ನವದೆಹಲಿ: ಚಂದ್ರಯಾನ -3 ರ ಪ್ರಜ್ಞಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿನ ಅನ್ವೇಷಣೆ ಆರಂಭಿಸಿದ ಕೆಲವೇ ದಿನಗಳಲ್ಲಿ 100 ಮೀಟರ್ ದೂರವನ್ನು ಕ್ರಮಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಇದೇ ವೇಳೆ ಅವರು ಸಂಶೋಧಣೆಯ ಪ್ರಮುಖ ಭಾಗವಾಗಿರುವ ರೋವರ್ ಮತ್ತು ಲ್ಯಾಂಡರ್ ನಿದ್ರೆಗೆ ಜಾರುವ ಪ್ರಕ್ರಿಯೆಯು ಒಂದು ಅಥವಾ ಎರಡು ದಿನಗಳಲ್ಲಿ ಪ್ರಾರಂಭವಾಗಲಿದೆ ಎಂಬುದಾಗಿಯೂ ಮಾಹಿತಿ ನೀಡಿದ್ದಾರೆ.
ಶುಭ ಸುದ್ದಿ ಏನೆಂದರೆ ರೋವರ್ ಲ್ಯಾಂಡರ್ನಿಂದ ಸುಮಾರು 100 ಮೀಟರ್ ದೂರದ ತನಕ ಚಲಿಸಿದೆ. ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಎರಡೂ ಕೋಶಗಳನ್ನು ಮಲಗಿಸುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಲಿದ್ದೇವೆ. ಚಂದ್ರನಲ್ಲಿ ರಾತ್ರಿ ಆರಂಭವಾಗಲಿದೆ. ಅದನ್ನು ತಡೆದುಕೊಳ್ಳುವುದಕ್ಕಾಗಿ ಈ ಪ್ರಕ್ರಿಯೆ ಎಂದು ಅವರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಭಾರತೀಯ ಪ್ರಥಮ ಬಾಹ್ಯಾಕಾಶ ದರ್ಜೆಯ ಸೌರ ವೀಕ್ಷಣಾಲಯವಾದ ಆದಿತ್ಯ ಎಲ್ 1 ಮಿಷನ್ ಉಡಾವಣೆಯ ನಂತರ ಶ್ರೀ ಸೋಮನಾಥ್ ಈ ಬೆಳವಣಿಗೆಯನ್ನು ಪ್ರಕಟಿಸಿದ್ದಾರೆ. ಲ್ಯಾಂಡರ್ ಮತ್ತು ರೋವರ್ ಗಳಾದ ವಿಕ್ರಮ್ ಮತ್ತು ಪ್ರಜ್ಞಾನ್ ಇನ್ನೂ ಕಾರ್ಯನಿರ್ವಹಿಸುತ್ತಿವೆ. ವೈಜ್ಞಾನಿಕ ಉಪಕರಣಗಳನ್ನು ನಿಯಂತ್ರಿಸುವ ಇಸ್ರೊ ತಂಡವು ಅದರ ಬೆನ್ನಲ್ಲೇ ಸಾಕಷ್ಟು ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Aditya- L1 : ಆದಿತ್ಯ ಎಲ್1 ಮಿಷನ್ನ ಉಡಾವಣೆಯ ಮೊದಲ ಚಿತ್ರಗಳು ಹೀಗಿವೆ
ಪ್ರಗ್ಯಾನ್ 100… ಚಂದ್ರನ ಮೇಲೆ, ಪ್ರಜ್ಞಾನ್ ರೋವರ್ 100 ಮೀಟರ್ ಗಿಂತಲೂ ಹೆಚ್ಚು ಪ್ರಯಾಣಿಸಿದೆ. ಅದರ ಯಾನ ಮುಂದುವರಿಯುತ್ತಿದೆ ಎಂದು ಇಸ್ರೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಲ್ಯಾಂಡರ್ ವಿಕ್ರಮ್ ಪ್ರಜ್ಞಾನ್ ರೋವರ್ ಮಾಡ್ಯೂಲ್ ಚಂದ್ರನ ದಕ್ಷಿಣ ಧ್ರುವದ ಬಳಿಯ ನೈಸರ್ಗಿಕ ಘಟನೆಗಳನ್ನು ದಾಖಲಿಸಿದೆ ಎಂದು ಇಸ್ರೋ ಗುರುವಾರ ತಿಳಿಸಿದೆ. ಆದಾಗ್ಯೂ, ಅದರ ಮೂಲ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಹೇಳಿದೆ.
ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಸಾಧಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು. ಇಸ್ರೋದ ಮೊದಲ ಚಂದ್ರನ ಲ್ಯಾಂಡಿಂಗ್ ಕಾರ್ಯಾಚರಣೆಯ ಯಶಸ್ವಿಯಾದ ಬಳಿಕ ಭಾರತವು, ಅಮೆರಿಕ, ರಷ್ಯಾ ಮತ್ತು ಚೀನಾವನ್ನು ಒಳಗೊಂಡ ರಾಷ್ಟ್ರಗಳ ಎಲೈಟ್ ಕ್ಲಬ್ಗೆ ಸೇರ್ಪಡೆಗೊಂಡಿತು.
ಏತನ್ಮಧ್ಯೆ, ಮತ್ತೊಂದು ಸಾಧನೆಯಲ್ಲಿ, ಇಸ್ರೋ ಇಂದು ದೇಶದ ಮಹತ್ವಾಕಾಂಕ್ಷೆಯ ಸೌರ ಮಿಷನ್ ಆದಿತ್ಯ ಎಲ್ 1 ಅನ್ನು ಯಶಸ್ವಿಯಾಗಿ ಉಡಾಯಿಸಿದೆ. ಇದು ಯಶಸ್ವಿ ಚಂದ್ರ ಯಾತ್ರೆಯ ಬಳಿಕದ ಐತಿಹಾಸಿಕ ದಾಖಲೆಯಾಗಿದೆ.
ಆದಿತ್ಯ ಎಲ್ 1 ಸೂರ್ಯನನ್ನು ಅಧ್ಯಯನ ಮಾಡಲು ಹೊರಟ ಮೊದಲ ಭಾರತೀಯ ಉಪಗ್ರಹ ಕಾರ್ಯಾಚರಣೆಯಾಗಿದೆ. ಸೌರ ಮಂಡಲದ ಲ್ಯಾಗ್ರೇಂಜ್ ಪಾಯಿಂಟ್ (ಎಲ್ 1)ನಲ್ಲಿ ಇದು ಅನ್ವೇಷಣೆ ನಡೆಸಲಿದೆ.