ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ, ಬಿಜೆಪಿಯ ಸತ್ಯಪಾಲ್ ಮಲಿಕ್ (Satyapal Malik) ಅವರ ಸಂದರ್ಶನ ಮಾಡಿದ್ದಾರೆ. ಸಂದರ್ಶನದ ವೇಳೆ ಪುಲ್ವಾಮಾ ದಾಳಿ, ಅದಕ್ಕೆ ಯಾರು ಹೊಣೆ ಎಂಬುದು ಸೇರಿ ಹಲವು ವಿಷಯಗಳ ಕುರಿತು ಚರ್ಚೆಯಾಗಿದ್ದು, ಇದು ದೇಶಾದ್ಯಂತ ಸುದ್ದಿಯಾಗಿದೆ. ಇದರ ಬೆನ್ನಲ್ಲೇ, ರಾಜ್ಯಸಭೆ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಸಿರೋಯಾ (Lehar Singh Siroya) ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.
“ರಾಹುಲ್ ಗಾಂಧಿ ಅವರು ಸತ್ಯಪಾಲ್ ಮಲಿಕ್ ಅವರ ಸಂದರ್ಶನ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿಯೇ ಆಂತರಿಕ ಬಿಕ್ಕಟ್ಟು ಉಂಟಾಗಿರುವ, ಬಿಕ್ಕಟ್ಟಿಗೆ ಕಾರಣರಾದವರ ಪಟ್ಟಿಯನ್ನು ನಾನು ರಾಹುಲ್ ಗಾಂಧಿ ಅವರಿಗೆ ಕೊಡುತ್ತೇನೆ. ಅವರು ಬಂಡಾಯ ನಾಯಕರ ಸಂದರ್ಶನ ಮಾಡಲಿ. ಅಷ್ಟಕ್ಕೂ, ರಾಹುಲ್ ಗಾಂಧಿ ಅವರು ಬೇರೊಂದು ವೃತ್ತಿಯಲ್ಲಿ ತೊಡಗಿದ್ದಾರೆ. 2024ರ ಮೇ ಬಳಿಕ ಅವರು ಒಟಿಟಿ (ಓವರ್ ದಿ ಟಾಪ್) ಪ್ಲಾಟ್‌ಫಾರ್ಮ್‌ನಲ್ಲಿ ಟಾಕ್‌ಶೋ ಆರಂಭಿಸಬಹುದು” ಎಂದು ತಿರುಗೇಟು ನೀಡಿದ್ದಾರೆ.
Rahul Gandhi has interviewed Satyapal Malik. I can give a list of Congress leaders he can interview first to understand what is happening inside his own party. Good he is cultivating an alternative profession. After May 2024 he can start a talk show on any OTT platform. pic.twitter.com/WWB7adQX9w
— Lahar Singh Siroya (@LaharSingh_MP) October 26, 2023
ಸಂದರ್ಶನದ ವೇಳೆ ಸತ್ಯಪಾಲ್ ಮಲಿಕ್ ಹೇಳಿದ್ದೇನು?
”ನಮ್ಮ ತಪ್ಪಿನಿಂದಾಗಿಯೇ ಪುಲ್ವಾಮಾ ದಾಳಿ ನಡೆಯಿತು. ತಪ್ಪಿನ ಬಗ್ಗೆಯೂ ಎಲ್ಲಿಯೂ ಮಾತನಾಡದಂತೆ ನನಗೆ ತಿಳಿಸಲಾಯಿತು. ಬಹುಶಃ ತನಿಖೆಯ ಕಾರಣಕ್ಕೆ ಹೀಗೆ ಹೇಳಿಬೇಕೆಂದು ನಾನು ಅಂದುಕೊಂಡಿದ್ದೆ. ಆದರೆ, ಯಾವ ತನಿಖೆಯೂ ನಡೆಯಲಿಲ್ಲ. ಆ ದಾಳಿಯನ್ನು ಚುನಾವಣೆಯ ಉದ್ದೇಶಕ್ಕೆ ಬಳಸಿಕೊಳ್ಳಲಾಯಿತು. ದಾಳಿ ನಡೆದ ಮೂರನೇ ದಿನಕ್ಕೆ ಭಾಷಣ ಮಾಡಿದ ಪ್ರಧಾನಿ ಮೋದಿ, ದಾಳಿಯನ್ನು ತಮ್ಮ ಲಾಭಕ್ಕೆ ಬಳಸಿಕೊಂಡರು,” ಎಂದು ಸತ್ಯಪಾಲ್ ಮಲಿಕ್ ಸಂದರ್ಶನದ ವೇಳೆ ಹೇಳಿದ್ದಾರೆ.
ಇದನ್ನೂ ಓದಿ: Pulwama Attack: ಸರ್ಕಾರದ ತಪ್ಪಿನಿಂದಲೇ ಪುಲ್ವಾಮಾ ದಾಳಿ! ರಾಹುಲ್ ಗಾಂಧಿಗೆ ಸಂದರ್ಶನ ನೀಡಿದ ಸತ್ಯಪಾಲ್ ಮಲಿಕ್
ಪುಲ್ವಾಮಾ ದಾಳಿ ಯಾಕಾಗಿ ನಡೆಯಿತು. ಅವರು(ಸಿಆರ್‌ಪಿಎಫ್) ಐದು ವಿಮಾನಗಳನ್ನು ಕೇಳಿದ್ದರು. ಒಂದೊಮ್ಮೆ ನನಗೆ ಕೇಳಿದ್ದರೆ ನಾನು ಕೊಡುತ್ತಿದ್ದೆ. ಹಿಮದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳ ರಕ್ಷಣೆಗೆ ವಿಮಾನ ಒದಗಿಸಿದ್ದೇನೆ ನಾನು. ದಿಲ್ಲಿಯಿಂದ ಬಾಡಿಗೆ ಮೂಲಕ ವಿಮಾನಗಳನ್ನು ಪಡೆದುಕೊಳ್ಳುವುದು ತುಂಬ ಸುಲಭವಿತ್ತು. ಆದರೆ, ಇದಕ್ಕೆ ಸಂಬಂಧಿಸಿದ ಅರ್ಜಿ ಗೃಹ ಸಚಿವಾಲಯದಲ್ಲಿ ನಾಲ್ಕು ತಿಂಗಳವರೆಗೆ ಧೂಳು ಹಿಡಿದಿತ್ತು. ಬಳಿಕ, ಅರ್ಜಿಯನ್ನು ತಿರಸ್ಕರಿಸಲಾಯಿತು. ಅನಿವಾರ್ಯವಾಗಿ ಸಿಆರ್‌ಪಿಎಫ್ ಸಿಬ್ಬಂದಿ, ಅಸುರಕ್ಷಿತವಾಗಿರುವ ರಸ್ತೆ ಮಾರ್ಗ ಮೂಲಕ ಬರಬೇಕಾಯಿತು ಎಂದು ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.