ಕೊಲಂಬೊ: ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಜನಾಕ್ರೋಶ ಮುಗಿಲು ಮುಟ್ಟಿದೆ. ಶನಿವಾರ ಪ್ರತಿಭಟನಾಕಾರರು ಕೊಲಂಬೊದಲ್ಲಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ ಕೈವಶ ಮಾಡಿಕೊಂಡಿದ್ದಾರೆ. ಗೊಟಬಯ ಅವರು ಜೀವಭಯದಿಂದ ತತ್ತರಿಸಿ ಪಲಾಯನ ಮಾಡಿದ್ದಾರೆ. ಸಾವಿರಾರು ಮಂದಿ ಒಂದೇ ಸಮನೆ ಅಧ್ಯಕ್ಷರ ನಿವಾಸಕ್ಕೆ ನುಗ್ಗುತ್ತಿದ್ದು, ದಾಂಧಲೆ ಎಬ್ಬಿಸಿದ್ದಾರೆ. ಭಾರಿ ಸಂಖ್ಯೆಯಲ್ಲಿ ಪೊಲೀಸರು ಇದ್ದರೂ, ಮಿಲಿಟರಿಯನ್ನು ಕರೆಸಿಕೊಂಡರೂ ನಿಯಂತ್ರಿಸುವುದೇ ಕಷ್ಟವಾಗುತ್ತಿದೆ. ಪೊಲೀಸರು ಅಶ್ರುವಾಯು, ಜಲಫಿರಂಗಿಗಳನ್ನು ಪ್ರಯೋಗಿಸುತ್ತಿದ್ದರೂ ಯಾರೂ ಹಿಮ್ಮೆಟ್ಟುತ್ತಿಲ್ಲ.
ಆಶ್ರುವಾಯು ಪ್ರಯೋಗ, ಗುಂಡು ಹಾರಾಟ
ಕೊಲಂಬೊ ನಗರದ ಸಮುದ್ರ ತೀರದಲ್ಲಿರುವ ಅಧ್ಯಕ್ಷರ ಅಧಿಕೃತ ನಿವಾಸದ ಕಡೆಗೆ ಸಾಗರೋಪಾದಿಯಲ್ಲಿ ಜನ ಪ್ರವಾಹ ಹರಿಯುತ್ತಿದೆ. ಅವರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ನಡೆಸಿದರು. ಗುಂಡು ಹಾರಾಟವೂ ನಡೆದಿದೆ. ಈ ಘಟನೆಯಲ್ಲಿ ಸುಮಾರು ೨೧ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಮತ್ತು ಜನರ ನಡುವೆ ಭಾರಿ ಹೊಡೆದಾಟವೇ ನಡೆದಿದೆ. ಇದರಲ್ಲಿ ಪೊಲೀಸರು ಕೂಡಾ ಗಾಯಗೊಂಡಿದ್ದಾರೆ.
ಈಜುಕೊಳದಲ್ಲಿ ಈಜಾಡಿದ ಪ್ರತಿಭಟನಾಕಾರರು
ಸಮುದ್ರ ತೀರದಲ್ಲಿರುವ ಅಧ್ಯಕ್ಷರ ನಿವಾಸದಲ್ಲಿ ಬೃಹತ್ ಗಾತ್ರದ ಈಜುಕೊಳವಿದ್ದು, ಪ್ರತಿಭಟನಾಕಾರರು ಅದಕ್ಕೆ ಜಿಗಿದು ಈಜಾಡಿದ್ದಾರೆ. ಅಡುಗೆ ಮನೆಗೆ ನುಗ್ಗಿ ಅಲ್ಲಿರುವ ಆಹಾರ ಪದಾರ್ಥಗಳನ್ನು, ಪಾನೀಯಗಳನ್ನು ಸೇವಿಸಿದ್ದಾರೆ. ಕಟ್ಟಡದಲ್ಲಿರುವ ಎಲ್ಲಾ ಕೋಣೆಗಳಿಗೆ ನುಗ್ಗಿ ಅಲ್ಲಿರುವ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತು ಖುಷಿ ಆಚರಣೆ!
ಈ ನಡುವೆ ಪ್ರತಿಭಟನಾಕಾರರು ಅಧ್ಯಕ್ಷರ ಕುರ್ಚಿ ಮೇಲೆ ಕುಳಿತು ಫೋಟೊ ತೆಗೆಸಿಕೊಳ್ಳುವುದು, ಹಾನಿ ಮಾಡುವ ದೃಶ್ಯಗಳು ವೈರಲ್ ಆಗುತ್ತಿವೆ.
ಪ್ರತಿಭಟನೆಗೆ ಜಯಸೂರ್ಯ ಬೆಂಬಲ
ಮಾಜಿ ಕ್ರಿಕೆಟಿಗ ಜಯಸೂರ್ಯ ಅವರು ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದು, ಇನ್ನಾದರೂ ರಾಜೀನಾಮೆ ಕೊಡಿ ಎಂದು ಅಧ್ಯಕ್ಷ ಗೊಟಬಯ ಅವರಿಗೆ ತಾಕೀತು ಮಾಡಿದ್ದಾರೆ. ನಾನು ಯಾವತ್ತಿದ್ದರೂ ಜನರ ಪರವಾಗಿ ನಿಲ್ಲುತ್ತೇನೆ. ನಾವು ಅತಿ ಶೀಘ್ರದಲ್ಲಿ ಗೆಲುವನ್ನು ಸಂಭ್ರಮಿಸಲಿದ್ದೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮಾಜಿ ಸಚಿವರ ಮೇಲೆ ಹಲ್ಲೆ
ಪ್ರತಿಭಟನಾಕಾರರು ತಮ್ಮ ಕೈಗೆ ಸಿಕ್ಕಿದ ಸಂಸದ ರಂಜಿತಾ ಸೇನಾರತ್ನೆ ಅವರ ಮೆಲೆ ದಾಳಿ ನಡೆಸಿದ್ದಾರೆ. ಅವರ ಮೇಲೆ ಬೇಕಾಬಿಟ್ಟಿ ಹಲ್ಲೆ ಮಾಡಲಾಗಿದೆ.