Site icon Vistara News

ವಿಸ್ತಾರ ಸಂಪಾದಕೀಯ: ಸನಾತನ ಧರ್ಮ ಕುರಿತ ಕೋರ್ಟ್ ಅಭಿಮತ ಹಿಂದೂ ದ್ವೇಷಿಗಳ ಕಣ್ಣು ತೆರೆಸಲಿ

Sanathan Dharma

ಸನಾತನ ಧರ್ಮದ ಆಚರಣೆಗಳು ಶಾಶ್ವತ ಎಂದು ಮದ್ರಾಸ್ ಹೈಕೋರ್ಟ್ (Madras High Court) ಹೇಳಿದೆ. ‘ಸನಾತನ ಧರ್ಮವನ್ನು (Sanatana Dharma) ನಿರ್ಮೂಲನೆ ಮಾಡಬೇಕು’ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿದ ಹೇಳಿಕೆಯು‌ ದೇಶಾದ್ಯಂತ ವಿವಾದವನ್ನು ಸೃಷ್ಟಿಸಿರುವ ಹಿನ್ನೆಲೆಯಲ್ಲಿ ಈ ಮಾತು ಮಹತ್ವದ್ದಾಗಿದೆ.

“ಸನಾತನ ಧರ್ಮವು ಹಲವು ಶಾಶ್ವತ ಆಚರಣೆಗಳ ಗುಚ್ಛವಾಗಿದೆ. ಇದು ಒಂದು ದೇಶಕ್ಕೆ ಇರಬೇಕಾದ
ಕರ್ತವ್ಯ, ಗುರುವಿಗೆ ಇರಬೇಕಾದ ಗೌರವ, ರಾಜನಿಗೆ ತೋರಬೇಕಾದ ಮರ್ಯಾದೆಯಂತೆಯೇ ಹಲವು ಶಾಶ್ವತ ಕರ್ತವ್ಯಗಳ ಗುಚ್ಛವಾಗಿ ಸನಾತನ ಧರ್ಮ ರೂಪುಗೊಂಡಿದೆ. ಇಂತಹ ಆಚರಣೆಗಳನ್ನು ಹೇಗೆ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ? ಸನಾತನ ಧರ್ಮವು ಹಿಂದು ಜೀವನ ವಿಧಾನ ಆಗಿರಬಹುದು, ಯಾವುದೇ ಗ್ರಂಥಗಳಾಗಿರಬಹುದು. ಅದರ ಮೂಲ ಯಾವುದೇ ಆಗಿರಬಹುದು. ಅದನ್ನು ನಾಶಪಡಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಎನ್.ಶೇಷಸಾಯಿ ಹೇಳಿದ್ದಾರೆ.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಅಣ್ಣಾದೊರೈ ಅವರ ಜನ್ಮದಿನದ ಹಿನ್ನೆಲೆಯಲ್ಲಿ ತಿರು ವಿ.ಕ ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲರು, “ಸನಾತನ ಧರ್ಮಕ್ಕೆ ವಿರೋಧ” ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು ಅಭಿಪ್ರಾಯ ಮಂಡಿಸಬೇಕು ಎಂಬುದಾಗಿ ಸುತ್ತೋಲೆ ಹೊರಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ
ವಿಚಾರಣೆ ವೇಳೆ ನ್ಯಾಎನ್.ಶೇಷಸಾಯಿ ಅವರು ಸನಾತನ ಧರ್ಮದ ಕುರಿತು ಹೇಳಿದರು. ಹಾಗೆಯೇ,
ಪರೋಕ್ಷವಾಗಿ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನೂ ಅಲ್ಲಗಳೆದರು. “ಸನಾತನ ಧರ್ಮ ಎಂದರೆ ಅಸಮಾನತೆ, ಅಸ್ಪೃಶ್ಯತೆ ಎಂಬಂತೆ ಬಿಂಬಿಸಲಾಗಿದೆ. ಆದರೆ, ಸಂವಿಧಾನವೇ ಅಸ್ಪೃಶ್ಯತೆ, ಅಸಮಾನತೆಯನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳುತ್ತದೆ. ಇಷ್ಟಾದರೂ ಅಸಮಾನತೆ, ಅಸ್ಪೃಶ್ಯತೆ ಇರುವುದು ದುಃಖದ ವಿಚಾರ. ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಆದರೆ, ಇದು ದ್ವೇಷ ಹರಡಲು ಬಳಸಬಾರದು. ಯಾವುದೇ ಧರ್ಮದ ಆಚರಣೆ, ನಂಬಿಕೆಗಳಿಗೆ ಘಾಸಿಯಾಗುವ ಅಭಿವ್ಯಕ್ತಿ ಸರಿಯಲ್ಲ” ಎಂದು ಹೇಳಿದ್ದಾರೆ.

ತಮಿಳುನಾಡಿನ ಚೆನ್ನೈನಲ್ಲಿ ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ
ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇದನ್ನು ನಿರ್ಮೂಲನೆ ಮಾಡಬೇಕು’ ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ಸಾಮಾನ್ಯ ಜನರು ಕೂಡ ಉದಯನಿಧಿ ಸ್ಟಾಲಿನ್‌ ಹೇಳಿಕೆಯನ್ನು ಖಂಡಿಸಿದ್ದಾರೆ. ಉದಯನಿಧಿ ಹೇಳಿಕೆ ವಿರುದ್ಧ ಸುಪ್ರೀಂ ಕೋರ್ಟ್‌ಗೂ ಅರ್ಜಿ ಸಲ್ಲಿಸಲಾಗಿದೆ. ಇದರ ಬೆನ್ನಲ್ಲೇ ಉದಯನಿಧಿ ಸ್ಟಾಲಿನ್ ಅವರಿಗೆ ಕೋರ್ಟ್ ಪರೋಕ್ಷವಾಗಿ ಮಂಗಳಾರತಿ ಮಾಡಿದೆ.

ಇದನ್ನೂ ಓದಿ : Sanatana Dharma: ಸನಾತನ ಧರ್ಮ ಶಾಶ್ವತ ಎಂದ ಮದ್ರಾಸ್‌ ಹೈಕೋರ್ಟ್;‌ ಉದಯನಿಧಿಗೆ ಮಂಗಳಾರತಿ

ಸನಾತನ ಧರ್ಮ ಬೇರೆಯಲ್ಲ, ಹಿಂದೂ ಧರ್ಮ ಬೇರೆಯಲ್ಲ. ಎರಡೂ ಒಂದೇ ಆಗಿವೆ. ಸನಾತನ ಅಥವಾ ಹಿಂದೂ ಧರ್ಮ ಎಂಬುದು ಹಲವು ನಂಬಿಕೆ, ಆಚರಣೆ, ಸಂಪ್ರದಾಯ, ದೈವ ದೇವರುಗಳ ಸಮ್ಮಿಲನ. ಇದು ಯಾವುದೇ ಆಚರಣೆ ಅಥವಾ ನಂಬಿಕೆಗಳ ಕಠೋರ ಹೊರೆಯನ್ನು ವ್ಯಕ್ತಿಗಳ ಮೇಲೆ ಹೊರಿಸುವುದಿಲ್ಲ. ಹಿಂದೂ ಧರ್ಮದ ಈ ಮುಕ್ತತೆಯೇ ಇದರ ಸೌಂದರ್ಯ ಹಾಗೂ ಶಕ್ತಿ. ಉದಯನಿಧಿಯಂಥವರಿಗೆ ಬಾಯಿ ಸಡಿಲ ಬಿಡಲು ಸ್ವಾತಂತ್ರ್ಯ ನೀಡಿರುವ ಅಂಶವೂ ಇದೇ. ಇಲ್ಲಿ ಆಸ್ತಿಕರು ಇರುವಂತೆ ನಾಸ್ತಿಕರೂ ಇದ್ದಾರೆ. ಎಲ್ಲರೂ ಸೇರಿದ ಸಹಬಾಳ್ವೆ ಭಾರತದಲ್ಲಿ ಸಾಧ್ಯವಾಗಿದೆ. ಒಂದೇ ದೇವರು, ಒಂದೇ ಧರ್ಮಗ್ರಂಥ, ಒಂದೇ ಪುಣ್ಯಸ್ಥಳ ಹೊಂದಿರುವ ಮತಗಳ ಹಾಗಲ್ಲ ಇದು. ಹಲವು ಮತಗಳು ಇಲ್ಲಿ‌ ಕೂಡಿ ಬಾಳುವುದಕ್ಕೂ ಇದು ಆಧಾರವಾಗಿದೆ. ಹಲವು ಆಕ್ರಮಣಗಳಿಗೆ ತುತ್ತಾಗಿದ್ದರೂ ಜೀವಂತವಾಗಿದೆ. ಜಾತಿ ಪದ್ಧತಿ, ಅಸ್ಪೃಶ್ಯತೆಯಂತಹ ಹಲವು ಋಣಾತ್ಮಕ ಅಂಶಗಳಿದ್ದರೂ ಅವುಗಳನ್ನು ನಿವಾರಿಸಿಕೊಳ್ಳುತ್ತ, ಆಧುನಿಕತೆಗೆ ಸದಾ ಸ್ಪಂದಿಸುತ್ತ, ವಿಶಾಲವಾದ ಮನೋಧರ್ಮಕ್ಕೆ ಸದಾ ತೆರೆದುಕೊಳ್ಳುತ್ತ ಬಂದಿದೆ.

ಇಂಥ ಧರ್ಮ ವಿಶ್ವಾತ್ಮಕವಾದುದು. ಇದು ನಾಶವಾಗತಕ್ಕದ್ದಲ್ಲ. ಸನಾತನ ಧರ್ಮ ನಾಶವಾದರೆ ಮುಕ್ತ ಬದುಕಿನ ರೀತಿಯೇ ನಾಶವಾದಂತೆ. ಆದ್ದರಿಂದ, ಇದನ್ನು ನಾಶಮಾಡುವತ್ತ ತುಡಿಯುವ ಉದಯನಿಧಿಯಂಥವರು ಇದ್ದಂತೆ, ಮತ್ತೆ ಕಟ್ಟಿ ನಿಲ್ಲಿಸುವ ವಿವೇಕಿಗಳೂ ಸದಾ ಇರುತ್ತಾರೆ ಎಂಬುದಕ್ಕೆ ಕೋರ್ಟ್ ಮಾತು ಸಾಕ್ಷಿಯಾಗಿದೆ.

Exit mobile version