ಕೊಲಂಬೊ: ಆರ್ಥಿಕ ಕುಸಿತ ಮತ್ತು ಅರಾಜಕತೆಯಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ದೇಶವನ್ನು ಸಂಕಷ್ಟಕ್ಕೆ ತಳ್ಳಿದ ಆರೋಪ ಎದುರಿಸುತ್ತಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ದೇಶ ಬಿಟ್ಟು ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ಬೆನ್ನಲ್ಲೇ ದೇಶದಲ್ಲಿ ಮತ್ತೆ ಪ್ರತಿಭಟನೆ ಭುಗಿಲೆದ್ದಿದೆ. ಈ ನಡುವೆ, ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಅಧ್ಯಕ್ಷರ ನಿವಾಸಕ್ಕೆ ಮುತ್ತಿಗೆ ಹಾಕಿದ ಮಾದರಿಯಲ್ಲೇ ಬುಧವಾರ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ನಿವಾಸದ ಕಡೆಗೂ ಜನರು ಪ್ರವಾಹದೋಪಾದಿಯಲ್ಲಿ ಸಾಗುತ್ತಿದ್ದಾರೆ. ಹೀಗಾಗಿ ಪ್ರಧಾನಿ ನಿವಾಸದ ಮೇಲೂ ದಾಳಿ ನಡೆಯುವ ಸಾಧ್ಯತೆ ಇದೆ. ಪ್ರತಿಭಟನಾಕಾರರು ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರ ರಾಜೀನಾಮೆಗೂ ಒತ್ತಾಯಿಸುತ್ತಿದ್ದಾರೆ.