈ ಆರೋಪಗಳನ್ನು ನಿರಾಕರಿಸಿದ್ದು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: Land for Jobs Case: ಲಾಲು ಪ್ರಸಾದ್ ಯಾದವ್ ಆಪ್ತನ ಪತ್ನಿಗೂ ಸಂಕಷ್ಟ; 9 ಕಡೆಗಳಲ್ಲಿ ಸಿಬಿಐ ದಾಳಿ