Site icon Vistara News

Lanka on fire: ಮಾಲ್ಡೀವ್ಸ್‌ನಿಂದ ಸಿಂಗಪುರಕ್ಕೆ ಹಾರಲಿದ್ದಾರೆಯೇ ಗೊಟಬಯ ರಾಜಪಕ್ಸ?

ಮಾಲೆ: ಶ್ರೀಲಂಕಾದಿಂದ ತಪ್ಪಿಸಿಕೊಂಡು ಮಾಲ್ಡೀವ್ಸ್‌ ತಲುಪಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಅಲ್ಲಿಂದ ಬುಧವಾರ ರಾತ್ರಿಯೇ ಸಿಂಗಪುರಕ್ಕೆ ಹಾರಲಿದ್ದಾರೆಯೇ? ಹೌದು ಎನ್ನುತ್ತವೆ ಮೂಲಗಳು.

ಶ್ರೀಲಂಕಾದ ಆರ್ಥಿಕ ದುಸ್ಥಿತಿಗೆ ಕಾರಣ ಎನ್ನುವ ಆರೋಪ ಎದುರಿಸುತ್ತಿರುವ ಗೊಟಬಯ ಅವರ ಅಧಿಕೃತ ನಿವಾಸಕ್ಕೆ ಕಳೆದ ಶನಿವಾರ ಪ್ರತಿಭಟನಾಕಾರರು ನುಗ್ಗಿ ದಾಂಧಲೆ ನಡೆಸಿದ್ದರು. ಭಯಗೊಂಡ ರಾಜಪಕ್ಸ ಆವತ್ತೇ ತಪ್ಪಿಸಿಕೊಂಡು ವಿದೇಶಕ್ಕೆ ಹಾರುವ ಪ್ರಯತ್ನ ನಡೆಸಿದ್ದರು. ಆದರೆ, ವಿಮಾನ ನಿಲ್ದಾಣ ಮತ್ತು ಬಂದರಿನ ಮೂಲಕ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನಗಳು ವಿಫಲವಾದ ಬಳಿಕ ಮಂಗಳವಾರ ರಾತ್ರಿ ತಾವು ಮಿಲಿಟರಿ ಚೀಫ್‌ ಆಗಿರುವ ಪರಮಾಧಿಕಾರವನ್ನು ಬಳಸಿಕೊಂಡು ಮಿಲಿಟರಿ ವಿಮಾನದಲ್ಲಿ ಮಾಲ್ಡೀವ್ಸ್‌ ತಲುಪಿದ್ದರು.

ಒಂದೊಮ್ಮೆ ಲಂಕಾದಲ್ಲೇ ಉಳಿದರೆ ತಮ್ಮನ್ನು ಬಂಧಿಸಬಹುದು ಎಂಬ ಭೀತಿ ಅವರಿಗಿತ್ತು. ಹಾಗಾಗಿ ಸುರಕ್ಷಿತ ಜಾಗವೊಂದು ಬೇಕಾಗಿತ್ತು. ಅದಕ್ಕಾಗಿ ಅವರು ಟ್ರಾನ್ಸಿಟ್‌ ಪಾಯಿಂಟ್‌ ಆಗಿದ್ದು ಮಾಲ್ದೀವ್ಸ್‌ ಎನ್ನಲಾಗಿದೆ. ಒಂದು ಹಂತದಲ್ಲಿ ಬೇರೆ ದೇಶವನ್ನು ತಲುಪಿದರೆ ಅಲ್ಲಿಂದ ಮುಂದೆ ಬೇಕಾದ ರಾಷ್ಟ್ರಕ್ಕೆ ಹೋಗಬಹುದು ಎನ್ನುವುದು ಅವರ ಲೆಕ್ಕಾಚಾರವಾಗಿತ್ತು ಎನ್ನಲಾಗಿದೆ. ಹೀಗಾಗಿ ಅವರು ಈಗ ಅಲ್ಲಿಂದ ಸಿಂಗಪುರಕ್ಕೆ ಹಾರುವ ಪ್ಲ್ಯಾನ್‌ ಮಾಡಿದ್ದಾರೆ ಎನ್ನಲಾಗಿದೆ.

ಮಾಲ್ಡೀವ್ಸ್‌ನಲ್ಲಿ ಸ್ವಾಗತ
ಶ್ರೀಲಂಕಾದಿಂದ ಎಲ್ಲರ ಕಣ್ತಪ್ಪಿಸಿ ಬಂದರೂ ಮಾಲ್ಡೀವ್ಸ್‌ನಲ್ಲಿ ರಾಜಪಕ್ಸ ಅವರಿಗೆ ಉತ್ತಮ ಸ್ವಾಗತವೇ ಸಿಕ್ಕಿದೆ. ವೆಲಾನಾ ವಿಮಾನ ನಿಲ್ದಾಣದಲ್ಲಿ ಮಾಲ್ಡೀವಿಯನ್‌ ಸರಕಾರದ ಅಧಿಕೃತ ಪ್ರತಿನಿಧಿಗಳೇ ಅವರನ್ನು ಸ್ವಾಗತಿಸಿದರು. ಅಲ್ಲಿಂದ ಅವರನ್ನು ಬಿಗಿ ಬಂದೋಬಸ್ತ್‌ನಲ್ಲಿ ಗುಪ್ತ ಸ್ಥಳಕ್ಕೆ ಕರೆದೊಯ್ಯಲಾಗಿದೆ.

ಈ ಮಧ್ಯೆ, ಶ್ರೀಲಂಕಾದಲ್ಲಿ ಭಾರಿ ಆಪಾದನೆ ಎದುರಿಸುತ್ತಿರುವ ರಾಜಪಕ್ಸ ಅವರನ್ನು ಮಾಲ್ಡೀವ್ಸ್‌ ಪ್ರವೇಶಿಸಲು ಅವಕಾಶ ನೀಡಿದ್ದನ್ನು ಪ್ರತಿಪಕ್ಷಗಳು ಆಕ್ಷೇಪಿಸಿದ್ದವು. ಜನರು ಕೂಡಾ ಮಾಲ್ಡೀವ್ಸ್‌ ಅಧ್ಯಕ್ಷ ಸೋಲಿಹ್‌, ಸ್ಪೀಕರ್‌ ಹಾಗೂ ಮಾಜಿ ಅಧ್ಯಕ್ಷ ಮೊಹಮ್ಮದ್‌ ನಶೀದ್‌ ಅವರ ಮೇಲೆ ಸಿಟ್ಟಾಗಿದ್ದಾರೆ. ರಾಜಪಕ್ಸ ಅವರು ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದು ಸರಿಯಲ್ಲ ಎನ್ನುವುದು ಅವರ ವಾದ.

ಆದರೆ, ರಾಜಪಕ್ಸ ಅವರು ಶ್ರೀಲಂಕಾದ ಅಧ್ಯಕ್ಷರು, ಅವರಿನ್ನೂ ರಾಜೀನಾಮೆ ನೀಡಿಲ್ಲ. ಹಾಗಿರುವಾಗ ಇನ್ನೊಂದು ದೇಶದ ಅಧ್ಯಕ್ಷರಿಗೆ ಪ್ರವೇಶ ಅವಕಾಶ ನಿರಾಕರಿಸುವುದು ಶಿಷ್ಟಾಚಾರದ ಉಲ್ಲಂಘನೆ ಆಗುತ್ತದೆ ಎಂದು ಸರಕಾರ ವಾದಿಸಿದೆ.

ನಿಜವೆಂದರೆ ರಾಜಪಕ್ಸ ಅವರನ್ನು ಹೊತ್ತು ತಂದ ವಿಮಾನವನ್ನು ಇಳಿಸಲು ಮಾಲ್ಡೀವ್ಸ್‌ನ ನಾಗರಿಕ ವಿಮಾನ ಯಾನ ಸಚಿವಾಲಯ ನಿರಾಕರಿಸಿತ್ತು. ಆದರೆ, ಸ್ಪೀಕರ್‌ ಅಗಿರುವ ನಶೀದ್‌ ಅವರ ಸೂಚನೆಯಂತೆ ಅವಕಾಶ ನೀಡಲಾಗಿತ್ತು. ಈ ನಡುವೆ ಮಾಲ್ಡೀವ್ಸ್‌ನಲ್ಲಿ ಗೋ ಬ್ಯಾಕ್‌ ಗೊಟಬಯ ಎಂಬ ಹೆಸರಿಲ್ಲಿ ಪ್ರತಿಭಟನೆಯೂ ನಡೆದಿದೆ.

ಇದನ್ನೂ ಓದಿ| Lanka on fire: ಎಲ್ಲ ಬಾಗಿಲು ಮುಚ್ಚಿದಾಗ ಮಿಲಿಟರಿ ವಿಮಾನದಲ್ಲಿ ಗೊಟಬಯ ಪರಾರಿಯಾಗಿದ್ದು ಹೇಗೆ?

Exit mobile version